ಕಲಬುರಗಿ: ದೇಶದ ಜನರ ನೋವು ಅರ್ಥ ಮಾಡಿಕೊಳ್ಳದೆ ನೋಟು ಬ್ಯಾನ್ ಮಾಡಿ ನರೇಂದ್ರ ಮೋದಿ ಅವರೇ ಅನರ್ಥ ಮಾಡಿದ್ದಿರಿ. ನಿಮ್ಮ ಪ್ರಮಾದದಿಂದ ಉಂಟಾದ ಪರಿಸ್ಥಿತಿ ನೋಡಲು ಕಲಬುರಗಿಗೆ ಬನ್ನಿ ಎಂದು ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರಧಾನಿ ಮೋದಿ ಅವರಿಗೆ ಪತ್ರ ಕಳಿಸುವ ಮೂಲಕ ಪ್ರತಿಭಟನೆ ಮಾಡಿದರು.
ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಕಳುಹಿಸಲಾಯಿತು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ, ಹಾಲಿ ಶಾಸಕ ಖಮರುಲ್ ಇಸ್ಲಾಂ, ಮೋದಿ ಅವರೇ ನೀವು ನಿಮ್ಮ 50 ದಿನಗಳನ್ನು ನನಗೆ ಕೊಡಿ.
ದೊಡ್ಡದೊಂದು ಬದಲಾವಣೆ ಮಾಡುತ್ತೇನೆ ಎಂದು ದೇಶದ ಜನರಿಗೆ ನೆಮ್ಮದಿ ಕೊಡುವ ವಾಗ್ಧಾನ ಮಾಡಿದ್ದಿರಿ. ಆದರೆ ಆ 50 ದಿನಗಳಲ್ಲಿ ನೋಟು ಬ್ಯಾನ್ ಮಾಡಿ ಜನರ ನೆಮ್ಮದಿಯಲ್ಲ, ಇಡೀ ಜೀವನವನ್ನೇ ಕಸಿದು ಬಿಟ್ಟಿರಿ. ನಿಮ್ಮ ಹುಡುಗಾಟಿಕೆಯ ಕಪ್ಪು ಹಣ ಬಯಲು ಮಾಡುವ ದೊಡ್ಡ ಉಮೇದಿಗೆ ದೇಶದ ಜನರು ತತ್ತರಿಸಿದ್ದಾರೆ ಎಂದರು.
ಕೂಲಿ ಕಾರ್ಮಿಕರು, ಸಂಘಟಿಕ ವಲಯ, ಅಸಂಘಟಿತ ವಲಯದ ಕಾರ್ಮಿಕರು, ಸರಕಾರಿ ನೌಕರರು ಹಾಗೂ ಬೀದಿ ವ್ಯಾಪಾರಿಗಳು, ಗ್ರಾಮೀಣ ಭಾಗದಲ್ಲಿನ ಜನರು ಕಂಗಾಲಾಗಿದ್ದಾರೆ. ಅವರಿಗೆ ನೀವು ನೀಡಿರುವ ಭರವಸೆ ಆತ್ಮವಿಶ್ವಾಸವನ್ನು ಹಾಳು ಮಾಡಿದೆ. ಇಡೀ ದೇಶ ಆಂತರಿಕವಾಗಿ, ಆರ್ಥಿಕವಾಗಿ ಜರ್ಜರಿತಗೊಂಡಿದೆ.
ಕೂಡಲೇ ಇನ್ನಷ್ಟು ಜರ್ಜರಿತವಾಗುವ ಮುನ್ನವೇ ವ್ಯವಸ್ಥೆ ಸುಧಾರಿಸಿ, ಬ್ಯಾಂಕುಗಳು ಮಾಡುತ್ತಿರುವ ಹೊಸ ಹೊಸ ಕಾನೂನು, ಉಪಟಳ ತಡೆಯಿರಿ. ಇಲ್ಲವೇ ನಿಮಗೆ ಇನ್ನೂ ದೇಶದ ಜನರ ನೋವು ಅರ್ಥವಾಗಿಲ್ಲ ಎಂದರೆ ಕಲಬುರಗಿಗೆ ನಮ್ಮ ಕ್ಷೇತ್ರಕ್ಕೆ ಬನ್ನಿ.
ನಾವು ನಿಮಗೆ ಜನರ ನೋವು ಪರಿಚಯ ಮಾಡಿಸ್ತೀವಿ ಎಂದರು. ಶಹಾಬಜಾರ ಕಾಂಗ್ರೆಸ್ ಬ್ಲಾಕ್ ಕಮಿಟಿ ಅಧ್ಯಕ್ಷ ವಿಜಯಕುಮಾರ ಪಾಟೀಲ, ಉತ್ತರ ಬ್ಲಾಕಿನ ಅಧ್ಯಕ್ಷ ಹಾಗೂಮಾಜಿ ಜಿಡಿಎ ಅಧ್ಯಕ್ಷ ಮೊಹಮ್ಮದ ಅಸಗರ್ ಚುಲ್‌ಬುಲ್ ಹಾಗು ನೂರಾರು ಕಾರ್ಯಕರ್ತರು, ಮುಖಂಡರು ಇದ್ದರು.