Advertisement

ಅಕ್ಷರ ಗುಡಿ ರಥ ಎಳೆಯೋಣ ಬನ್ನಿ.

08:33 AM May 27, 2019 | Team Udayavani |

ಗದಗ: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವುದು, ಮೊದಲ ದಿನದಿಂದಲೇ ಮಕ್ಕಳು ಶಾಲೆಗೆ ಹಾಜರಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ಕೆಲ ವರ್ಷಗಳಿಂದ ಶಾಲಾ ಆರಂಭೋತ್ಸವ ದಿನವನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಶಾಲೆಗಳಿಗೆ ತಳಿರು-ತೋರಣ ಕಟ್ಟಿ, ಚಕ್ಕಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಪುಟಾಣಿಗಳನ್ನು ಆಕರ್ಷಿಸಲಾಗುತ್ತಿದೆ. ಮಧ್ಯಾಹ್ನ ಬಿಸಿಯೂಟದಲ್ಲಿ ಒಬ್ಬಟ್ಟು, ಪಾಯಸ, ಪೇಡೆ ಸೇರಿ ಹಬ್ಬದೂಟ ಉಣ ಬಡಿಸಲಾಗುತ್ತದೆ. ಅದರೊಂದಿಗೆ ಈ ಬಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೊದಲ ಬಾರಿ ‘ಅಕ್ಷರ ಗುಡಿ’ ರಥೋತ್ಸವ ನಡೆಸಲು ಸಿದ್ಧತೆ ನಡೆಸಿದೆ.

Advertisement

ಜಿಲ್ಲೆಯ ಪ್ರಮುಖ ಗುಡಿಗಳು, ಮಹಾನ್‌ ವ್ಯಕ್ತಿಗಳು ಮತ್ತು ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಇಲಾಖೆಯ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ಹಾಗೂ ಶಿಕ್ಷಣದ ಮಹತ್ವ ಸಾರುವುದು ‘ಅಕ್ಷರ ಗುಡಿ’ಯ ಆಶಯ. ಇದು 12 ಅಡಿ ಎತ್ತರವಿದ್ದು, ಷಟ್ಕೋನಾಕೃತಿಯಲ್ಲಿ ಐದು ಸ್ಥರದಲ್ಲಿ ಅಕ್ಷರ ಗುಡಿಯನ್ನು ನಿರ್ಮಿಸಲಾಗುತ್ತಿದೆ.

ಮೊದಲ ಸ್ಥರದಲ್ಲಿ ಜಿಲ್ಲೆಯ ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಜ| ತೋಂಟದಾರ್ಯ ಮಠ, ಲಕ್ಕುಂಡಿ ಸೇರಿದಂತೆ ಪ್ರಮುಖ 12 ದೇವಾಲಯಗಳ ಚಿತ್ರಪಟಗಳನ್ನು ಪ್ರದರ್ಶಿಸಲಾಗುತ್ತದೆ. ಎರಡನೇ ಸ್ಥರದಲ್ಲಿ ಕುಮಾರವ್ಯಾಸ, ಚಾಮರಸ, ಭೀಮಸೇನ ಜೋಶಿ, ಪಂ| ಪುಟ್ಟರಾಜಕವಿ ಗವಾಯಿಗಳು, ದೇಶದ ಸಹಕಾರಿ ರಂಗದ ಜನಕ ರಾಮನಗೌಡ ಸಿದ್ಧನಗೌಡ ಪಾಟೀಲ ಅವರ ಭಾವಚಿತ್ರಗಳಿಂದ ಅಲಂಕರಿಸಲಾಗುತ್ತದೆ.

ಮೂರನೇ ಸ್ಥರದಲ್ಲಿ ನಲಿಕಲಿ ಲೋಗೋ, ಕನ್ನಡ ಅಂಕಿ, ಅಕ್ಷರಗಳಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ನಾಲ್ಕನೇ ಸ್ಥರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟು ಮಂದಿ ಕನ್ನಡಿಗರ ಭಾವಚಿತ್ರಗಳು, ಐದನೇ ಸ್ಥರದಲ್ಲಿ ಕರ್ನಾಟಕ ಸರಕಾರದ ಲಾಂಛನ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಲಾಂಛನಗಳು ಹಾಗೂ ಕೊನೆಯದಾಗಿ ಗುಮ್ಮಟ ಹಾಗೂ ಕಳಶ, ‘ಅ’ ಅಕ್ಷರ ಧ್ವಜವನ್ನು ಹಾರಿಸಲಾಗುತ್ತದೆ.ಸ್ವಂತ ಖರ್ಚಿನಲ್ಲೇ ಗುಡಿ ಸಿದ್ಧ! ಶಾಲಾ ಆರಂಭೋತ್ಸವ ನಿಮಿತ್ತ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿರುವ ‘ಅಕ್ಷರ ಗುಡಿ’ ಸ್ತಬ್ಧ ಚಿತ್ರದ ಮೆರವಣಿಗೆಗೆ ಸರಕಾರದಿಂದ ಯಾವುದೇ ಅನುದಾನ ಲಭ್ಯವಿಲ್ಲ. ಆದರೂ, ಮಕ್ಕಳು-ಪಾಲಕರು ಮತ್ತು ಸಾರ್ವಜನಿಕರ ಆಕರ್ಷಣೆಗಾಗಿ ಸುಮಾರು 20 ಸಾವಿರ ರೂ.ಗಳನ್ನು ಅಧಿಕಾರಿಗಳೇ ವಂತಿಗೆ ಸೇರಿಸಿ, ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ: ಮೇ 30 ರಂದು ನಗರದ ಭೂಮರೆಡ್ಡಿ ವೃತ್ತದಲ್ಲಿರುವ ಬಸವೇಶ್ವರ ಶಾಲೆಯಿಂದ ಸರಕಾರಿ ಶಾಲೆ ನಂ.8ರವರೆಗೆ ನಡೆಯಲಿರುವ ಶಾಲಾ ಆರಂಭೋತ್ಸವ‌ ಮೆರವಣಿಗೆ ಹಾಗೂ ಕಲಾತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಲಿದೆ. ಅದರೊಂದಿಗೆ ಡಿಡಿಪಿಐ ರಚಿಸಿರುವ ಸಾಕ್ಷರತೆಯ ಹಿನ್ನೆಲೆಯ ಹಾಡು ಹಾಗೂ ಘೋಷವಾಕ್ಯಗಳೊಂದಿಗೆ ‘ಅಕ್ಷರ ಗುಡಿ’ ಮೆರವಣಿಗೆ ಸಾಗಲಿದೆ ಎಂದು ತಿಳಿದು ಬಂದಿದೆ.

Advertisement

ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಿರುವ ಈ ರೀತಿಯ ಶಾಲಾ ಪ್ರಾರಂಭೋತ್ಸವಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಾಲಾ ಪ್ರಾರಂಭೋತ್ಸವ ಎಂಬುದು ಮಕ್ಕಳಲ್ಲಿ ಹಬ್ಬದ ವಾತಾವರಣ ನಿರ್ಮಿಸಬೇಕು. ಮಕ್ಕಳಲ್ಲಿ ಶೈಕ್ಷಣಿಕ ವರ್ಷದ ಕೊನೆಯವರೆಗೂ ನೆನಪಿನಲ್ಲಿ ಉಳಿಯಬೇಕು ಎಂಬುದು ಇದರ ಪ್ರಯತ್ನ. ಜಿಲ್ಲೆ ಮತ್ತು ಪ್ರತಿ ತಾಲೂಕಿನಲ್ಲೂ ಅಕ್ಷರ ಗುಡಿ ನಿರ್ವಹಿಸಲು ಆದೇಶಿಸಿದ್ದೇನೆ. ಶಾಲಾ ಪ್ರಾರಂಭೋತ್ಸವಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತದೆ. -ಎನ್‌.ಎಚ್.ನಾಗೂರ, ಡಿಡಿಪಿಐ.

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next