ಸಮಯ ಕಾಲಿಗೆ ಚಕ್ರ ಕಟ್ಟಿಕೊಂಡಿದೆಯೇನೋ ಎಂಬತೆ ಓಡುತ್ತಿದೆ. ಅಯ್ಯೋ ಆ ಕಾಲವನ್ನೋ, ಸಮಯವನ್ನೋ ಒಮ್ಮೆ ತಡೆದು ನಿಲ್ಲಿಸುವಂತಿದ್ದರೆ ಎಷ್ಟು ಚೆನ್ನಾಗಿರುತಿತ್ತು!
ಬಾಲ್ಯ ಮುಗಿದು ಹೋಗಿದೆ. ಆದರೆ, ನೆನಪುಗಳು ಮುಗಿಯುವುದುಂಟೇ. ಉರುಳುತ್ತಿರುವ ಕಾಲಚಕ್ರವನ್ನು ಹಿಡಿದು ನಿಲ್ಲಿಸಿ ಹಿಂತಿರುಗಿ ನೋಡಿದರೆ ಕಳೆದಿರುವ ದಿನಗಳು ಅಲ್ಪ ಎನಿಸಿದರೂ, ಅಮೂಲ್ಯವಾದುದ್ದನ್ನೇ ಕಳೆದುಕೊಳ್ಳುತ್ತಿದ್ದೇವೇನೋ ಅನಿಸುತ್ತಿದೆ. ಹಿರಿಯರಿಗೆ, ಸಾಧಕರಿಗೆ, ಅತ್ಯುನ್ನತ ಹುದ್ದೆಗೇರಿದವರಿಗೆ ಬಾಲ್ಯವೆಂಬ ನೆನಪು ಇದ್ದೇ ಇರುತ್ತದೆ. ಅಮ್ಮನ ಜೋಗುಳ, ಕೈ ತುತ್ತಿನ ಜೊತೆಗೆ ಸಿಹಿಮುತ್ತು, ಅಪ್ಪನ ಬೆನ್ನ ಮೇಲಿನ ಕೂಸುಮರಿ, ಅಜ್ಜಿಯ ಕಟ್ಟು ಕಥೆಗಳು, ಸ್ವಲ್ಪ ಬುದ್ಧಿ ಬೆಳೆಯುತ್ತಿದ್ದಂತೆ ಸ್ನೇಹಿತರು- ಒಡಹುಟ್ಟಿದವರ ಜತೆಗೂಡಿ ಆಡಿದ ಮನೆಯಾಟ, ಮುಟ್ಟಾಟ, ಮರಕೋತಿ, ಕಣ್ಣಮುಚ್ಚಾಲೆ, ಕುಂಟೆಬಿಲ್ಲೆಯಂತಹ ಅಸಂಖ್ಯ ಬಾಲ್ಯದಾಟಗಳು ಬದುಕಿನ ಅಂತರ್ಜಲದಂತೆ ನೆನಪಿನ ಕೋಶದಲ್ಲಿ ಉಳಿದುಬಿಡುತ್ತವೆ.
ಒಂದಿಷ್ಟು ಜಗಳ, ಅಗಣಿತ ಪ್ರಶ್ನೆಗಳೊಂದಿಗೆ ಪ್ರಪಂಚವನ್ನೇ ಪರಿಶೋಧಿಸಲು ಹೊರಟು ಜೊತೆಯಲ್ಲಿರುವವರನ್ನು ಪೇಚಾಟಕ್ಕೆ ಸಿಲುಕಿಸಿ, ಅದೂ ತಿಳಿವಿಗೆ ಬಾರದೆ ತೋರುತ್ತಿದ್ದ ಮೊದ್ದುತನದ ಪ್ರಸಂಗಗಳು- ಹೀಗೆ ಪ್ರತಿಯೊಬ್ಬರ ಬಳಿಯೂ ಬಾಲ್ಯದ ನೆನಪುಗಳ ಸಂಪತ್ತು ಇದ್ದೇ ಇರುತ್ತವೆ. ನಿರಾಯಾಸವಾಗಿ ಅಪ್ಪಅಮ್ಮನ ಬೆಚ್ಚಗಿನ ಅಪ್ಪುಗೆಯಲ್ಲೋ, ಅಕ್ಕ-ಅಣ್ಣ, ತಮ್ಮ-ತಂಗಿ ಅಥವಾ ಸ್ನೇಹಿತರ ಗೊಡವೆಯಲ್ಲೋ ಕಳೆದ ಬದುಕಿನ ಅಮೂಲ್ಯ ಕ್ಷಣಗಳವು! ಇಂದಿನ ಸ್ಪರ್ಧಾತ್ಮಕ ಜಗತ್ತು, ಭೇದ-ಭಾವ, ತಾರತಮ್ಯ, ಗೊಂದಲಮಯ ಪ್ರಪಂಚದ ಪರಿವೇ ಇಲ್ಲದೆ, ಜೀವನದಲ್ಲಿ ಮತ್ತೆ ಬೇಕೆಂದರೂ ಬಾರದ ಕಳೆದುಹೋದ ದಿನಗಳವು. ಆದ್ದರಿಂದಲೇ ಮತ್ತೂಮ್ಮೆ ಬಾಲ್ಯದ ಲೋಕಕ್ಕೆ ಪಯಣಿಸಿ ಅಪ್ಪಅಮ್ಮನ ತೋಳುಗಳಲ್ಲಿ ಬೆಚ್ಚಗಿರಬೇಕು ಎನಿಸುತ್ತದೆ.
ಅಶ್ವಿನಿ ಶಾಸ್ತ್ರಿ
ಪ್ರಥಮ ಬಿ.ಎಡ್. ಡಾ. ಟಿ.ಎಂ.ಪೈ. ಶಿಕ್ಷಣ ಮಹಾವಿದ್ಯಾಲಯ, ಉಡುಪಿ