Advertisement

ಮರಳಿ ಬಾ ಗೆಳತಿ !

06:00 AM Sep 28, 2018 | |

    ನಾವು ಜೀವನವೆಂಬ ನಾಟಕದ ಪಾತ್ರಧಾರಿಗಳು. ಆ ನಾಟಕದ ನಾಯಕರು ನಾವು, ಆದರೆ ಅದರ ಮುಖ್ಯ ಪಾತ್ರಗಳನ್ನು ನಿಭಾಯಿಸುವ ಹಲವು ಕಲಾವಿದರಿರುತ್ತಾರೆ, ಅದರಲ್ಲಿ ಒಬ್ಬರು ಸಹ ನಟರಾಗಿರುತ್ತಾರೆ, ಅವರಿಗೊಂದು ಸುಂದರ ಹೆಸರಿದೆ ಗೆಳತಿ.

Advertisement

    ಪ್ರತಿಯೊಬ್ಬರ ಬದುಕಿನಲ್ಲೂ ಸ್ನೇಹವೆಂಬ ಕಥೆ ಅತಿ ಮುಖ್ಯವಾದ ತಿರುವನ್ನು ನೀಡುತ್ತದೆ. ಗೆಳೆತನ ಯಾವಾಗ ಶುರುವಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕಾಡುವುದು ಸ್ವಲ್ಪ ಕಷ್ಟ! ಅದರ ಆದಿ ಯಾವುದು ಎಂದು ಗೊತ್ತಿಲ್ಲ, ಅಂತ್ಯದ ಬಗ್ಗೆ ಹೇಳಬೇಕಾ! ನಾನು ಆದಿ-ಅಂತ್ಯ ಎಂಬ ನದಿಯ ನಡುವಿನಲ್ಲಿ ನಿಂತು ಯೋಚಿಸುತ್ತಿದ್ದೇನೆ. 

ಅವಳ ಪರಿಚಯವಾಗಿದ್ದು, ಮೂರನೆಯ ಕ್ಲಾಸಿನಲ್ಲಿ. ಹೊಸ ಶಾಲೆಗೆ ಸೇರಿದ್ದೆ, ಎಲ್ಲರೂ ಹೊಸಬರು, ಮನಸ್ಸಿಗೆ ಏನೋ ಭಯ. ಹೊಸ ಮಂದಿಯ ಜೊತೆ ಹೇಗಿರುತ್ತೇವೆಂಬ ಆತಂಕ. ಮೊದಲ ಬಾರಿ ಆ ಡಿಂಪಲ್‌ ಕೆನ್ನೆಯ ಹುಡುಗಿಯನ್ನು ನೋಡಿದೆ. ಅವಳು ನನ್ನತ್ತ ಬಂದವಳೇ ಹೆಸರೇನು ಅಂತ ಪ್ರಶ್ನಿಸಿದಳು. ಆ ಮುಖ ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚಹಸುರಾಗಿಯೇ ಇದೆ. ನನ್ನ ಬದುಕಿನ ಮೊದಲ ಗೆಳತಿಯವಳು. ಮಾತು ಬೆಳೆಯುತ್ತಾ ಹೇಗೋ ನಮಗೆ ಗೊತ್ತಿಲ್ಲದೇ ಆ ಅನ್ಯೋನ್ಯ ಬಂಧ ಹುಟ್ಟಿಕೊಂಡಿತು, ಬೆಳೆಯಿತು. ಪರಸ್ಪರ ಎಲ್ಲ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ ಜೊತೆಯಾಗಿ ಕಲಿತೆವು. ಚಿಕ್ಕದಿರುವಾಗ ರಜೆಯಲ್ಲಿ ಪತ್ರ ಬರೆಯುವ ಹುಚ್ಚು. ಅವಳು ನನಗೆ ಬರೆದ ಎಲ್ಲ  ಪತ್ರಗಳು ಇವತ್ತಿಗೂ ನನ್ನಲ್ಲಿ ಭದ್ರವಾಗಿದೆ. ಇಂದು ಅದನ್ನು ಓದುವಾಗ ಅದೇನೋ ಸಂಭ್ರಮ. ಅಕ್ಷರ ತಪ್ಪುಗಳನ್ನು ಕಂಡಾಗ ಬರುವ ನಗು, ಹುಚ್ಚು ಮನಸ್ಸಿನ ಭಾವನೆಗಳ ಆ ಪುಟ್ಟ ಸಾಲುಗಳು ನೆನಪಿನ ಪುಟಗಳನ್ನು ತೆರೆಯುತ್ತ ಹೋಗುತ್ತದೆ. ವರ್ಷಗಳು ಕಳೆಯುತ್ತಿದ್ದಂತೆ, ನಮ್ಮ ಸ್ನೇಹ ಗಟ್ಟಿಯಾಗುತ್ತ ಹೋಯಿತು. ಅಪ್ಪನ ಮರಣಾನಂತರ ಅಮ್ಮನೇ ಅವಳ ಪ್ರಪಂಚ. ನಾನು ಕಂಡ “ದಿ ಬೆಸ್ಟ್‌ ಲೇಡಿ’ ಎಂದರೆ ಅವಳ ಅಮ್ಮ. ಅಪ್ಪನ ಪ್ರೀತಿಯ ಕೊರತೆ ಮಕ್ಕಳಿಗೆ ಅರಿವಾಗದಂತೆ ಬೆಳೆಸಿದವರು. ಅವಳು ಸದಾ ಅಮ್ಮನ ಸಂತೋಷವನ್ನು ಬಯಸುವವಳು. ನಾನು ನನ್ನನ್ನು  ಅರಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ಅವಳು ನನ್ನನ್ನು ಅರ್ಥೈಸಿಕೊಂಡಿದ್ದಳು. ನಾನು ಹೇಳದಿದ್ದರೂ ನನ್ನ ದುಃಖವನ್ನು ಅರಿತವಳು. ನಾವಿಬ್ಬರೂ ಸದಾ ಜೊತೆಯಾಗಿದ್ದೆವು. ನಾವು ಶಾಲಾ ದಿನಗಳಲ್ಲಿ ಯೋಚಿಸುತ್ತಿದ್ದೆವು, ನಾವು ಪರಸ್ಪರ ಭೇಟಿಯಾಗದಿದ್ದರೆ?- ಆ ಪ್ರಶ್ನೆಗೆ ಉತ್ತರ ಸಿಗಲೂ ಇಲ್ಲ. ಬಹುಶಃ ಅದನ್ನು ಕಲ್ಪಿಸಿಕೊಳ್ಳಲು ನಮ್ಮಿಂದಾಗುವುದಿಲ್ಲ ಎನ್ನುವುದು ವಾಸ್ತವ ಆಗಿತ್ತು.

ಏಳು ವರ್ಷಗಳು ಜೊತೆಯಾಗಿ ಕಲಿತ ನಾವು, ಕೊನೆಗೊಂದು ದಿನ ಬೇರೆಯಾಗಲೇ ಬೇಕಾಯಿತು. ಕಾಲೇಜೆಂಬ ಹೊಸ ಪ್ರಪಂಚಕ್ಕೆ ಕಾಲಿರಿಸುವಾಗ ನಾವು ಜೊತೆಯಲ್ಲಿರಲಿಲ್ಲ. ನಮ್ಮ ಗುರಿ ಬೇರೆ ಬೇರೆ ಆಗಿರುವುದರಿಂದ ಹಾದಿಯೂ ವಿಭಿನ್ನವಾಗಿತ್ತು. ಅಂದು ಜೊತೆಯಾಗಿ ಭಾಗವಹಿಸಿದ ಕಲೋತ್ಸವದ ವೇದಿಕೆಗಳು, ಪರಸ್ಪರ ಅರಿತುಕೊಂಡು, ಪ್ರತಿ ಕಷ್ಟದಲ್ಲೂ ಜೊತೆಯಾಗಿದ್ದ ಆ ಶಾಲೆಯ ದಿನಗಳು- ಈ ರೀತಿ ಹಳೆಯ ನೆನಪುಗಳನ್ನು ಹೊತ್ತು ಭಾರವಾದ ಮನಸ್ಸಿನಿಂದ ಊರಿನ ಬಸ್ಸನ್ನೇರಿದೆ. ಒಂದು ತಿಂಗಳ ನಂತರ ಮನೆಯವರನ್ನು ನೋಡುವ ಸಂಭ್ರಮ ಒಂದೆಡೆಯಾದರೆ, ಗೆಳತಿಯನ್ನು ಭೇಟಿಯಾಗುವ ಖುಷಿ ಇನ್ನೊಂದೆಡೆ.

ಕೊನೆಗೂ ಅವಳನ್ನು ನೋಡಲಾಗಲಿಲ್ಲ. ಆದರೆ, ಅವಳ ನೆನಪು ಮಾತ್ರ ನೆನಪಿನಾಳದಲ್ಲಿ ಹುದುಗಿಹೋಗಿದೆ. ಅವಳೆಲ್ಲಿದ್ದರೂ ಸುಖವಾಗಿರಲಿ ಎಂಬುದೇ ನನ್ನ ಆಸೆ.

Advertisement

ಅನಘಾ ಶಿವರಾಮ್‌ 
ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next