Advertisement

ನೋಡ ಬನ್ನಿ ಹಿರೇಹಳ್ಳದ ದಿಡಗಿನ ವೈಯಾರ

12:39 PM Sep 20, 2019 | Suhan S |

ಗುಳೇದಗುಡ್ಡ: ಪಟ್ಟಣದಲ್ಲಿ ಬುಧವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ಹಿರೇ ಹಳ್ಳದ ದಿಡಗಿನ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಗುಳೇದಗುಡ್ಡ ಭಾಗದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಈ ಹಿರೇಹಳ್ಳದ ದಿಡಗಿನ ಜಲಪಾತ ಹರಿದಿರಲಿಲ್ಲ. ಆದರೆ ಬುಧವಾರ ರಾತ್ರಿ ಸುರಿದ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿದೆ.

Advertisement

ಬಿಸಿಲು ಬಿದ್ದರೇ ಮೈದುಂಬುವ ಜಲಪಾತ: ಹಿರೇಹಳ್ಳದ ದಿಡಗಿನ ಜಲಪಾತ ಈ ಭಾಗದಲ್ಲಿ ಪ್ರಸಿದ್ಧ ಜಲಪಾತವಾಗಿದ್ದು, ಸತತ ಎಡೆಬಿಡದೇ ಮಳೆಯಾಗಿ ಬಿರುಬಿಸಿಲು ಬಿದ್ದರೆ ಜಲಪಾತ ಮೈದುಂಬಿ ಹರಿಯುತ್ತದೆ. ಸುಮಾರು 35 ಅಡಿ ಎತ್ತರದಿಂದ ನೀರು ಬೀಳುವ ಮೂಲಕ ಈ ಭಾಗದಲ್ಲಿ ಸುಂದರ ಜಲಪಾತ ಸೃಷ್ಟಿಯಾಗುತ್ತದೆ. ಬೆಟ್ಟ ಗುಡ್ಡಗಳ ಹಸಿರು ಸಿರಿಯ ಮಧ್ಯೆ ಹಾಲಿನ ನೊರೆಯಂತೆ ಹರಿಯುವ ಜಲಪಾತ ನೋಡುವುದೇ ಮನಮೋಹಕ.

ಹೋಗುವ ಮಾರ್ಗ: ಜಲಪಾತಕ್ಕೆ ಗುಳೇದಗುಡ್ಡದಿಂದ ಯಾವುದೇ ದಿಕ್ಕಿನಿಂದಾದರೂ ಗುಡ್ಡ ಹತ್ತಿ ಹೋಗಬಹುದು, ಕೋಟೆಕಲ್‌ ಹುಚ್ಚೇಶ್ವರಮಠದ ಹಿಂದಿನ ಮಾರ್ಗವಾಗಿ ಮೂರು ಕಿ.ಮೀ. ವರೆಗೆ ವಾಹನದೊಂದಿಗೆ ಹೋಗಲು ರಸ್ತೆ ಇದೆ. ನಂತರ ಒಂದು ಕಿ.ಮೀ ಗುಡ್ಡದಲ್ಲಿ ಸಾಗಿದರೆ ಜಲಪಾತದ ಜುಳು-ಜುಳು ನಾದ ಕೇಳುತ್ತದೆ. ಈ ನಾದಕ್ಕೆ ಕಿವಿಯೊಡ್ಡಿ ಸಾಗಿದರೇ ಕಾಣ ಸಿಗುವುದೇ ಹಿರೇದಿಡಿಗಿನ ಹಳ್ಳದ ಜಲಪಾತ.

ಒನ್‌ಡೇ ಪಿಕ್‌ನಿಕ್‌: ಗುಳೇದಗುಡ್ಡ ಅನೇಕ ಇತಿಹಾಸಕ್ಕೆ ಹೆಸರು ವಾಸಿಯಾಗಿದೆ. ಜಲಪಾತವು ಇದಕ್ಕೆ ಸಾಕ್ಷಿಯಾಗಿದ್ದು, ಒನ್‌ಡೇ ಪಿಕ್‌ನಿಕ್‌ ಗೆ ಸೂಕ್ತ ಸ್ಥಳವಾಗಿದೆ. ಹೀಗಾಗಿ ಈ ಜಲಪಾತ(ದಿಡಗು) ಕುರಿತು ಹೆಚ್ಚು ಜನರಿಗೆ ಗೊತ್ತಿರದಿದ್ದರೂ ಈ ಭಾಗದ ಜನರಿಗೆ ಚಿರಪರಿಚಿತ. ಹೀಗಾಗಿ ಹೆಚ್ಚು ಜನರು ಕುಟುಂಬ ಸಮೇತ ಹೋಗುತ್ತಾರೆ. ಈ ಭಾಗದಲ್ಲಿ ಜಲಪಾತಕ್ಕೆ ದಿಡಗು ಎಂಬ ಹೆಸರಿನಿಂದ ಕರೆಯುತ್ತಾರೆ.

ಈ ಜಲಪಾತದ ಹತ್ತಿರವೇ ಒಂದು ಬಾವಿಯಿದ್ದು, ಈ ಬಾವಿಯಲ್ಲಿ ವರ್ಷಪೂರ್ತಿ ನೀರು ಇರುವುದರಿಂದ ಗುಡ್ಡದಲ್ಲಿ ಮೇಯಲು ಹೋಗುವ ಎಮ್ಮೆ, ಆಕಳು, ಎತ್ತು, ಕುರಿ ಹಾಗೂ ಕಾಡುಪ್ರಾಣಿಗಳಿಗೆ ನೀರಿನ ದಾಹ ತಣಿಸುವ ಜಲಧಾರಿಯಾಗಿದೆ. ಇದು ಎಂತಹ ಬೇಸಿಗೆಯಲ್ಲೂ ಬತ್ತಿಲ್ಲದಿರುವುದು ವಿಶೇಷವಾಗಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಸ್ವಲ್ಪ ರಿಲ್ಯಾಕ್ಸ್‌ ಆಗಲು ಮತ್ತು ಒಂದು ದಿನದ ಪ್ರವಾಸಕ್ಕೆ ಈ ಜಲಪಾತ ಸೂಕ್ತ ಸ್ಥಳವಾಗಿದೆ. ಮಳೆಗಾಲದಲ್ಲಿ ಮಾತ್ರ ಕಾಣ ಸಿಗುವ ಈ ಜಲಪಾತ ತನ್ನ ಪ್ರಕೃತಿ ಸೊಬಗಿನಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

Advertisement

 

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next