ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಮಾದಕ ವಸ್ತು ಜಾಲ ಮಟ್ಟಹಾಕಿ, ವಿದ್ಯಾರ್ಥಿ-ಯುವಕರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪೋಷಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ವತಿಯಿಂದ ಸೋಮವಾರ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮಾದಕ ವಸ್ತುಗಳ ಬಳಕೆ ತಡೆಗಟ್ಟುವ ಸಮಾವೇಶ’ ಹಾಗೂ ಬೆಂಗಳೂರು ನಗರದ ಶಿಕ್ಷಕರು, ಪ್ರಾಂಶುಪಾಲರು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮುಖ್ಯಸ್ಥರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ-ಯುವಕರು ಮಾದಕ ಪದಾರ್ಥಗಳ ಚಟಕ್ಕೆ ಬಲಿಯಾಗದಂತೆ ತಡೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದು ಪೊಲೀಸರಿಂದ ಮಾತ್ರ ಸಾಧ್ಯವಾಗುವ ಕಾರ್ಯವಲ್ಲ. ಪೊಲೀಸರೊಂದಿಗೆ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಪೋಷಕರು ಕೈ ಜೋಡಿಸಿದರೆ ಖಂಡಿತವಾಗಿ ಈ ಪಿಡುಗಿನಿಂದ ಕರ್ನಾಟಕ ಮತ್ತು ಬೆಂಗಳೂರನ್ನು ಮುಕ್ತ ಮಾಡಬಹುದು ಎಂದು ತಿಳಿಸಿದರು.
ಕಿರುಚಿತ್ರ ಪ್ರದರ್ಶನ: ಡ್ರಗ್ಸ್ ಚಟಕ್ಕೆ ಬಲಿಯಾಗಿ ದುರಂತ ಅಂತ್ಯ ಕಂಡ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರ ದಾರುಣ ಕಥನ ಹೇಳುವ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ನಿರ್ಮಿಸಿದ “ಪರವಶ’ ಹಾಗೂ ಬೆಂಗಳೂರು ನಗರ ಪೊಲೀಸರು ಸಾದರಪಡಿಸಿದ “ವಿದಾಯ’ ಕಿರುಚಿತ್ರಗಳನ್ನು ಈ ವೇಳೆ ಪ್ರದರ್ಶಿಸಲಾಯಿತು. ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು “ಹಾರ್ಲಿ ಡೆವಿಡ್‌ಸನ್’ ತಂಡದ ಬೈಕ್ ರ್ಯಾಲಿಗೆ ಗೃಹ ಸಚಿವರು ಚಾಲನೆ ನೀಡಿದರು.
ಡ್ರಗ್ಸ್ ಹಾವಳಿ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು ನಗರ ಪೊಲೀಸರು ಸಿದ್ಧಪಡಿಸಿರುವ ಭಿತ್ತಿಪತ್ರ, ಸಿ.ಡಿ.ಗಳನ್ನು ಇದೇ ವೇಳೆ ಪರಮೇಶ್ವರ ಬಿಡುಗಡೆಗೊಳಿಸಿದರು. ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ಕಾಲ ತಂಡಗಳ ಕಲಾವಿದರು ನೃತ್ಯ, ಬೀದಿ ನಾಟಕ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ, ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳೆಯರ “ಡಿ ಅಡಿಕ್ಷನ್’ ವಾರ್ಡ್: ಇತ್ತೀಚಿನ ವರ್ಷಗಳಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗಾಗಿ ಪ್ರತ್ಯೇಕ “ಡಿ-ಅಡಿಕ್ಷನ್’ ವಾರ್ಡ್ ಸ್ಥಾಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ ಹೇಳಿದರು.
ನಾಲ್ಕು ವರ್ಷಗಳ ಹಿಂದೆ ನಿಮ್ಹಾನ್ಸ್‌ನಲ್ಲಿ ಪುರುಷರಿಗಾಗಿ 60 ಹಾಸಿಗೆಗಳ ಡಿ-ಅಡಿಕ್ಷನ್ ವಾರ್ಡ್ ಸ್ಥಾಪಿಸಲಾಗಿದೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮಹಿಳೆಯರಿಗಾಗಿ ಕನಿಷ್ಟ 25 ಹಾಸಿಗೆಗಳ ಡಿ-ಅಡಿಕ್ಷನ್ ವಾರ್ಡ್ ಸ್ಥಾಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
10 ವರ್ಷಗಳ ಹಿಂದೆ ಕುಡಿತ ಅಥವಾ ಮಾದಕ ಪದಾರ್ಥಗಳ ವ್ಯಸನಕ್ಕೆ ಬಲಿಯಾಗುವವರ ಸರಾಸರಿ ವಯಸ್ಸು 35 ವರ್ಷ ಆಗಿತ್ತು. ಆದರೆ, ಅದು ಈಗ 25 ವರ್ಷಕ್ಕೆ ಇಳಿದಿದೆ. ಚಿಕ್ಕ ವಯಸ್ಸಿನವರೇ ಮಾದಕ ವ್ಯವನಿಗಳಾಗುತ್ತಿದ್ದು, ಮಾದಕ ಪದಾರ್ಥಗಳನ್ನು ಮೊದಲ ಬಾರಿ ಪ್ರಯೋಗ ಮಾಡುವವರಲ್ಲಿ ಹದಿಹರೆಯದವರ ಸಂಖ್ಯೆಯೇ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದರು.