ಕುಣಿಗಲ್: ದೈಹಿಕ, ಮತ್ತು ಉತ್ತಮ ಆರೋಗ್ಯ ವೃದ್ಧಿಗೆ ಕ್ರೀಡೆ ಪೂರಕ. ಪೌರಕಾರ್ಮಿಕರು ಕರ್ತವ್ಯದ ಜತೆಗೆ ಕ್ರೀಡೆಯನ್ನೂ ಮೈಗೂಡಿಸಿಕೊಳ್ಳ ಬೇಕೆಂದು ಪುರಸಭಾ ಮುಖ್ಯಾಧಿಕಾರಿ ಆರ್. ರಮೇಶ್ ತಿಳಿಸಿದರು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಶಾಲಾ ಮೈದಾನದಲ್ಲಿ ಪುರಸಭೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ಮಾತನಾಡಿದರು.
ಪ್ರತಿಭೆ ಹಂಚಿ: ಕಾರ್ಮಿಕರ ನಿರಂತರ ಶ್ರಮದಿಂದ ಪಟ್ಟಣ ಸ್ವಚ್ಛವಾಗಿದೆ. ಇದರಿಂದ ನಾಗರಿಕರು ಆರೋಗ್ಯವಂತರಾಗಿರಲು ಸಹಕಾರಿಯಾಗಿದೆ. ಆದರೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಪೌರಕಾರ್ಮಿಕರು ಕ್ರೀಡೆ ಹಾಗೂ ಮನೋರಂಜನೆ ಚಟುವಟಿಕೆಯಿಂದ ದೂರವಾಗಿರುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಕಾರ್ಮಿಕರು ಕರ್ತವ್ಯದ ಜತೆಗೆ ಕ್ರೀಡೆ ಹಾಗೂ ಮನರಂಜನೆ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಪ್ರತಿಭೆ ಹಾಗೂ ಹಿರಿಮೆ ಹಂಚಿಕೊಳ್ಳಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿವೆ ಎಂದರು.
ಕ್ರೀಡಾ ಪಂದ್ಯಗಳಲ್ಲಿ ಸೋಲು-ಗೆಲುವು ಮುಖ್ಯ ವಲ್ಲ. ಭಾಗವಹಿಸುವುದು ಮುಖ್ಯ. ಪೌರ ಕಾರ್ಮಿ ಕರು ಆರೋಗ್ಯದತ್ತ ಹೆಚ್ಚುಗಮನ ಹರಿಸಬೇಕು. ಕಾರ್ಮಿಕರಿಗೆ ವರ್ಷಕ್ಕೊಮ್ಮೆ ಶೂ, ಗ್ಲೌಸ್ ಸೇರಿ ಇತರ ಪರಿಕರ ತಿಂಗಳಿಗೊಮ್ಮೆ ವಿತರಿಸಿ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದನ್ನು ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆರೋಗ್ಯದಿಂದ ವಂಚಿತ: ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಪರಿಸರ ಎಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಮಳೆ, ಚಳಿ, ಗಾಳಿ ಎನ್ನದೇ ಪಟ್ಟಣದ ಸ್ವತ್ಛತೆಗೆ ಪೌರಕಾರ್ಮಿಕರು ಚರಂಡಿ ಸ್ವತ್ಛತೆ ಮಾಡುವುದರ ಜತೆಗೆ ರಸ್ತೆಯಲ್ಲಿ ಬಿದ್ದ ಕಸ ಕಡ್ಡಿಗಳು ತೆಗೆದು ಪಟ್ಟಣ ಸ್ವತ್ಛತೆಗೊಳಿಸುವ ಮೂಲಕ ಪಟ್ಟಣದ ಸೌಂದರ್ಯಕ್ಕೆ ಶ್ರಮಿಸುತ್ತಿರುವರು. ಆದರೆ ಕ್ರೀಡೆ ಮತ್ತು ಮನರಂಜನೆಯಿಂದ ದೂರಉಳಿದು ತಮ್ಮ ದೈಹಿಕ ಆರೋಗ್ಯದಿಂದ ವಂಚಿತ ರಾಗಿದ್ದಾರೆ. ಇದನ್ನು ಮನಗಂಡು ಸರ್ಕಾರ ಪೌರಕ ಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ಅವರಲ್ಲಿನ ಪ್ರತಿಭೆ ಗುರುತಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಪುರಸಭೆಯಿಂದ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸ್ಪರ್ಧೆಗಳು: ಪುರುಷ ಹಾಗೂ ಮಹಿಳಾ ಪೌರ ಕಾರ್ಮಿಕರಿಗೆ ಗುಂಡು ಎಸೆತ, 100 ಮೀಟರ್ ಓಟ, ಕಬಡ್ಡಿ, ಮ್ಯೂಸಿಕಲ್ ಚೇರ್, ಚೆಂಡು ಎಸೆತ ಸೇರಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಆರೋಗ್ಯ ನಿರೀಕ್ಷಕರಾದ ವೆಂಕಟರಮಣಪ್ಪ, ಮಮತಾ, ದೈಹಿಕ ಶಿಕ್ಷಕ ಲೋಕೇಶ್ ಇದ್ದರು.