ಕೋಲಾರ: 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬುಧವಾರ ಸಮ್ಮೇಳನ ನಡೆಯುವ ಟಿ.ಚನ್ನಯ್ಯ ರಂಗಮಂದಿರದ ಶತಶೃಂಗ ಪರ್ವತ ಮಹಾದ್ವಾರದ ಆವರಣದಲ್ಲಿ ಮೂರು ಧ್ವಜಗಳನ್ನು ಆರೋಹಣೆ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರಧ್ವಜವನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆರೋಹಣ ಮಾಡಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ರಕ್ತಗತವಾಗಿ ಸುಪ್ತವಾಗಿರುವ ಕನ್ನಡ ಪ್ರಜ್ಞೆಯನ್ನು ಕನ್ನಡಕ್ಕೆ ಸವಾಲು ಎದುರಾಗಿರುವ ಸಂದರ್ಭದಲ್ಲಿ ಒಗ್ಗೂಡಿಸಬೇಕೆಂದು ತಿಳಿಸಿದರು.
ಇದನ್ನೂ ಓದಿ:ಸರ್ಕಾರಿ ಶಾಲಾ ಕಾಲೇಜಿಗೆ ಮೂಲ ಸೌಲಭ್ಯ ಒದಗಿಸಿ
ಕನ್ನಡ ಧ್ವಜವನ್ನು ಸಾಹಿತಿ ಕವಿ ಕೋಟಿಗಾನಹಳ್ಳಿ ರಾಮಯ್ಯ ಆರೋಹಣೆ ಮಾಡಿ, ದೇಶಾದ್ಯಂತ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಘಟನಾವಳಿ ಆಧರಿಸಿ ಬರೆದ ಬಾಬಾ ಅಂಬೇಡ್ಕರ್ ಎಂಬ ಪದ್ಯವನ್ನು ವಾಚಿಸಿದರು. ಕಸಾಪ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್ ಆರೋಹಣ ಮಾಡಿದರು. ಭಾರತ ಸೇವಾದಳದ ಎಂ.ಬಿ.ದಾನೇಶ್ ಧ್ವಜ ನಿರ್ವಹಣೆ ಮಾಡಿದರು. ಸುಲೇಮಾನ್‌ಖಾನ್‌ರಿಂದ ರಾಷ್ಟ್ರಗೀತೆ ಹಾಗೂ ನಾಡಗೀತೆಗಳ ಗಾಯನ ನಡೆಯಿತು. ಸಿ.ಪುಟ್ಟರಾಜು ನಿರೂಪಿಸಿ, ಎಂ.ಎಸ್. ಶ್ರೀನಿವಾಸ್ ಮಾಗೇರಿ ಸ್ವಾಗತಿಸಿ, ಎನ್.ಮುನಿರಾಜು ನಿರ್ವಹಣೆ ಮಾಡಿ, ವಿ.ತಿಲಕ್ ವಂದಿಸಿದರು.