Advertisement

ಅಭ್ಯರ್ಥಿ ಆಯ್ಕೆಗಾಗಿ ಮೈತ್ರಿ ಒಳಜಗಳ

12:56 AM May 11, 2019 | Team Udayavani |

ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್‌ಗಳ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಒಳ ಜಗಳ ಉಂಟಾಗಿದ್ದು, ಇದರ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.

Advertisement

ಎರಡು ವಾರ್ಡ್‌ಗಳ ಪೈಕಿ ತಲಾ ಒಂದು ವಾರ್ಡ್‌ ಹಂಚಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ನಿರ್ಧರಿಸಿದ್ದು, ಎರಡೂ ವಾರ್ಡ್‌ಗಳಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಲು ಯೋಜನೆ ರೂಪಿಸಿದ್ದವು. ಆದರೆ, ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಮೈತ್ರಿ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕಾವೇರಿಪುರ ವಾರ್ಡ್‌ ಪಾಲಿಕೆ ಸದಸ್ಯೆ ರಮೀಳಾ ಉಮಾಶಂಕರ್‌ ಹಾಗೂ ಸಗಾಯಪುರ ವಾರ್ಡ್‌ ಪಾಲಿಕೆ ಸದಸ್ಯ ಏಳುಮಲೈ ಅಕಾಲಿಕ ನಿಧನದಿಂದ ತೆರವಾಗಿರುವ ಪಾಲಿಕೆ ಸದಸ್ಯರ ಸ್ಥಾನಕ್ಕೆ ಮೇ 29ರಂದು ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಎರಡೂ ವಾರ್ಡ್‌ಗಳಲ್ಲಿ ಅನುಕಂಪದ ಆಧಾರದ ಮೇಲೆ ಮೃತ ಸದಸ್ಯರ ಕುಟುಂಬದವರಿಗೆ ಟಿಕೆಟ್‌ ನೀಡುವ ಬಗ್ಗೆ ಪರ-ವಿರುದ್ಧ ಚರ್ಚೆಗಳು ನಡೆಯುತ್ತಿವೆ.

ಇದರ ನಡುವೆ ಟಿಕೆಟ್‌ ತಮಗೇ ನೀಡಬೇಕೆಂದು ಪಾಲಿಕೆ ಮಾಜಿ ಸದಸ್ಯರು ಎರಡೂ ಪಕ್ಷಗಳ ಮುಖಂಡ ಬೆನ್ನುಬಿದ್ದಿದ್ದಾರೆ. ಒಂದೊಮ್ಮೆ ಪಕ್ಷದಿಂದ ಟಿಕೆಟ್‌ ದೊರೆಯದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸಲು ಕೆಲವರು ಸಜ್ಜಾಗಿರುವುದು ಮೈತ್ರಿ ನಾಯಕರಿಗೆ ತಲೆನೋವಾಗಿದೆ.

ಕಾವೇರಿಪುರ ವಾರ್ಡ್‌ನಲ್ಲಿ ಸಹೋದರಿ ಜಯಲಕ್ಷ್ಮಮ್ಮ ಅವರಿಗೆ ಜೆಡಿಎಸ್‌ನಿಂದ ಟಿಕೆಟ್‌ ದೊರೆಯುತ್ತದೆ ಎಂದು ಮೃತ ರಮೀಳಾ ಪತಿ ಉಮಾಶಂಕರ್‌ ಭಾವಿಸಿದ್ದರು. ಆದರೆ, ಜೆಡಿಎಸ್‌ ವರಿಷ್ಠರು ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ನಗರ ಘಟಕ ಅಧ್ಯಕ್ಷ ಪ್ರಕಾಶ್‌ಗೆ ವಹಿಸಿದ್ದು, ಯಾವುದೇ ಕಾರಣಕ್ಕೂ ಉಮಾಶಂಕರ್‌ ಸಂಬಂಧಿಕರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಹೇಳಿದ್ದಾರೆ.

Advertisement

ಇದು ಉಮಾಶಂಕರ್‌-ಪ್ರಕಾಶ್‌ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದು, ಕಾವೇರಿಪುರ ಜೆಡಿಎಸ್‌ನಲ್ಲಿ ಒಳಜಗಳ ಆರಂಭವಾಗಿದೆ. ಅದನ್ನು ಬಂಡವಾಳ ಮಾಡಿಕೊಳ್ಳಲು ಯೋಜನೆ ರೂಪಿಸಿರುವ ಬಿಜೆಪಿ, ಪಾಲಿಕೆ ಮಾಜಿ ಸದಸ್ಯ ಚನ್ನಪ್ಪ ಅವರ ಪುತ್ರಿ ಪಲ್ಲವಿ ಅವರನ್ನು ಕಾವೇರಿಪುರದಿಂದ ಕಣಕ್ಕಿಳಿಸಲು ಯೋಜನೆ ರೂಪಿಸಿದೆ. ಜತೆಗೆ ಉಮಾಶಂಕರ್‌ರನ್ನು ಬಿಜೆಪಿಗೆ ಸೆಳೆದು, ಮೈತ್ರಿ ಆಡಳಿತಕ್ಕೆ ಹಿನ್ನಡೆ ಉಂಟು ಮಾಡಲು ಯೋಜಿಸಿದೆ.

ಸಗಾಯಪುರದಲ್ಲಿ ಅಸಮಾಧಾನ: ಏಳುಮಲೈ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ ಉಪಚುಣಾವಣೆಯಲ್ಲಿ ಅವರ ಪತ್ನಿ ಲೀನಾ ಅವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಮುಂದಾಗಿತ್ತು. ಆದರೆ, ಲೀನಾಗೆ ಟಿಕೆಟ್‌ ನೀಡಿದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಏಳುಮಲೈ ಸಹೋದರ ತಿಳಿಸಿದ ಹಿನ್ನೆಲೆಯಲ್ಲಿ, ಏಳುಮಲೈ ಸಹೋದರಿ ಪಳನಿಯಮ್ಮಾಳ್‌ಗೆ ಟಿಕೆಟ್‌ ನೀಡುವುದು ಬಹುತೇಕ ಖಚಿತವಾಗಿದೆ.

ಇದರ ನಡುವೆ ಏಳುಮಲೈ ಕುಟುಂಬದಲ್ಲಿ ಉಂಟಾಗಿರುವ ಗೊಂದಲಗಳನ್ನು ಲಾಭ ಮಾಡಿಕೊಳ್ಳಲು ಪಾಲಿಕೆ ಮಾಜಿ ಸದಸ್ಯೆ ಮಾರಿಮುತ್ತು ಮುಂದಾಗಿದ್ದು, ಜೆಡಿಎಸ್‌ನಿಂದ ಟಿಕೆಟ್‌ ದೊರೆಯದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇನ್ನು ಪೌರಕಾರ್ಮಿಕರ ಮುಖಂಡರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ರೂಪಿಸಿದೆ ಎನ್ನಲಾಗಿದೆ.

ಒಟ್ಟಾರೆ ಎರಡೂ ಪಕ್ಷಗಳಲ್ಲಿ ಉಂಟಾಗಿರುವ ಒಳಜಗಳದ ಲಾಭ ಪಡೆಯಲು ಸದ್ದಿಲ್ಲದೆ ಯೋಜನೆ ರೂಪಿಸಿರುವ ಬಿಜೆಪಿ, ಎರಡೂ ವಾರ್ಡ್‌ಗಳಲ್ಲಿ ಗೆದ್ದು, ಪಾಲಿಕೆಯಲ್ಲಿ ತನ್ನ ಬಲವನ್ನು 103ಕ್ಕೆ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಒಂದೊಮ್ಮೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಕೊನೆಯ ಅವಧಿಯ ಮೇಯರ್‌ ಚುನಾವಣೆಯಲ್ಲಿ ಮತ್ತೆ ಸಂಖ್ಯಾಬಲದ ಲೆಕ್ಕಾಚಾರ ಮುನ್ನೆಲೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next