Advertisement

ಸಾಂಕ್ರಾಮಿಕ ರೋಗ ತಡೆಗೆ ಕೈ ಜೋಡಿಸಿ: ನೀರಜ್‌

05:31 PM Jun 29, 2018 | Team Udayavani |

ಚಿತ್ರದುರ್ಗ: ಡೆಂಘೀ, ಮಲೇರಿಯಾ ರೋಗ ನಿಯಂತ್ರಣ ಮಾಡುವುದು ಸಮುದಾಯದ ಜವಾಬ್ದಾರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಬಿ.ವಿ. ನೀರಜ್‌ ಹೇಳಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡೆಂಘೀ ನಿಯಂತ್ರಣ ಹಾಗೂ ಮಲೇರಿಯಾ ರೋಗಗಳ ಬಗ್ಗೆ ಪತ್ರಿಕಾ ಪ್ರತಿನಿಧಿಗಳಿಗೆ ಹಾಗೂ ಮಾಧ್ಯಮದವರಿಗೆ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಲೇರಿಯಾ ಮತ್ತು ಡೆಂಘೀ ಬರುವುದು ಸೊಳ್ಳೆಗಳಿಂದ. ಆದ್ದರಿಂದ ಸಾರ್ವಜನಿಕರು ತಮ್ಮ ಮನೆ ಸುತ್ತ ಮುತ್ತ ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸ್ವತ್ಛತೆ ಕಾಪಾಡಬೇಕು. ಸೊಳ್ಳೆ ಪರದೆ ಬಳಕೆ, ಕೀಟನಾಶಕ ಸಿಂಪರಣೆ ಮೂಲಕ ಸೊಳ್ಳೆಗಳನ್ನು ನಿಯಂತ್ರಣ ಮಾಡಬಹುದು. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಬೇಕು ಎಂದರು. 

ನೀರು ನಿಲ್ಲುವ ಮೂಲಗಳಲ್ಲಿ ಸದಾ ಎಚ್ಚರಿಕೆ ವಹಿಸಬೇಕು. ಹೊಸದಾಗಿ ಮನೆಗಳ ನಿರ್ಮಾಣ ಮಾಡುವವರು ತೊಟ್ಟಿಗೆ ನೀರು ಶೇಖರಣೆ ಮಾಡಿಕೊಳ್ಳುತ್ತಾರೆ. ಆ ತೊಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳ ಉತ್ಪಾದನೆ ಆಗುತ್ತಿರುತ್ತದೆ. ಹೊಸ ಮನೆ ನಿರ್ಮಾಣ ಸಂದರ್ಭದಲ್ಲಿ ಆರೋಗ್ಯ ಕುರಿತ ಅನುಮತಿಯನ್ನು ಆರೋಗ್ಯ ಇಲಾಖೆಯಿಂದ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜಯಮ್ಮ ಮಾತನಾಡಿ, ಡೆಂಘೀ, ಮಲೇರಿಯಾ ಮತ್ತಿತರ ರೋಗಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನತೆ ಸಹಕಾರ ನೀಡುತ್ತಿಲ್ಲ. 

Advertisement

ಈ ರೀತಿಯ ಘಟನೆಗಳು ಮರುಕಳಿಸಿದರೆ 50 ರೂ. ದಂಡ ಹಾಕಲಾಗುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ ದಿನವೊಂದಕ್ಕೆ 10 ರೂ.ನಂತೆ ದಂಡ ಹಾಕಬಹುದಾಗಿದೆ. ಆದರೆ ದಂಡ ಹಾಕುವುದು ನಮ್ಮ ಉದ್ದೇಶವಲ್ಲ. ಸಾಂಕ್ರಾಮಿಕ ರೋಗಗಳ ಹರಡದಂತೆ ತಡೆಯುವುದು ನಮ್ಮ ಉದ್ದೇಶವಾಗಿದ್ದು ಜನತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬಂದಾಗ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಬೇಕು. ಡೆಂಘೀ ಜ್ವರ ಕಾಣಿಸಿಕೊಂಡಾಗ ಎಚ್ಚರ ವಹಿಸಬೇಕು. ಅತಿಯಾದ ಸೊಳ್ಳೆ ಅಥವಾ ಡೆಂಘೀ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಮಲಿನ ವಾತಾವರಣದಿಂದ ಹರಡುವ ಡೆಂಘೀ ಜ್ವರಕ್ಕೆ ಸೂಕ್ತ ಮಾಹಿತಿ ಕೊರತೆಯಿಂದ ಜನ ಪರದಾಡುತ್ತಿದ್ದಾರೆ. ಗುಂಡಿಗಳು ಮತ್ತು ಟೈರ್‌ ಗಳಲ್ಲಿ ನಿಂತ ನೀರಿನಿಂದ ಹುಟ್ಟಿಕೊಳ್ಳುವ ಸೊಳ್ಳೆ 25 ದಿನಗಳ ಕಾಲ ಬದುಕಿರುತ್ತದೆ. ಒಂದು ಸೊಳ್ಳೆ 2 ಸಾವಿರ ತನಕ ಮೊಟ್ಟೆಗಳನ್ನು ಇಡಲಿದೆ.

ಆ ಮೊಟ್ಟೆಗಳು ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಒಂದು ವೇಳೆ ನೀರಿಲ್ಲದಿದ್ದರೂ ಎರಡು ವರ್ಷಗಳ ಕಾಲ ಬದುಕುವ ಸಾಮರ್ಥ್ಯ ಸೊಳ್ಳೆ ಮೊಟ್ಟೆಗಳಿವೆ. ಆದ್ದರಿಂದ ಸುತ್ತಲಿನ ಪರಿಸರ ಸ್ವಚತೆಯಿಂದ ಕಾಪಾಡಿಕೊಳ್ಳುವ
ಮೂಲಕ ಡೆಂಘೀನಿಂದ ದೂರ ಇರಬೇಕು ಎಂದರು. 

ತಾಲೂಕು ಆರೋಗ್ಯಾಧಿಕಾರಿ ಡಾ| ಪಾಲಾಕ್ಷ, ಡಾ| ಸುಧಾ, ಡಾ |ನಂದಿನಿ ಕಡಿ, ಡಾ| ಕುಮಾರಸ್ವಾಮಿ, ವಾರ್ತಾ ಇಲಾಖೆ ಸಹಾಯಕ ಕೃಷ್ಣ ನಾಯ್ಕ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next