Advertisement

ಶರೀಫರ ನೆಲದಲ್ಲಿ ಸಮಬಲದ ಹೋರಾಟ

10:43 AM May 05, 2019 | Team Udayavani |

ಶಿಗ್ಗಾವಿ: ಸಂತ ಶಿಶುನಾಳ ಶರೀಫರ ಸುಕ್ಷೇತ್ರವಾದ ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಧಾರವಾಡ ಲೋಕಸಭಾ ಚುನಾವಣೆ ಮತದಾನೋತ್ತರ ಲೆಕ್ಕಾಚಾರ ಬಲು ಜೋರಾಗಿದೆ. ಪ್ರಮುಖ ಪೈಪೋಟಿ ಏರ್ಪಟ್ಟಿದ್ದ ಬಿಜೆಪಿ-ಕಾಂಗ್ರೆಸ್‌ ಎರಡೂ ಪಕ್ಷಗಳು ಕ್ಷೇತ್ರದಲ್ಲಿ ತಮ್ಮದೇ ಮುನ್ನಡೆ ಎಂದು ಬೀಗುತ್ತಿವೆ.

Advertisement

ಹಾವೇರಿ ಜಿಲ್ಲಾ ವ್ಯಾಪ್ತಿಯ ಶಿಗ್ಗಾವಿ-ಸವಣೂರು ವಿಧಾನ ಸಭಾ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ, ಕಾಂಗ್ರೆಸ್‌ನ ವಿನಯ ಕುಲಕರ್ಣಿ ನಡುವೆ ನೇರ ಹಣಾಹಣಿ ನಡೆದಿದೆ.

ಸ್ಥಳೀಯವಾಗಿ ಶಾಸಕ ಬಸವರಾಜ ಬೊಮ್ಮಾಯಿ ಇದ್ದಾರೆ. ಬಿಜೆಪಿಯಲ್ಲಿ ಹಿರಿಯ ಮುಖಂಡರೆನಿಸಿರುವ ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಸೆಳೆದು ಪ್ರಹ್ಲಾದ ಜೋಶಿಯವರ ಪೆಟ್ಟಿಗೆಗೆ ಹಾಕಿಸಲು ಪ್ರಯತ್ನ ಪಟ್ಟಿದ್ದಾರೆ. ಪ್ರಧಾನಿ ಮೋದಿಯವರ ಸಾಧನೆ, ಕೇಂದ್ರ ಸರ್ಕಾರದ ಯೋಜನೆ, ಪಕ್ಷದ ಪ್ರಣಾಳಿಕೆ ಹಾಗೂ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದಲ್ಲಿ ಆಗಿರುವ ಕೆಲಸಗಳು ಬಿಜೆಪಿಗೆ ವರವಾಗಿವೆ. ಇದರ ಜತೆಗೆ ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಅಲ್ಪಸಂಖ್ಯಾತರು ಹೆಚ್ಚಿನ ಆಸಕ್ತಿ ವಹಿಸದೆ ಇರುವುದರಿಂದ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂಬುದು ಬಿಜೆಪಿ ಕಾರ್ಯಕರ್ತರ ಲೆಕ್ಕಾಚಾರವಾಗಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕ್ಷೇತ್ರದ ಹೆಚ್ಚು ಜನರಿಗೆ ಅನುಕೂಲವಾಗುವ ಯೋಜನೆ ಸಿಕ್ಕಿದೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ವಿನಯ ಕುಲಕರ್ಣಿ ತೊಡಗಿಕೊಂಡಿದ್ದರಿಂದ ಈ ಬಾರಿ ಕ್ಷೇತ್ರದ ಪ್ರಬಲ ಸಮುದಾಯ ಪಂಚಮಸಾಲಿ ಲಿಂಗಾಯತ ಮತಗಳು ಕಾಂಗ್ರೆಸ್‌ನತ್ತ ಒಲವು ತೋರಿಸಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದಿದ್ದ ಮತಗಳನ್ನು ಕಾಂಗ್ರೆಸ್‌ ಉಳಿಸಿಕೊಂಡಿದೆ. ಬೊಮ್ಮಾಯಿ ಹಾಗೂ ಸೋಮಣ್ಣ ಬೇವಿನಮರದ ನಡುವಿನ ಬಿಕ್ಕಟ್ಟು, ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ಗೆ ವರವಾಗಿದೆ ಎಂಬುದು ಕಾಂಗ್ರೆಸ್‌ ಕಾರ್ಯಕರ್ತ ಅಭಿಪ್ರಾಯ.

Advertisement

ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತ ಮತಗಳು ಎತ್ತ ಹೋಗಿವೆ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಲಿಂಗಾಯತರು ಯಾವ ಪಕ್ಷಕ್ಕೆ ಬೆಂಬಲಿಸಿದ್ದಾರೋ ಆ ಪಕ್ಷ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್‌ ಟಿಕೆಟ್‌ ಕೊನೆಯ ಘಳಿಗೆಯಲ್ಲಿ ಘೋಷಣೆಯಾಗಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿಯಷ್ಟು ಪ್ರಚಾರ ಕಾಂಗ್ರೆಸ್‌ನಿಂದ ನಡೆದಿಲ್ಲ.

ಆದರೂ ಬಿಜೆಪಿ-ಕಾಂಗ್ರೆಸ್‌ ನಡುವೆ ಸಮಬಲದ ಹೋರಾಟ ನಡೆದಿದೆ. ಕಡಿಮೆ ಅಂತರದಲ್ಲಿ ಬಿಜೆಪಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಮತದಾನದ ನಂತರ ಕ್ಷೇತ್ರದಲ್ಲಿ ಯಾವ ಪಕ್ಷ ಮುನ್ನಡೆ ಸಾ ಧಿಸಲಿದೆ ಎಂಬ ಕುತೂಹಲದ ಚರ್ಚೆ, ವಾದ ಎಲ್ಲೆಡೆ ನಡೆಯುತ್ತಿದ್ದು ಈ ಕೌತುಕ ತಣಿಯಲು ಮೇ 23ರ ವರೆಗೆ ಕಾಯಲೇ ಬೇಕಾಗಿದೆ.

ಲೋಕಸಭೆ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳೆಷ್ಟು? ನಡೆಯುತ್ತಿರುವ ಸೋಲು-ಗೆಲುವಿನ ಲೆಕ್ಕಾಚಾರ ಏನು? ಇಲ್ಲಿದೆ ಮಾಹಿತಿ..

ಈ ಬಾರಿ ಹೆಚ್ಚು ಮತದಾರರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉತ್ತಮ ಆಡಳಿತ ಒಪ್ಪಿಕೊಂಡಿದ್ದು. ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾರಣ ಕಳೆದ ಬಾರಿಗಿಂತ ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆಯಾಗಲಿದೆ.
ದೇವಣ್ಣ ಚಾಕಲಬ್ಬಿ, ತಾಲೂಕಾಧ್ಯಕ್ಷ, ಬಿಜೆಪಿ

ಹಿಂದಿನ ಲೋಕಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚು ಸಮುದಾಯಗಳು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಲಿಂಗಾಯತ ಮತಗಳು ಬದಲಾವಣೆಯಾಗಿವೆ. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಲಿದೆ.
ಮಲ್ಲೇಶಪ್ಪ ವೆಂಕೋಜಿ, ತಾಲೂಕಾಧ್ಯಕ್ಷ, ಕಾಂಗ್ರೆಸ್‌

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next