ಕಿರುತೆರೆಯಲ್ಲೀಗ ಧಾರಾವಾಹಿಗಳ ಕಲರವ ಜೋರಾಗಿದೆ. ಹೊಸ ಬಗೆಯ ಧಾರಾವಾಹಿಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಈಗ ಕಲರ್ಸ್ ಕನ್ನಡದಲ್ಲಿ “ರಾಧಾ ರಮಣ’ ಸೇರಿದೆ. ಜನವರಿ 16 ರಂದು ಶುರುವಾಗುವ ಈ ಧಾರಾವಾಹಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಕ್ಕೆ ಪ್ರಸಾರವಾಗಲಿದೆ. ಇದು ಒಡಹುಟ್ಟಿದವರ ಬಾಂಧವ್ಯ ಬೆಸೆಯುವ ಕಥೆ. ಇಲ್ಲಿ ದಾಯಾದಿಗಳ ಹಗೆತನ ಇಲ್ಲ. ಕೋಟಿ ಕೋಟಿ ದುಡ್ಡಿದೆ.
ಆದರೆ ಕೋಟಿಗಿಂತಲೂ ಮಿಗಿಲಾದ ಪ್ರೀತಿ ಇದೆ. ವಿಶೇಷವಾಗಿ ಆ ಮನೆಯ ಅಣ್ಣ , ತಂಗಿಯರನ್ನು ನೋಡಿದರೆ ಎಂಥವರಿಗೂ ಹೊಟ್ಟೆ ಕಿಚ್ಚಾಗುವಷ್ಟು ಪ್ರೀತಿ ಇದೆ. ಸಂಬಂಧಗಳು ಮೌಲ್ಯ ಕಳೆದುಕೊಳುತ್ತಿರುವ ಸಂದರ್ಭದಲ್ಲಿ, ಜವಾಬ್ದಾರಿಗಳಿಂದ ದೂರ ಸರಿಯುವ ಒಡಹುಟ್ಟಿದವರಿಗೆ ಹೇಳಿ ಮಾಡಿಸಿರುವ ಧಾರಾವಾಹಿ ಇದು ಎಂಬುದು ಧಾರಾವಾಹಿ ತಂಡದ ಮಾತು. ಈವರೆಗೆ ಕಲರ್ಸ್ ಕನ್ನಡ ಹೊಸಬಗೆಯ ಧಾರಾವಾಹಿಗಳನ್ನು ನೀಡಿದೆ. “ರಾಧಾ ರಮಣ’ ಆ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಕನ್ನಡ ಪ್ರಾಧ್ಯಾಪಕಿ ಆರಾಧನಾ ಮತ್ತು ಬ್ಯುಸಿನೆಸ್‌ನಲ್ಲಿ ತೊಡಗಿರುವ ಇಂಗ್ಲಿಷ್ ಹುಡುಗ ರಮಣನ ನಡುವೆ ನಡೆಯುವ ಕಥೆ. ಆರಾಧನಾ ಅಣ್ಣ ಮತ್ತು ರಮಣನ ತಂಗಿಗೆ ನಡೆಯುವ ಮದುವೆ ಜೊತೆ ಆರಂಭವಾಗುವ ಈ ಧಾರಾವಾಹಿ, ಕನ್ನಡ ಮನಸುಗಳಿಗೆ ಹತ್ತಿರವಾಗುತ್ತೆ ಎಂಬ ವಿಶ್ವಾಸ ಧಾರಾವಾಹಿ ತಂಡದ್ದು. ರಮಣ ಒಬ್ಬ ಪಫೆìಕ್ಟ್ ಹುಡುಗ. ಆದರೆ ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿರಲು ಹೇಗೆ ಸಾಧ್ಯ? ತನ್ನ ತಂಗಿ ಅನ್ವಿತಾಳಿಗೆ ಪ್ರತಿಯೊಂದೂ ಬೆಸ್ಟ್ ಸಿಗಬೇಕು ಎನ್ನುವುದು ಅವನ ಕಾಳಜಿ. ಈ ಕಡೆ ಅನ್ವಿತಾ ಒಬ್ಬ ಪಫೆಕ್ಟ್ ಹುಡುಗನನ್ನು ಹುಡುಕಿದ್ದಾಳೆ.
ಅವನೇ ಆದಿತ್ಯ! ಮುಂದೆ ಏನೆಂಬುದನ್ನು ಧಾರಾವಾಹಿಯಲ್ಲೇ ನೋಡಬೇಕು. ಈ ಧಾರಾವಾಹಿಗೆ ವಿಶಾಲ ರಾಜಪುರೋಹಿತ್ ಕಥೆ ಬರೆದಿದ್ದಾರೆ. ಡಾ.ಮಾಲತಿ ಬೇಳೂರು ಸಂಭಾಷಣೆ ಬರೆದರೆ, ಎಂ. ಸುಬ್ರಹ್ಮಣ್ಯ ನಿರ್ಮಾಪಕರು. ಶಿವ ಪೂಜೇನ ಅಗ್ರಹಾರ ನಿರ್ದೇಶನವಿದೆ. ಶ್ವೇತಾ ಪ್ರದೀಪ್, ಸ್ಕಂದ, ರಕ್ಷಾ, ಸಿಬ್ಬು, ಸುಜಾತ, ಸುಚಿತ್ರಾ, ರಾಜ್‌ಗೊàಪಾಲ್ ಜೋಷಿ ಇತರರು ನಟಿಸುತ್ತಿದ್ದಾರೆ. ಧಾರಾವಾಹಿಗೆ ಕಾರ್ತಿಕ್ ಶರ್ಮಾ ಸಂಗೀತವಿದೆ. ವಿಕಾಸ್ ನೇಗಿಲೋಣಿ ಶೀರ್ಷಿಕೆ ಸಾಹಿತ್ಯವಿದೆ.