Advertisement

ರಂಗುರಂಗಾ¨ ದೇವನಗರಿ

09:38 PM Mar 23, 2019 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಿಡೀ ಗುರುವಾರ ಬಣ್ಣಗಳಲ್ಲಿ ಮುಳುಗಿ ಹೋಗಿತ್ತು!.
ಹೋಳಿ ಹಿನ್ನೆಲೆಯಲ್ಲಿ ದಾವಣಗೆರೆಯ ಪ್ರತಿಯೊಂದು ಪ್ರಮುಖ ರಸ್ತೆ, ವೃತ್ತ, ಮನೆ, ವಠಾರ, ಗಲ್ಲಿ, ಬಯಲು… ಹೀಗೆ ಎಲ್ಲಿ ನೋಡಿದರೂ ಬಣ್ಣ ಬಣ್ಣ. ಮಧ್ಯಾಹ್ನ 1 ಗಂಟೆಯ ನಂತರ ಅಬ್ಬರದ ಬಣ್ಣದ ಎರೆಚಾಟ, ಕೊರಚಾಟ, ಕಿರಿಚಾಟ, ಕೇಕೆ, ಡ್ಯಾನ್ಸ್‌ ಎಲ್ಲ ನಿಂತ ನಂತರವೂ ರಸ್ತೆಗಳಿಗೆ ಏನಾದರೂ ಬಣ್ಣ ಬಳೆಯಲಾಗಿದೆಯೇ ಎನ್ನುವಂತೆ ಕಣ್ಣಿಗೆ ಕಾಣಿಸುವಷ್ಟು ದೂರವೂ ಬಣ್ಣ ಕಂಡು ಬಂದಿದ್ದು ಹೋಳಿ ಹಬ್ಬದ ಬಣ್ಣದಾಟಕ್ಕೆ ಸಾಕ್ಷಿಯಾಗಿತ್ತು. 

Advertisement

ಬುಧವಾರ ಗಲ್ಲಿ ಗಲ್ಲಿಯಲ್ಲಿ ಕಾಮದಹನ ನಡೆಯಿತು. ಕಾಮಣ್ಣನ ಮಕ್ಕಳು…. ಎಂಬ ಕೂಗು ಎಲ್ಲಾ ಕಡೆ ಮಾರ್ದನಿಸಿದ್ದು ಸಾಮಾನ್ಯವಾಗಿತ್ತು. ಈಗಿನ ಕಾಲದಲ್ಲೂ ಕಾಮಣ್ಣನ ಸುಡುವಾಗ ಬೆಂಕಿ ಕದಿಯುವುದು ನಿಂತಿಲ್ಲ ಎನ್ನುವುದಕ್ಕೆ ರಾಂ ಆ್ಯಂಡ್‌ ಕೋ ವೃತ್ತ, ವಿನೋಬ ನಗರ ಇತರೆ ಭಾಗದಲ್ಲಿ ಕಂಡು ಬಂದ ಯುವಕರ ಗುಂಪುಗಳ ನಡುವಿನ ಪೈಪೋಟಿ ಸಾಕ್ಷಿಯಾಗಿತ್ತು. 

ಒಂದು ಗುಂಪಿನವರು ಕಾಮಣ್ಣನ ಸುಡುವ ಬೆಂಕಿಯನ್ನ ಕಟ್ಟಿಗೆಯೊಂದಕ್ಕೆ ಹೊತ್ತಿಸಿಕೊಂಡು ಮತ್ತೂಂದು ಕಡೆ ಕಾಮಣ್ಣನ ಸುಡುವುದಕ್ಕೆ ಇನ್ನಿಲ್ಲದ ಕಸರತ್ತು ನಡೆಸುವುದು ಕಂಡು ಬಂದಿತು. ಹೇಗಾದರೂ ಸರಿಯೇ ಬೆಂಕಿ ತೆಗೆದುಕೊಂಡು ಹೋಗಬೇಕು ಎಂದು ಕೆಲವರು, ಬೆಂಕಿ ತೆಗೆದುಕೊಂಡು ಹೋಗಲಿಕ್ಕೆ ಬಿಡಲೇಬಾರದು ಎಂದು ಇನ್ನು ಕೆಲವರು ಹವಣಿಸುತ್ತಿದ್ದರು.ಆ ನಡುವೆಯೂ ಬೆಂಕಿ ತೆಗೆದುಕೊಂಡು ಬೈಕ್‌ಗಳಲ್ಲಿ ರೊಯ್ಯನೆ… ಜೀವಭಯವೂ ಇಲ್ಲದೆ ಅತಿಯಾದ ವೇಗದಿಂದ ಹೋಗಿ ಬೆಂಕಿ ಹಚ್ಚಿ, ಕಾಮಣ್ಣನ ಸುಟ್ಟು ಖುಷಿ ಪಡುವುದು ಕಂಡು ಬಂದಿತು.

ಗುರುವಾರ ಬೆಳಗ್ಗೆಯಿಂದಲೇ ಬಣ್ಣದ ಎರೆಚಾಟ ಪ್ರಾರಂಭವಾಗಿತ್ತು. ಸಣ್ಣ ಮಕ್ಕಳು, ವಯಸ್ಕರು, ಬಾಲಕಿಯರು, ಯುವತಿಯರು, ಮಹಿಳೆಯರು, ವಯೋವೃದ್ಧರು… ಹೀಗೆ ಪ್ರತಿಯೊಬ್ಬರು ಬಣ್ಣ ಹಚ್ಚುತ್ತಾ, ಹ್ಯಾಪ್ಪಿ ಹೋಳಿ… ಎಂದು ಶುಭಾಶಯ ಹೇಳುತ್ತಾ, ಸಂಭ್ರಮಿಸಿದರು.

ಪೊಲೀಸ್‌ ಇಲಾಖೆಯು ಮೊಟ್ಟೆ ಒಡೆಯುವುದು, ಸೈಲೆನ್ಸರ್‌ ತೆಗೆದು ಬೈಕ್‌ ರೈಡಿಂಗ್‌, ಮೂವರು ಸವಾರಿ ಮಾಡುವುದು, ಅಸಭ್ಯವಾಗಿ ವರ್ತಿಸುವುದನ್ನ ನಿರ್ಬಂಧಿಸಿತ್ತಾದರೂ ಅವು ಎಲ್ಲವೂ ಯಾವುದೇ ಮುಲಾಜಿಲ್ಲದೆ ನಡೆದವು. ಭಾರೀ ಹಾರ್ನ್ ಮಾಡುತ್ತಾ, ಮೂವರು, ನಾಲ್ವರು ಒಂದೇ ಬೈಕ್‌ನಲ್ಲಿ ಸಂಚಾರ ಮಾಡುತ್ತಾ, ಹ್ಯಾಪಿ ಹೋಳಿ ಎಂದು ಕೂಗುವುದು, ಪೀಪಿ ಊದುವುದು, ಭಯ ಹುಟ್ಟುವಂತೆ ವರ್ತಿಸುವುದು ಸಾಮಾನ್ಯವಾಗಿತ್ತು. 

Advertisement

ಅರುಣಾ ಚಿತ್ರಮಂದಿರ ವೃತ್ತ ಇತರೆಡೆ 41 ಬೈಕ್‌, 1 ಜೀಪ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು ಹೋಳಿ ಹಬ್ಬದ ಪ್ರಮುಖ ಐಕಾನ್‌ ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಜನಸಾಗರವೇ ಕಂಡು ಬಂದಿತು. ಬಣ್ಣ ಹಾಕುತ್ತಾ,ಹೆಜ್ಜೆ ಹಾಕುತ್ತಿದ್ದ ಸಾವಿರಾರು ಸಂಖ್ಯೆಯಲ್ಲಿ ಯುವಕರ ಸಂಭ್ರಮ ಮೇರೆ ಮೀರಿತ್ತು. ಮೈ ಮೇಲಿನ ಅಂಗಿ, ಬನಿಯನ್‌ ಕಿತ್ತು ವಿದ್ಯುತ್‌ ತಂತಿಗಳಿಗೆ ಎಸೆಯುವ ಮೂಲಕ ಖುಷಿ ಪಟ್ಟರು.
 
ತಮ್ಮ ನೆಚ್ಚಿನ ಗೆಳೆಯರ ಅಂಗಿ, ಬನಿಯನ್‌ ಕಿತ್ತೆಸೆದು, ಕರೆಂಟ್‌ ಲೈನ್‌ಗೆ ಜೋತು ಬೀಳುವಂತೆ ಹಾಕಿ, ಸಂತೋಷ ಪಡುವಲ್ಲಿ ಪೈಪೋಟಿಗೆ ಬಿದ್ದರು. ತಪ್ಪಿಸಿಕೊಂಡು ಓಡಿ ಹೋದರೂ ಬೆನ್ನಟ್ಟಿ ಹಿಡಿದು, ಅಂಗಿ, ಬನಿಯನ್‌ ಕಿತ್ತು ಹಾಕುವ ಮೂಲಕ ಸಂತೋಷಪಟ್ಟರು. ಗುಂಪು ಗುಂಪಾಗಿ ಹೆಜ್ಜೆ ಹಾಕುತ್ತಿದ್ದವರು ಏಕಾಏಕಿ ಯಾರನ್ನಾದರೂ ಒಬ್ಬರನ್ನ ಮೇಲಕ್ಕೆ ತೂರಿ, ಅವರನ್ನ ಹಿಡಿದುಕೊಳ್ಳುವುದು ಕಂಡು ಬಂದಿತು. ಅದೇ ರೀತಿ ಪ್ರಯತ್ನದಲ್ಲಿ ಯುವಕನೊಬ್ಬ ಕ್ಷಣಾರ್ಧದಲ್ಲಿ ಅಪಾಯಕ್ಕೆ ತುತ್ತಾಗುವುದರಿಂದ ಬಚಾವ್‌ ಆದ. ಬ್ಯಾರಿಕೇಡ್‌ ಮೇಲೆ ನಿಂತು ಡ್ಯಾನ್ಸ್‌ ಮಾಡಿದರು. ಆಯೋಜಕರು ಪರಿ ಪರಿಯಾಗಿ ಬೇಡಿಕೊಂಡರೂ ಜಪ್ಪಯ್ಯ… ಎನ್ನುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ರಾಂ ಆ್ಯಂಡ್‌ ಕೋ ವೃತ್ತದ ಗೆಳೆಯರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನಿಮಾವೊಂದರ ಆಡಿಯೋ ಸಹ ಬಿಡುಗಡೆಗೊಳಿಸಲಾಯಿತು.

ಯುವತಿಯರು, ಮಹಿಳೆಯರಿಗಾಗಿಯೇ ಬಣ್ಣ ಹಾಕುವುದು, ನೃತ್ಯ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ರಾಂ ಆ್ಯಂಡ್‌ ಕೋ ವೃತ್ತ, ಚರ್ಚ್‌ ಸಮೀಪ, ಯೂನಿಟಿ ಹೆಲ್ತ್‌ ಸೆಂಟರ್‌ ಸಮೀಪ ಸಾಗರೋಪಾದಿಯಲ್ಲಿ ಯುವಕ-ಯುವತಿಯರು ಕಂಡು ಬಂದರು. ರಾಂ ಆ್ಯಂಡ್‌ ಕೋ ವೃತ್ತ, ಅಂಬೇಡ್ಕರ್‌ ವೃತ್ತ, ಲಾಯರ್‌ ರಸ್ತೆ, ಗಾಂಧಿನಗರ, ವಿನೋಬ ನಗರ 2ನೇ ಮುಖ್ಯ ರಸ್ತೆ, 3ನೇ ಮುಖ್ಯ ರಸ್ತೆ, ಕೆಟಿಜೆ ನಗರ, ನಿಟುವಳ್ಳಿ, ವಿದ್ಯಾನಗರ, ಸಿದ್ದವೀರಪ್ಪ ಬಡಾವಣೆ, ಶಾಮನೂರು ರಸ್ತೆ, ಜಯನಗರ, ಮಂಡಿಪೇಟೆ, ಗಡಿಯಾರ ಕಂಬ, ಬಸವರಾಜಪೇಟೆ, ಚೌಕಿಪೇಟೆ… ಹೀಗೆ ಎಲ್ಲಾ ಕಡೆ ಹೋಳಿಯ ಸಂಭ್ರಮ ಕಂಡು ಬಂದಿತು.

ಮೋದಿ…. ಮೋದಿ…
ರಾಂ ಆ್ಯಂಡ್‌ ಕೋ ವೃತ್ತದಲ್ಲಿ ಹೋಳಿ ಸಂಭ್ರಮದ ನಡುವೆಯೇ ನೂರಾರು ಯುವಕರ ಗುಂಪು ಮೋದಿ… ಮೋದಿ… ಎಂದು ಹರ್ಷೋದ್ಘಾರ ಮಾಡಿದರು. ಈ ಬಾರಿ ಮೋದಿ… ಮುಂದೆಯೂ ಮೋದಿ… ಎಂದು ಕೂಗಿದರು. ಜೈ ಘೋಷ ಹಾಕಿದರು.  ಬನಾಯೆಂಗೆ ಮಂದಿರ್‌… ಹಾಡು ಕೇಳಿ ಬಂದಾಗ ಭಾರೀ ಸಂಭ್ರಮದೊಂದಿಗೆ ಹೆಜ್ಜೆ ಹಾಕಿದರು.

ನಾಲೆಯಲ್ಲಿ ಮುಳುಗಿ ಯುವಕ ಸಾವು
ದಾವಣಗೆರೆ: ಹೋಳಿ ಬಣ್ಣದಾಟದ ನಂತರ ಸ್ನಾನಕ್ಕೆಂದು ತೋಳಹುಣಸೆ ಬಳಿ ಭದ್ರಾ ನಾಲೆಗೆ ಇಳಿದಿದ್ದ ಸಂಜಯ ಎಂಬ ಯುವಕ (22) ಕೊಚ್ಚಿಹೋಗಿದ್ದಾನೆ. ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next