ರೂಪಾ ಅಯ್ಯರ್ ನಿರ್ದೇಶನದ “ಕಲರ್ಸ್’ ಚಿತ್ರವನ್ನು ಸುಮಾರು 30 ದೇಶಗಳ 90ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಪ್ರದರ್ಶನಕ್ಕೆ ಕಳುಹಿಸಲಾಗಿತ್ತಂತೆ. ಆ ಪೈಕಿ, ಹಾಲಿವುಡ್ ಇಂಟರ್‌ನ್ಯಾಷನಲ್ ಮೂವಿಂಗ್ ಪಿಕ್ಚರ್ ಫಿಲ್ಮ್ ಫೆಸ್ಟಿವಲ್‌ನಲ್ಲಿ “ಕಲರ್ಸ್’ ಚಿತ್ರಕ್ಕೆ ಅತ್ಯುತ್ತಮ ಫಾರಿನ್ ಚಿತ್ರ ಎಂಬ ಪ್ರಶಸ್ತಿ ಸಿಕ್ಕಿದೆ. ಸ್ವತಃ ರೂಪಾ ಅಯ್ಯರ್ ಅವರು ತಮಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಇಮೇಲ್ ಬಂದಿದೆ ಎಂದು ಹೇಳಿಕೊಂಡಿದ್ದಾರೆ.
“ನಾವು ಸುಮಾರು 90 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ನಮ್ಮ ಚಿತ್ರವನ್ನು ಪ್ರದರ್ಶನಕ್ಕೆಂದು ಕಳಿಸಿದ್ದವು. ಅದಕ್ಕೆ ಕಾರಣವೇನೆಂದರೆ, ಈ ಚಿತ್ರದಲ್ಲಿ ಬೇರೆಬೇರೆ ದೇಶಗಳ ಹಲವು ಮಕ್ಕಳು ಅಭಿನಯಿಸಿದ್ದಾರೆ. ಹಾಗಾಗಿ ಜಗತ್ತಿನಾದ್ಯಂತ ಈ ಚಿತ್ರ ತಲುಪಬೇಕು ಎನ್ನುವ ಕಾರಣಕ್ಕೆ 30 ದೇಶಗಳ 90 ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಈ ಚಿತ್ರವನ್ನು ಕಳಿಸಿದ್ದೆವು. ಆ ಪೈಕಿ ಹಾಲಿವುಡ್ ಇಂಟರ್‌ನ್ಯಾಷನಲ್ ಮೂವಿಂಗ್ ಪಿಕ್ಚರ್ ಫಿಲ್ಮ್ ಫೆಸ್ಟಿವಲ್ ಸಹ ಒಂದು.
1500ಕ್ಕೂ ಹೆಚ್ಚು ಚಿತ್ರಗಳು, ಈ ಚಿತ್ರೋತ್ಸವಕ್ಕೆ ಅರ್ಜಿ ಸಲ್ಲಿಸುತ್ತವೆ. ಈ ಪೈಕಿ ಅತ್ಯುತ್ತಮವಾದ 150 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಮಾರ್ಚ್ ಒಂದರಂದು ನಾವು ಪ್ರಶಸ್ತಿಗೆ ಆಯ್ಕೆಯಾಗಿರುವ ವಿಷಯವನ್ನು ಚಿತ್ರೋತ್ಸವದ ಸಮಿತಿಯವರು ತಿಳಿಸಿದರು. ಸದ್ಯದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭವಿದೆ’ ಎನ್ನುತ್ತಾರೆ ರೂಪಾ ಅಯ್ಯರ್. “ಕಲರ್ಸ್’ ಚಿತ್ರದ ಮೂಲಕ ಅಮೆರಿಕಾದ ಬಾಲನಟಿಯೊಬ್ಬಳನ್ನು ಪರಿಚಯಿಸಿದ್ದಾರೆ ರೂಪಾ ಅಯ್ಯರ್.
ಚಿತ್ರದ ಕಥೆ ಅಮೆರಿಕದ ಹುಡುಗಿಯೊಬ್ಬಳನ್ನು ಕೇಳಿದ್ದರಿಂದಲೇ ಅದಕ್ಕಾಗಿ ಹುಡುಕಾಟ ನಡೆಸಿ, ಅಮೆರಿಕಾದ ಬಾಲನಟಿಯನ್ನು ಆಯ್ಕೆ ಮಾಡಿ ಚಿತ್ರೀಕರಿಸಿದ್ದಾರೆ. ಅಂದಹಾಗೆ, ಅಬ್ರೋರಾ ಎಂಬ ಏಳು ವರ್ಷದ ಹುಡುಗಿ “ಕಲರ್ಸ್’ನ ಮುಖ್ಯ ಆಕರ್ಷಣೆಯಂತೆ. ಯಶವಂತ್ ಎಂಬ ಬಾಲಕ ಹಾಗೂ ಸಿದ್ದಿ ಜನಾಂಗದ ಮಗು ಸಹ ಈ ಚಿತ್ರದ ಪ್ರಮುಖ ಆಕರ್ಷಣೆ. ಈ ಚಿತ್ರವನ್ನು ದಾಂಡೇಲಿ ಹಾಗೂ ಬಿಸಿಲೆ ಕಾಡಲ್ಲಿ ಚಿತ್ರೀಕರಿಸಿರುವುದು ವಿಶೇಷ.
ಇದು ಅಮೆರಿಕಾ, ಆಫ್ರಿಕಾ ಮತ್ತು ಇಂಡಿಯನ್ ಈ ಮೂರು ದೇಶಗಳ ಮಕ್ಕಳ ನಡುವೆ ನಡೆಯುವ ಕಥೆಯಾಗಿದ್ದು, ಮಕ್ಕಳ ಬದುಕು ಎಷ್ಟು ಕಲರ್‌ಫುಲ್ ಆಗಿರುತ್ತೆ ಎಂಬುದನ್ನು ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ ರೂಪಾ ಅಯ್ಯರ್. ಇಲ್ಲಿ ರೂಪಾ ಅಯ್ಯರ್ ನಿರ್ದೇಶನದ ಜತೆಯಲ್ಲಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಣ ಕೂಡ ಅವರದೇ. ಇನ್ನು, ಗೌತಮ್ ಶ್ರೀವತ್ಸ ಅವರ ಸಂಗೀತವಿದೆ. ಅಶ್ವಿನ್ ಛಾಯಾಗ್ರಹಣವಿದೆ.