ವಿದ್ಯಾರ್ಥಿ ಜೀವನ ಮರೆಯಲಾಗದ ಅನುಭವ ಎಂಬ ಹೂರಣದ ಹೋಳಿಗೆ. ಬಲ್ಲವರೇ ಬಲ್ಲರು ಈ ಸವಿ. ಅದಕ್ಕಾಗಿಯೇ ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎನ್ನಲಾಗುತ್ತದೆ. ಸದಾ ಕನಸುಗಳೊಂದಿಗೆ ಸಾಗುವ ಸುಂದರ ಪಯಣವದು. ಬಾಲ್ಯದಲ್ಲಿ ನಾವು ಶಾಲೆಗೆ ಸೇರ್ಪಡೆಗೊಳ್ಳುವಾಗಲೇ ಕನಸು, ಗುರಿಗಳು ನಮ್ಮ ಕಣ್ಣಿನಲ್ಲಿ ಆವರಿಸಿರುತ್ತವೆ. ಇನ್ನು ಪ್ರೌಢವಾಸ್ಥೆಗೆ ಬಂದಾಗ ಕನಸುಗಳು ನಮ್ಮ ಸೊತ್ತಾಗುತ್ತವೆ. ಹಲವು ಕನಸುಗಳೊಂದಿಗೆ ಗುರಿಯತ್ತ ಸಾಗುವ ನಾಳಿನ ಭರವಸೆಯ ಕಲ್ಪನೆಯಲ್ಲಿ ವಿಹರಿಸುತ್ತಾ ವಿದ್ಯಾರ್ಥಿ ಜೀವನದಲ್ಲಿ ನಾವು ಮುಂದುವರಿಯುತ್ತೇವೆ. ಬಾಳಿನಲ್ಲಿ ನಿರ್ದಿಷ್ಟ ಗುರಿ ಇಲ್ಲದಿದ್ದರೆ ನಾಳೆಯನ್ನು ಸ್ವಾಗತಿಸುವುದರಲ್ಲಿ ಯಾವುದೇ ಸ್ವಾರಸ್ಯವೂ ಇರುವುದಿಲ್ಲ.
ವಿದ್ಯಾರ್ಥಿ ಜೀವನದ ಎಲ್ಲ ಘಟ್ಟಗಳಲ್ಲಿಯೂ ಕೂಡ ಭಿನ್ನ ಭಿನ್ನವಾದ ಕನಸುಗಳನ್ನು ನಾವು ಕಾಣುತ್ತೇವೆ. ಆಗಾಗ ನಾವಿಟ್ಟಂತಹ ಗುರಿ ಬದಲಾಗುತ್ತಲೂ ಇರಬಹುದು. ಬಾಲ್ಯದಲ್ಲಿ ಮುಂದೆ ನೀನು ಏನಾಗುತ್ತಿಯಾ? ಎಂದು ಕೇಳುವ ಪ್ರಶ್ನೆಗೆ ಒಂದು ಉತ್ತರವನ್ನಂತೂ ನೀಡುತ್ತೇವೆ. ಆದರೆ ಆ ಗುರಿಯನ್ನು ತಲುಪಲು ನಾವೇನು ಮಾಡಬೇಕು ಎಂಬುದರ ವಾಸ್ತವ ಚಿತ್ರಣ ನಮ್ಮಲ್ಲಿರುವುದಿಲ್ಲ.
ಬಾಲ್ಯದಲ್ಲಿ ಆಕಾಶದಲ್ಲಿ ಸಂಚರಿಸುವ ವಿಮಾನವನ್ನು ಕಂಡೊಡನೇ ನಾನು ಪೈಲಟ್ ಆಗಬೇಕು ಎಂದೆನಿಸುತಿತ್ತು. ಸಮವಸ್ತ್ರ ಧರಿಸಿದ ಖಾಕಿಧಾರಿ ಆರಕ್ಷಕರನ್ನು ಕಂಡಾಗ ನಾನು ಪೊಲೀಸ್ ಆಗಬೇಕು, ಎಲ್ಲರೂ ನನಗೆ ಸೆಲ್ಯೂಟ್ ಮಾಡಬೇಕು ಎನ್ನುವ ಮನಸ್ಸಾಗುತ್ತಿತ್ತು. ಶಿಕ್ಷಕರನ್ನು ಎಲ್ಲರೂ ಗೌರವಿಸುವ ಪರಿಯನ್ನು ನೋಡಿ, ಅವರ ಜ್ಞಾನವನ್ನು ಗಮನಿಸಿದಾಗ ನಾನು ಶಿಕ್ಷಕನಾಗಬೇಕು ಎಂದು ಮನ ಬಯಸುತ್ತಿತ್ತು. ಈ ರೀತಿ ಬಾಲ್ಯದಲ್ಲಿ ಮನಸ್ಸು ನೂರಾರು ಕನಸುಗಳನ್ನು ಹೊತ್ತು, ಅರಿಯದ ಹಲವಾರು ಗುರಿಗಳೊಂದಿಗೆ ಸ್ವತ್ಛಂದವಾಗಿ ಇರುತ್ತಿತ್ತು. ವಿದ್ಯಾರ್ಥಿ ಜೀವನದ ಬಗ್ಗೆ ತಿಳಿಯದ ಮನಸ್ಸು ನಿಶ್ಚಿಂತೆಯಿಂದ ಇರುತಿತ್ತು.
ಡಾಕ್ಟರ್, ಎಂಜಿನಿಯರ್ ಎಂದು ಕನಸು ಕಾಣುತ್ತಿದ್ದ ಕಾಲ ಸರಿದು ಪ್ರೌಢಾವಸ್ಥೆಗೆ ಬಂದ ನಂತರ, ಅದನ್ನು ಮಾಡಲು ಆರಿಸಬೇಕಾದ ವಿಷಯ ಮತ್ತು ಅವುಗಳ ಕ್ಲಿಷ್ಟತೆಯನ್ನು ಗಮನಿಸಿ, ಸುಲಭ ಎಂದು ಅನಿಸಿದ್ದನ್ನು ಆರಿಸಬೇಕಾಯಿತು. ಐಎಎಸ್, ಐಪಿಎಸ್ ಎನ್ನುವ ಪದವಿಗಳ ಆಸೆ ಬರುವುದಾದರೂ ಅದಕ್ಕಾಗಿ ಪಡಬೇಕಾದ ಶ್ರಮದ ಬಗ್ಗೆ ಚಿಂತೆ ಆಸೆಗಿಂತ ಜಾಸ್ತಿ ಇರುತ್ತಿತ್ತು. ಇವೆಲ್ಲ ಕನಸು, ಆಸೆಗಳನ್ನು ಬದಿಗೊತ್ತಿ ವಿದ್ಯಾರ್ಥಿ ಜೀವನದ ಅಂತಿಮ ಹಂತಕ್ಕೆ ತಲುಪಿದಾಗ ಹಲವು ಕನಸುಗಳು ಕಣ್ಮರೆಯಾಗಿ, ಕೆಲವು ಗುರಿಗಳು ಕಳೆಗುಂದಿ ಜೀವನ ನಿರ್ವಹಣೆಗೆ ಒಂದು ಉದ್ಯೋಗ ಸಿಕ್ಕರೆ ಸಾಕು ಎಂದು ಮನ ಹವಣಿಸಲು ಆರಂಭಿಸುತ್ತದೆ. ಸಿಗುವ ಸವಲತ್ತುಗಳನ್ನು ಗಮನಿಸಿ ಸಿಕ್ಕರೆ ಸರಕಾರಿ ಉದ್ಯೋಗವೇ ದೊರಕಬೇಕು, ಆಗ ಜೀವನವು ಸುಖಮಯವಾಗಿರುತ್ತದೆ ಎಂದು ಬಯಸುತ್ತಿದ್ದ ನಾವು ಕೊನೆಗೆ ಯಾವುದಾದರೂ ಸಾಕು, ಒಂದು ಉದ್ಯೋಗ ಬೇಕು ಎನ್ನುವ ಸ್ಥಿತಿಗೆ ತಲುಪುತ್ತೇವೆ.
ಕನಸುಗಳೇ ಜೀವನವಾಗಿರುವ ಬಾಲ್ಯದಿಂದ ಆರಂಭವಾಗಿ, ಮುಂದೆ ಯಾವ ಗುರಿಯ ಬಗ್ಗೆ ಕನಸು ಕಂಡರೂ, ಅದು ಸಾಧ್ಯವಾಗದೇ ಹೋದರೆ ಬೇಸರ, ಖನ್ನತೆ ಹೆಚ್ಚಾಗುವುದೆಂಬ ಕಾರಣದಿಂದಲೋ ಏನೋ ಗುರಿಯ ಬಗೆಗಿನ ಕನಸುಗಳು ಕಡಿಮೆಯಾಗುತ್ತವೆ. ಅಂಕಗಳ ಬಗೆಗಿನ ವ್ಯಾಮೋಹ ಕಡಿಮೆಯಾಗಿ, ಕನಸುಗಳ ಬದಲಾಗಿ ಭವಿಷ್ಯದ ಬಗೆಗಿನ ಯೋಚನೆ ಮತ್ತು ಚಿಂತೆ ಆರಂಭವಾಗುತ್ತದೆ. ವಿದ್ಯಾರ್ಥಿ ಜೀವನ ಅದು ಕನಸುಗಳ ಸಮ್ಮಿಲನ. ಗುರಿಯನ್ನು ತಲುಪಲು ಕನಸುಗಳನ್ನು ಹಿಂಬಾಲಿಸಿ ಯಶಸ್ಸನ್ನು ಸಾಧಿಸುವವರು ಕೆಲವರು. ಇನ್ನೂ ಕನಸುಗಳನ್ನೇ ತ್ಯಾಗ ಮಾಡಿ ಜೀವನ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜಲು ಭಯಪಟ್ಟು, ಪ್ರವಾಹದ ದಿಕ್ಕಿನಲ್ಲಿಯೇ ಈಜಿ ಅದು ತಲುಪಿಸುವ ಗುರಿಯನ್ನು ಸೇರುವವರು ಕೆಲವು ಮಂದಿ. ಒಟ್ಟಿನಲ್ಲಿ ಕನಸುಗಳ ಸಫಲತೆ ನಮ್ಮ ಶ್ರಮ, ಶ್ರದ್ಧೆ ಮತ್ತು ದೃಢ ವಿಶ್ವಾಸಗಳ ಮೇಲೆ ಅವಲಂಬಿತವಾಗಿವೆ.
ಹರ್ಷಿತ್ ಶೆಟ್ಟಿ ಮುಂಡಾಜೆ , ಸರಕಾರಿ ಪ್ರಥಮದರ್ಜೆ ಕಾಲೇಜು, ಬೆಳ್ತಂಗಡಿ