Advertisement

ಕಣ್ಮನ ಸೆಳೆಯುವ ಬಣ್ಣ ಬಣ್ಣದ ಕೊಡೆ

08:43 PM Jun 14, 2019 | mahesh |

ಬಂಟ್ವಾಳ: ಬಣ್ಣ ಬಣ್ಣದ ಕೊಡೆಗಳ ರಾಶಿ ನೋಡಿ ಮಾರುಹೋಗಿ ಖರೀದಿಗೆ ಜನ ಮುಂದಾಗುತ್ತಾರೆ. ಒಂದಷ್ಟು ಚೌಕಾಶಿ ಮಾಡಿ ಬಣ್ಣದ ಕೊಡೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಬಿ.ಸಿ. ರೋಡ್‌ ಜಂಕ್ಷನ್‌ನಲ್ಲಿ ಹೆದ್ದಾರಿ ಬದಿಯಲ್ಲಿ ಕಂಡುಬಂದ ಕೊಡೆ ಗಳ ವ್ಯಾಪಾರದ ದೃಶ್ಯ.

Advertisement

ಬಿ.ಸಿ. ರೋಡ್‌ನ‌ಲ್ಲಿ ಬ್ರಹ್ಮಶ್ರೀ ನಾರಾಯಣಗುರು ವೃತ್ತವು ವಿಶಾಲವಾ ಗಿದ್ದು, ಪ್ರಸ್ತುತ ಬಣ್ಣದ ಕೊಡೆಗಳ ವ್ಯಾಪಾರದಿಂದ ಜಂಕ್ಷನ್‌ಗೆ ಹೊಸ ಮೆರುಗು ಬಂದಿದೆ. ಇಲ್ಲಿ ಕಳೆದ ಕೆಲವು ದಿನಗಳಿಂದ ರಾಜಸ್ಥಾನ ಮೂಲದ ವ್ಯಾಪಾರಿಗಳು ಕೊಡೆಗಳ ವ್ಯಾಪಾರ ಮಾಡುತ್ತಿದ್ದು, ವೃತ್ತದ ಆಸುಪಾಸಿನಲ್ಲಿ 5 ಕಡೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಕಳೆದ 5 ವರ್ಷಗಳಿಂದ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಲ್ಲಿ ಬೇರೆ ಬೇರೆ ರೀತಿಯ ವ್ಯಾಪಾರದಲ್ಲಿ ತೊಡಗಿರುವ ಇವರು, ಮಳೆಗಾಲ ಆರಂಭದಲ್ಲಿ ಕೊಡೆಗಳ ವ್ಯಾಪಾರ ಮಾಡುತ್ತಾರೆ. ಮಂಗಳೂರಿನಲ್ಲಿ ಗಾಡಿ ತೊಳೆಯುವ ನೀರಿನ ಪೈಪ್‌, ಬ್ಯಾಗ್‌ಗಳು ಹೀಗೆ ವಿವಿಧ ವ್ಯಾಪಾರದಲ್ಲಿ ತೊಡಗುತ್ತಾರೆ. ಅವರ ತಂಡವೇ ಪ್ರಸ್ತುತ ಬಿ.ಸಿ. ರೋಡ್‌ನ‌ಲ್ಲಿ ವ್ಯಾಪಾರದಲ್ಲಿ ತೊಡಗಿದ್ದು, ಮುಂಬಯಿಯಿಂದ ಕೊಡೆ ಗಳನ್ನು ತಂದು ಮಾರಾಟ ಮಾಡುತ್ತಾರೆ.

ಬಣ್ಣಕ್ಕೆ ಮಾರು ಹೋಗುವ ಗ್ರಾಹಕರಿಂದ ಖರೀದಿ
ರಸ್ತೆ ಬದಿಯಲ್ಲಿ ಉದ್ದಕ್ಕೆ ಕೊಡೆಗಳನ್ನು ಬಿಡಿಸಿ ಇಡಲಾಗಿದ್ದು, ಅವುಗಳು ಗಾಳಿಗೆ ಹಾರದಂತೆ ಹಗ್ಗವನ್ನು ಕಟ್ಟಲಾಗಿದೆ. ಅವುಗಳ ಬಣ್ಣಕ್ಕೇ ಮಾರುಹೋಗಿ ಖರೀದಿಸುವವರಿದ್ದಾರೆ. ಎಲ್ಲ ಕೊಡೆಗಳ ಮೌಲ್ಯ 200 ರೂ. ಆಗಿದೆ.

ರೈನ್‌ಕೋಟ್‌ಗೂ ಡಿಮ್ಯಾಂಡ್‌!
ಇಲ್ಲಿ ರೈನ್‌ಕೋಟ್‌ಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ. ಜಂಕ್ಷನ್‌ನಲ್ಲಿ ವ್ಯಾಪಾರ ಮಾಡುತ್ತಿರುವ ದಾವಣಗೆರೆ ಹರಪನಹಳ್ಳಿ ಮೂಲದ ವ್ಯಾಪಾರಿ ಸಿದ್ದಪ್ಪ ಅವರನ್ನು ಮಾತನಾಡಿಸಿದಾಗ, “ಮಳೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಜೋರಾಗಿ ಆರಂಭ ವಾಗದ ಹಿನ್ನೆಲೆಯಲ್ಲಿ ವ್ಯಾಪಾರ ಕೊಂಚ ಕಡಿಮೆ ಇದೆ. ನಾನು ಇದೇ ಮೊದಲ ಬಾರಿಗೆ ಬಿ.ಸಿ. ರೋಡ್‌ಗೆ ಆಗಮಿಸಿದ್ದು, ಮೂರ್ತಿಗಳ ಮಾರಾಟ, ಬಟ್ಟೆ ವ್ಯಾಪಾರ ಹೀಗೆ ಸೀಸನ್‌ಗೆ ಸಂಬಂಧಿಸಿದ ವ್ಯಾಪಾರ ಮಾಡುತ್ತೇನೆ. ಈ ಹಿಂದೆ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ರಾಜ್ಯಾದ್ಯಂತ ತಿರುಗಾಟ ನಡೆಸುತ್ತೇನೆ. ರೂ. 250, 300, 400… ಹೀಗೆ ಬೇರೆ ಬೇರೆ ಮೌಲ್ಯದ ರೈನ್‌ಕೋಟ್‌ಗಳಿದ್ದು, ಗ್ರಾಹಕರು ಚೌಕಾಶಿ ಮಾಡಿಯೇ ಖರೀದಿಸುತ್ತಾರೆ’ ಎಂದರು.

Advertisement

ಉತ್ತಮ ವ್ಯಾಪಾರ
ಕಳೆದ ಒಂದು ವಾರದಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದು, ಉತ್ತಮ ವ್ಯಾಪಾರವಾಗಿದೆ. ಪ್ರಸ್ತುತ ಇಲ್ಲಿ 5 ಕಡೆಗಳಲ್ಲಿ ಕೊಡೆಗಳನ್ನಿಟ್ಟು ಮಾರಾಟ ಮಾಡುತ್ತಿದ್ದೇವೆ. ಪ್ರತಿ ಕೊಡೆಗೂ 200 ರೂ.ನಂತೆ ಮಾರಾಟ ಮಾಡುತ್ತಿದ್ದು, ಬಹುತೇಕ ಗ್ರಾಹಕರು ಚೌಕಾಶಿ ಮಾಡಿ ಕಡಿಮೆ ದರಕ್ಕೆ ಕೇಳುತ್ತಿದ್ದು, ಕೊನೆಗೆ ಸ್ವಲ್ಪ ಡಿಸ್ಕೌಂಟ್‌ ಮಾಡಿ ಕೊಡಬೇಕಾಗುತ್ತದೆ.
– ರಿಂಕು, ಕೊಡೆಗಳ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next