ಆಧುನಿಕ ಜೀವನ ಪದ್ಧತಿ ಅನುಸರಿಸಿಕೊಂಡವರೆಲ್ಲರೂ ಇಷ್ಟ ಪಡುವ ತಿಂಡಿಗಳಲ್ಲಿ ಸ್ಯಾಂಡ್ ವಿಚ್ ಕೂಡ ಒಂದು. ಬೆಳಗ್ಗೆ ಕಚೇರಿಗೆ ಹೋಗುವ ಧಾವಂತದಲ್ಲಿರುವವರು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ಸ್ಯಾಂಡ್ ವಿಚ್‌ಗೆ ಹೆಚ್ಚಿನವರು ಫಿದಾ ಆಗಿರುವುದು ಮಾತ್ರ ಸುಳ್ಳಲ್ಲ. ಬ್ರೆಡ್ ಸ್ಲೈಸ್ ಒಂದಷ್ಟು ಹಸಿ ತರಕಾರಿ ಇದ್ದರೆ ಸಾಕು ಸುಲಭವಾಗಿ ಬೆಳಗ್ಗಿನ ಬ್ರೇಕ್ ಫಾಸ್ಟ್, ಸಂಜೆಯ ಸ್ನಾಕ್ಸ್ ಮಾಡಿಕೊಳ್ಳಬಹುದು. ನಾವು ಇದನ್ನು ನಮಗಿಷ್ಟವಾದ ರೀತಿ ಮಾಡಿಕೊಂಡು ತಿನ್ನಬಹುದು. ಆದರೆ ಮಕ್ಕಳಿಗೆ ಕಲರ್ ಫುಲ್ ತಿಂಡಿಗಳೇ ಇಷ್ಟವಾಗುವುದು. ಹೀಗಾಗಿ ಮಕ್ಕಳಿಗಾಗಿ ಇದನ್ನು ಮಾಡುವಾಗ ಕಲರ್ ಫುಲ್ ಆಗಿ, ಹೆಚ್ಚು ಟೇಸ್ಟಿಯಾಗಿ ಮಾಡಿದರೆ ಮಕ್ಕಳು ಖುಷಿಯಿಂದ ಇದನ್ನು ಸವಿಯಬಲ್ಲರು. ಅತ್ಯಂತ ಸುಲಭ ಮತ್ತು ಆರೋಗ್ಯಕರವಾಗಿ ಈ ಸ್ಯಾಂಡ್ ವಿಚ್ ಅನ್ನು ಮನೆಯಲ್ಲೇ ಮಾಡಬಹುದು.
ಹಸಿ ತರಕಾರಿಗಳೇ ಇದರಲ್ಲಿ ಹೆಚ್ಚಾಗಿ ಬಳಸುವುದರಿಂದ ಆದಷ್ಟು ಸಾವಯವ ತರಕಾರಿಗಳನ್ನೇ ಬಳಸುವುದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಉತ್ತಮ. ಒಂದು ವೇಳೆ ಸಾವಯವ ತರಕಾರಿಗಳು ಸಿಗದೇ ಇದ್ದರೆ ಆದಷ್ಟು ಶುದ್ಧಗೊಳಿಸಿದ ತರಕಾರಿಗಳನ್ನೇ ಬಳಸಿ.
ಮುಖ್ಯವಾಗಿ ಇದಕ್ಕೆ ಬೇಕಿರುವುದು ಬ್ರೆಡ್ ಪೀಸ್ ನಾಲ್ಕು, ಕ್ಯಾರೆಟ್ ಎರಡು, ಒಣಮೆಣಸು ಮೂರು, ಉಪ್ಪು ರುಚಿಗೆ ತಕ್ಕಷ್ಟು, ಪುದೀನಾ ಸೊಪ್ಪು ಒಂದು ಹಿಡಿ, ಹಸಿ ಮೆಣಸು ಎರಡು, ಕಾಯಿ ತುರಿ ಎರಡು ಚಮಚ, ಲಿಂಬೆ ರಸ ಒಂದು ಚಮಚ, ತುರಿದ ಪನ್ನೀರ್ ದೊಡ್ಡ ಚಮಚದಲ್ಲಿ ಎರಡು. ಕ್ಯಾರೆಟ್ ಹಾಗೂ ಒಣಮೆಣಸಿನ ಕಾಯಿಯನ್ನು ಸ್ವಲ್ಪ ಹುರಿದು, ಕಾಯಿ ತುರಿ, ಉಪ್ಪು, ಲಿಂಬೆ ರಸ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಹಾಗೆಯೇ ಪುದೀನ, ಕಾಯಿತುರಿ, ಉಪ್ಪು, ಹಸಿ ಮೆಣಸಿನಕಾಯಿ, ಲಿಂಬೆ ರಸ ಬೆರೆಸಿ ಗಟ್ಟಿ ಪ್ರತ್ಯೇಕವಾಗಿ ರುಬ್ಬಿ. ಬ್ರೆಡ್ ಪೀಸ್‌ನ ಸುತ್ತಲಿರುವ ಕಂದು ಬಣ್ಣವನ್ನು ತೆಗೆಯಿರಿ.
ಅನಂತರ ಒಂದು ತುಂಡಿನ ಮೇಲೆ ಹಸುರು ಚಟ್ನಿ ದಪ್ಪನಾಗಿ ಸವರಿ, ಮತ್ತೊಂದು ತುಂಡು ಬ್ರೆಡ್ ಪೀಸ್ ಮೇಲೆ ತುರಿದ ಪನೀರ್ ಹರಡಿ, ಅದರ ಮೇಲೆ ಇನ್ನೊಂದು ಬ್ರೆಡ್ ಪೀಸ್ ಇಟ್ಟು ಕೇಸರಿ ಬಣ್ಣದ ಕ್ಯಾರೆಟ್ ಚಟ್ನಿ ದಪ್ಪನಾಗಿ ಸವರಿ, ಅದರ ಮೇಲೊಂದು ಬ್ರೆಡ್ ಪೀಸ್ ಇಟ್ಟು ಹಗುರವಾಗಿ ಒತ್ತಿ. ಚಾಕುವಿನಿಂದ ಕಟ್ ಮಾಡಿ, ಮಗ್ಗಲು ಬದಲಿಸಿ, ಬಣ್ಣ ಬಣ್ಣದ ಸ್ಯಾಂಡ್‌ವಿಚ್ ಸವಿಯಲು ರೆಡಿ.