Advertisement
ಪ್ರಸ್ತುತ ಮಾರುಕಟ್ಟೆಯಲ್ಲೂ ಹಬ್ಬದ ಭರಾಟೆ ಆರಂಭಗೊಂಡಿದ್ದು, ಅಂಗಡಿಗಳ ಮುಂದೆ ಬಣ್ಣ ಬಣ್ಣದ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಗ್ರಾಹಕರನ್ನು ಸೆಳೆಯುವ ರೀತಿಯಲ್ಲೇ ವರ್ತಕರು ಕೂಡ ಅವುಗಳನ್ನು ಅಂಗಡಿಯ ಮುಂದೆ ಜೋಡಿಸಿರುತ್ತಾರೆ. ದೀಪಾವಳಿಯ ಸಂದರ್ಭ ಮನೆ-ಮನೆಯ ಮುಂದೆಯೂ ಗೂಡುದೀಪಗಳು ನೇತಾಡುವುದರಿಂದ ಮಾರುಕಟ್ಟೆಯಲ್ಲಿ ಅವುಗಳಿಗೆ ಉತ್ತಮ ಬೇಡಿಕೆ ಇದೆ. ಬೆಳ್ತಂಗಡಿಯ ಮಾರುಕಟ್ಟೆಯಲ್ಲಿಯೂ ಪ್ರಸ್ತುತ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬಹುತೇಕ ಫ್ಯಾನ್ಸಿ ಸ್ಟೋರ್‌ಗಳು ಗೂಡುದೀಪಗಳಿಂದಲೇ ಮುಳುಗಿ ಹೋಗಿವೆ.
ಗ್ರಾಹಕರು ಒಂದು ಆಕರ್ಷಕ ಗೂಡುದೀಪವನ್ನು ಇಷ್ಟಪಟ್ಟರೆ ಅದರ ಬೆಲೆ ಎಷ್ಟೇ ಆದರೂ ಖರೀದಿಗೆ ಮುಂದಾಗುತ್ತಾರೆ. ಪ್ರಸ್ತುತ ಬೆಳ್ತಂಗಡಿಯಲ್ಲಿ ಸುಮಾರು 90-100 ರೂ.ಗಳಿಂದ ಗೂಡುದೀಪಗಳ ಧಾರಣೆ ಆರಂಭಗೊಂಡರೆ 650 ರೂ.ಗಳವರೆಗಿನ ಗೂಡುದೀಪಗಳಿಗೆ ಉತ್ತಮ ಬೇಡಿಕೆ ಇದೆ. ಸುಮಾರು 30ಕ್ಕೂ ಅಧಿಕ ವಿನ್ಯಾಸಗಳ ಗೂಡುದೀಪಗಳು ಲಭ್ಯವಿವೆ. ಪ್ರತಿ ಅಂಗಡಿಯವರು ಕೂಡ ಹಿಂದಿನ ಸಾಲಿನ ಬೇಡಿಕೆಯನ್ನು ಪರಿಗಣಿಸಿ, ಗೂಡುದೀಪಗಳನ್ನು ತರಿಸಿಕೊಳ್ಳುತ್ತಿದ್ದು, ತಂದಿರುವ ಬಹುತೇಕ ಗೂಡುದೀಪಗಳು ಮಾರಾಟವಾಗುತ್ತದೆ. ಜತೆಗೆ ನಮ್ಮದೇ ವರ್ತಕರು ಬೇರೆ ಎಲ್ಲಿಯೂ ಖರೀದಿಸದೆ, ನಮ್ಮ ಅಂಗಡಿಯಿಂದಲೇ ಖರೀದಿಸುತ್ತಾರೆ ಎಂದು ವರ್ತಕರು ಅಭಿಪ್ರಾಯಿಸುತ್ತಾರೆ. ಒಂದೊಂದು ಅಂಗಡಿಗಳಿಂದ ವಾರ್ಷಿಕ 300ಕ್ಕೂ ಅಧಿಕ ಗೂಡುದೀಪಗಳು ಮಾರಾಟವಾಗುತ್ತವೆ.
Related Articles
Advertisement
ಹಣತೆಗೂ ಬೇಡಿಕೆ ಗೂಡುದೀಪಗಳ ಜತೆಗೆ ಹಣತೆಗಳಿಗೂ ಉತ್ತಮ ವ್ಯಾಪಾರ ಇರುತ್ತದೆ. ಹೀಗಾಗಿ ಅತ್ಯಾಕರ್ಷಕ ಹಣತೆಗಳು ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳ್ತಂಗಡಿಯ ಮಾರುಕಟ್ಟೆಯಲ್ಲಿ 10ಕ್ಕೂ ಅಧಿಕ ವೆರೈಟಿಯ ಹಣತೆಗಳಿವೆ. 3 ರೂ.ಗಳಿಗೆ ಸಿಂಗಲ್ ಹಣತೆಯ ಧಾರಣೆ ಆರಂಭಗೊಂಡರೆ ಸೆಟ್‌ಗೆ 30ರಿಂದ 40 ರೂ.ಗಳವರೆಗೆ ಇರುತ್ತದೆ. ಮಣ್ಣಿನ ಹಣತೆ, ಗಾಜಿನ ರೀತಿಯ ಹಣತೆ, ಆಕರ್ಷಕ ಬಣ್ಣದ ಹಣತೆಯ ಸೆಟ್‌ಗಳು, ಮೇಣದ ಹಣತೆಗಳು ಹೀಗೆ ಬೇರೆ ಬೇರೆ ರೀತಿಯ ಹಣತೆಗಳು ಇವೆ. ಉತ್ತಮ ವ್ಯಾಪಾರ
40 ವರ್ಷಗಳಿಂದ ಗೂಡುದೀಪ, ಹಣತೆಯ ವ್ಯಾಪಾರ ಮಾಡುತ್ತಿದ್ದೇವೆ. ಪ್ರತಿವರ್ಷವೂ ಉತ್ತಮ ವ್ಯಾಪಾರವಿದೆ. ನಿರ್ದಿಷ್ಟ ಗ್ರಾಹಕರು ಪ್ರತಿವರ್ಷ ನಮ್ಮಲ್ಲೇ ಖರೀದಿಸುವುದರಿಂದ 250ರಿಂದ 300 ಗೂಡುದೀಪಗಳು ಮಾರಾಟವಾಗುತ್ತವೆ. ಗೂಡುದೀಪಗಳು ಪ್ಯಾಕ್‌ನಲ್ಲಿ ಬರುತ್ತಿದ್ದು, ಅವುಗಳನ್ನು ಬಿಡಿಸಿ ಸೂಕ್ತ ರೀತಿಯಲ್ಲಿ ಜೋಡಿಸಿ ಮಾರಾಟ ಮಾಡುತ್ತೇವೆ.
- ಕೆ.ಎನ್. ಗೋಪಾಲಕೃಷ್ಣ ಭಟ್
ವರ್ತಕರು, ಬೆಳ್ತಂಗಡಿ ಕಿರಣ್ ಸರಪಾಡಿ