ಸದ್ಯ ಕೊರೊನಾ ಮಹಾಮಾರಿಯ ಹೊಡೆತಕ್ಕೆ ಜಗತ್ತಿನ ಬಹುತೇಕ ಜನರು, ಅನೇಕ ರಂಗಗಳು ನಲುಗಿ ಹೋಗು ತ್ತಿದೆ. ಕೊರೊನಾ ಮೃತ್ಯು ವರ್ತುಲದಿಂದ ಹೊರಬರುವುದು ಯಾವಾಗ? ಹೇಗೆ ಎನ್ನುವ ಚಿಂತೆಯಲ್ಲಿ ಅನೇಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್ನು ಎಲ್ಲ ರಂಗಗಳಂತೆ ಚಿತ್ರರಂಗದ ಮೇಲೂ ಕೊರೊನಾ ಎಫೆಕ್ಟ್ ಜೋರಾಗಿಯೇ ತಟ್ಟುತ್ತಿದೆ. ಯಾವಾಗಲೂ ಮುಹೂರ್ತ, ಶೂಟಿಂಗ್, ಪಬ್ಲಿಸಿಟಿ, ಪ್ರಮೋಶನ್, ರಿಲೀಸ್, ಸಕ್ಸಸ್ ಸೆಲೆಬ್ರೇಶನ್ ಅಂಥ ರಂಗುರಂಗಾಗಿ ಕಳೆಕಟ್ಟಿರುತ್ತಿದ್ದ ಚಿತ್ರರಂಗ, ಸದ್ಯಕ್ಕೆ ಅದ್ಯಾವುದೂ ಇಲ್ಲದೆ ಕಂಪ್ಲೀಟ್ ಲಾಕ್ ಡೌನ್ ಆಗಿ ಬಣಗುಡುತ್ತಿದೆ. ಮತ್ತೂಂದೆಡೆ, ಈಗಾಗಲೇ ಅಧಂಬರ್ಧ ಶೂಟಿಂಗ್ ಮಾಡಿರುವ ಚಿತ್ರತಂಡಗಳು ಇನ್ನುಳಿದ ಚಿತ್ರೀಕರಣ ಹೇಗೆ ಮಾಡೋದು, ಯಾವಾಗ ಮಾಡೋದು ಅನ್ನೋ ಚಿಂತೆಯಲ್ಲಿವೆ. ಇವೆಲ್ಲದರ ನಡುವೆಯೇ ಕೆಲ ನಿರ್ದೇಶಕರು, ನಿರ್ಮಾಪಕರು ಲಭ್ಯವಿರುವ ತಂತ್ರಜ್ಞಾನ ವನ್ನೇ ಸಮರ್ಥವಾಗಿ ಬಳಸಿಕೊಂಡು ಸಿನಿಮಾ ಕಂಪ್ಲೀಟ್ ಮಾಡೋದು ಹೇಗೆ ಎನ್ನುವ ಚಿಂತನೆಯನ್ನೂ ನಡೆಸುತ್ತಿದ್ದಾರೆ. ಈ ಬಗ್ಗೆ ಒಂದು ರೌಂಡಪ್ ಸಿನಿಮಾಸಕ್ತರಿಗಾಗಿ…
ಈಗಿನ ಪರಿಸ್ಥಿತಿಯಲ್ಲಿ ಹೊಸಚಿತ್ರಗಳ ಶೂಟಿಂಗ್ ಶುರು ಮಾಡಬೇಕಾ ಅಥವಾ ಅರ್ಧಕ್ಕೆ ನಿಂತಿರುವ ಚಿತ್ರಗಳ ಶೂಟಿಂಗ್ ಆದರೂ ಮೊದಲು ಕಂಪ್ಲೀಟ್ ಮಾಡಬೇಕಾ ಅಂಥ ಗೊಂದಲವಿದೆ. ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಚಿತ್ರೋದ್ಯಮದ ಅನುಭವಿಗಳು, ಹಿರಿಯರು ಹೇಳುವ ಕಿವಿಮಾತು ಬೇರೆಯದ್ದೇ ಇದೆ. ಪರಿಸ್ಥಿತಿ ಕೊಂಚ ತಿಳಿಯಾದ ಬಳಿಕವಷ್ಟೇ ಶೂಟಿಂಗ್, ಪ್ರಮೋಶನ್, ರಿಲೀಸ್ ಈ ಥರದ ಕೆಲಸಗಳಿಗೆ ಕೈ ಹಾಕುವುದು ಒಳ್ಳೆಯದು. ಅಲ್ಲಿಯವರೆಗೆ ಮುಂದೆ ಸಿನಿಮಾ ಶೂಟಿಂಗ್ ಮಾಡಬೇಕೆನ್ನು ವವರು ಒಂದಷ್ಟು ಪ್ರೀ-ಪೊಡಕ್ಷನ್ ಕೆಲಸಗಳನ್ನ, ಈಗಾಗಲೇ ಸ್ವಲ್ಪ ಮಟ್ಟಿಗೆ ಶೂಟಿಂಗ್ ಆಗಿರುವ ಸಿನಿಮಾಗಳು ತಮ್ಮ ಎಡಿಟಿಂಗ್, ಸಿ.ಜಿ, ಮತ್ತಿತರ ಪೋಸ್ಟ್ ಪೊಡಕ್ಷನ್ ಕೆಲಸ ಗಳನ್ನು ಮಾಡುವುದು ಒಳ್ಳೆಯದು ಎನ್ನುವವರೂ ಇದ್ದಾರೆ. ಇನ್ನೂ ಕೆಲವು ಸಿನಿಮಾಗಳು ಕೊನೆಹಂತದ ಕೆಲವೇ ದಿನಗಳ ಶೂಟಿಂಗ್ ಮಾತ್ರ ಬಾಕಿಯಿದೆ ಎನ್ನುವಾಗಲೇ ಶೂಟಿಂಗ್ ನಿಲ್ಲಿಸಿದ್ದರಿಂದ ಆ ಚಿತ್ರಗಳ ನಿರ್ಮಾಪಕರು ಮತ್ತು ನಿರ್ದೇಶ ಕರು ಗ್ರೀನ್ ಮ್ಯಾಟ್ ಅಥವಾ ಸಿ.ಜಿ ಮತ್ತಿತರ ತಂತ್ರಜ್ಞಾನ ಗಳನ್ನು ಬಳಸಿಕೊಂಡು ತಮ್ಮ ಚಿತ್ರಗಳನ್ನು ಪೂರ್ಣಗೊಳಿ ಸುವುದು ಒಳ್ಳೆಯದು ಎನ್ನುವುದು ಮತ್ತೂಂದು ಮಾತು.
ಸಿನಿಮಾ ಮಂದಿ ಏನಂತಾರೆ…. : ಸದ್ಯ ಕೊರೊನಾದಿಂದ ತೊಂದರೆ ಹಾಗೂ ಮುಂದೆ ಚಿತ್ರರಂಗ ಎದುರಿಸಬೇಕಾದ ಪರಿಸ್ಥಿತಿಯ ಬಗ್ಗೆ ಮಾತ ನಾಡುವ ನಿರ್ದೇಶಕ ಕಂ ನಿರ್ಮಾಪಕ ಗುರುದೇಶಪಾಂಡೆ, ಸದ್ಯದ ಮಟ್ಟಿಗೆ ಹೊಸ ಸಿನಿಮಾಗಳು ಶೂಟಿಂಗ್ ಶುರು ಮಾಡದಿರುವುದೇ ಒಳ್ಳೆಯದು. ಇನ್ನು ಈಗಾಗಲೇ ಅಂತಿಮ ಹಂತದ ಶೂಟಿಂಗ್‌ಗೆ ಬಂದಿರುವ ಸಿನಿಮಾಗಳು ಬಾಕಿ ಯಿರುವ ದೃಶ್ಯಗಳನ್ನು ಇನ್ ಡೋರ್ ಅಥವಾ ಗ್ರೀನ್ ಮ್ಯಾಟ್ ಥರದ ಬೇರೆ ಟೆಕ್ನಾಲಜಿಗಳನ್ನು ಬಳಸಿಕೊಂಡು ಶೂಟಿಂಗ್ ಮುಗಿಸುವುದು ಒಳ್ಳೆಯದು. ಆದರೆ ಸಿನಿಮಾ ರಿಲೀಸ್ ಆಗಬೇಕು ಅಂದ್ರೆ ಜನ ಥಿಯೇಟರ್‌ಗೆ ಬರಲೇ ಬೇಕು. ಅದು ಯಾವಾಗ, ಎಷ್ಟು ಟೆ„ಮ್ ತೆಗೆದುಕೊಳ್ಳುತ್ತೆ ಅನ್ನೋದನ್ನ ಈಗಲೇ ಹೇಳಲಾಗದು.
ಈಗಾಗಲೇ ಶೂಟಿಂಗ್ ಕೊನೆ ಹಂತದಲ್ಲಿರುವ ಸಿನಿಮಾಗಳು ನಿಧಾನವಾಗಿ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿದರೆ, ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಸಿನಿಮಾ ರಿಲೀಸ್ ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಜೇಯ್ ರಾವ್ ಜೊತೆ ಮಾಡಬೇಕಾಗಿದ್ದ ಹೊಸಚಿತ್ರವನ್ನು ಮುಂದೂಡಿರುವಗುರುದೇಶಪಾಂಡೆ, ಕೊರೊನಾ ದೂರವಾದ ಬಳಿಕವಷ್ಟೇ ನಮ್ಮ ಹೊಸಚಿತ್ರದ ಶೂಟಿಂಗ್ ಬಗ್ಗೆ ಮಾತು ಎನ್ನುತ್ತಾರೆ. ಇನ್ನು ಈಗಾಗಲೇ ನಟನೆ ಮತ್ತು ನಿರ್ದೇಶನದ ಎರಡು- ಮೂರು ಚಿತ್ರಗಳನ್ನು ಕೈಯಲ್ಲಿಟ್ಟುಕೊಂಡಿ ರುವ ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಕೂಡ, ಸಿನಿಮಾ ಶೂಟಿಂಗ್ ಮಾಡುವ ಉತ್ಸಾಹದಲ್ಲಿದ್ದರೂ, ಅದಕ್ಕೆ ಪೂರಕ ವಾತಾವರ ಣವಿಲ್ಲದಿರುವುದು ಅವರ ಶೂಟಿಂಗ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ. ಈ ಬಗ್ಗೆ ಮಾತನಾಡುವ ರಿಷಭ್ ಶೆಟ್ಟಿ, ”ಮೊದ ಲಿನಿಂದಲೂ ನನ್ನ ಸಿನಿಮಾಗಳನ್ನು ಆದಷ್ಟು ಕಡಿಮೆ ಸಂಖ್ಯೆಯ ಕಲಾವಿದರು, ತಂತ್ರಜ್ಞರನ್ನು ಇಟ್ಟುಕೊಂಡು ಮಾಡುತ್ತ ಬರುತ್ತಿದ್ದೇನೆ.
ಈಗ ಆ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡಿಕೊಂಡು ಮಾಡಬೇಕಾಗಿದೆ. ಇನ್ನು ನಮ್ಮ ಸಿನಿಮಾಗಳಲ್ಲಿ ಹೊರರಾಜ್ಯ, ವಿದೇಶಗಳ ಸನ್ನಿವೇಶಗಳು ಅಷ್ಟಗಿ ಇಲ್ಲದಿರುವುದರಿಂದ, ತೀರಾ ಔಟ್ ಡೋರ್ ಶೂಟಿಂಗ್ ಸಮಸ್ಯೆಯಾಗದು. ಆದರೆ ಕೆಲವರು ಬೇರೆ ಬೇರೆ ಲೊಕೇಶನ್ಸ್ ಮತ್ತಿತರ ಸಂಗತಿಗಳನ್ನು ಗಮನದಲ್ಲಿ ಇಟು ಕೊಂಡು ಸ್ಕ್ರಿಪ್ಟ್ ಮಾಡಿಕೊಂಡಿರುತ್ತಾರೆ. ಅಂಥವರು ತಮ್ಮ ಸ್ಕ್ರಿಪ್ಟ್ನಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗ ಬಹುದು ಅಥವಾ ಬೇರೆ ಏನಾದ್ರೂ ತಂತ್ರಜ್ಞಾನದ ಬೇರೆ ಮಾರ್ಗಗಳನ್ನು ಹುಡುಕಬೇಕಾಗಬಹುದು’ ಎನ್ನುತ್ತಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ನಿರ್ದೇಶಕ ಪವನ್ ಒಡೆಯರ್ ಅವರ ರೆಮೋ ಚಿತ್ರದ್ದು ಬೇರೆಯದ್ದೇ ಕಥೆ.
ಸದ್ಯ ಟಾಕಿ ಪೋರ್ಷನ್ ಮುಗಿಸಿರುವ ಪವನ್ ಒಡೆಯರ್ ಚಿತ್ರದ ಕೇವಲ ಎರಡು ಹಾಡುಗಳನ್ನಷ್ಟೇ ಬಾಕಿ ಉಳಿಸಿಕೊಂಡಿದ್ದಾರೆ. ಅದರಲ್ಲಿ ಒಂದು ಹಾಡನ್ನು ಗ್ರೀನ್‌ಮ್ಯಾಟ್ ಮತ್ತಿತರ ತಂತ್ರಜ್ಞಾನ ಬಳಸಿ ಶೂಟಿಂಗ್ ಮಾಡುವ ಯೋಚನೆಯಲ್ಲಿರುವ ಪವನ್. ಆದರೆ ಬರೋಬ್ಬರಿ ಒಂದು ಸಾವಿರ ಸಹ ಕಲಾವಿದರು ಹಾಕಿ ರಿಚ್ ಆಗಿ ಚಿತ್ರಿಸಬೇಕೆಂದು ಪ್ಲಾನ್ ಹಾಕಿದ್ದ ಹೀರೋ ಎಂಟ್ರಿಯ ಮತ್ತೂಂದು ಮಾಸ್ ಸಾಂಗ್ ಶೂಟಿಂಗ್ ಮಾಡೋದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಒಟ್ಟಾರೆ ಸದ್ಯದ ಮಟ್ಟಿಗೆ ಆದಷ್ಟು ಔಟ್ ಡೋರ್ ಶೂಟಿಂಗ್ ಬದಲು, ಇನ್ ಡೋರ್ ಶೂಟಿಂಗ್ ಅಥವಾ ಟೆಕ್ನಾಲಜಿ ಬಳಸಿಕೊಂಡು ಶೂಟಿಂಗ್ ಮಾಡುವುದು ಒಳ್ಳೆಯದು ಅನ್ನೋದು ಬಹುತೇಕರ ಒಕ್ಕೊರಲ ಅಭಿಪ್ರಾಯ.
* ಜಿ,ಎಸ್. ಕಾರ್ತಿಕ ಸುಧನ್