Advertisement

ಹಂಪ್ಸ್‌ಗಳಿಗೆ ಬಣ್ಣ ಇರಲಿ ಮಳೆಗಾಲದ ಆತಂಕ ದೂರವಾಗಲಿ

12:15 PM May 05, 2022 | Team Udayavani |

ಮಹಾನಗರ: ವಾಹನಗಳ ವೇಗ ನಿಯಂತ್ರಣಕ್ಕಾಗಿ ನಗರದ ವಿವಿಧ ರಸ್ತೆಗಳಲ್ಲಿ ಹಂಪ್ಸ್‌ ಅಳವಡಿಸಲಾಗಿದೆ; ಆದರೆ, ಬಹುತೇಕ ರಸ್ತೆಗಳ ಹಂಪ್ಸ್‌ಗಳ ಬಣ್ಣ ಮಾತ್ರ ಮಾಸಿ ಹೋಗಿದೆ. ಅಪಘಾತ ನಿಯಂತ್ರಣಕ್ಕಾಗಿ ಅಳ ವಡಿಸಿದ್ದ ಹಂಪ್ಸ್‌ಗಳು ಮುಂದಿನ ಮಳೆಗಾಲದ ಸಮಯಕ್ಕೆ ಅಪಘಾತಕ್ಕೆ ಕಾರಣವಾಗುವ ಪರಿಸ್ಥಿತಿಯಲ್ಲಿದೆ!

Advertisement

ಲೇಡಿಹಿಲ್‌ನಿಂದ ಕೊಟ್ಟಾರ, ಕಾಪಿಕಾಡ್‌, ಬಲ್ಲಾಳ್‌ಬಾಗ್‌, ಉರ್ವಸ್ಟೋರ್‌, ಪಂಪ್‌ ವೆಲ್‌, ಬೆಂದೂರ್‌ವೆಲ್‌, ಬಂಟ್ಸ್‌ಹಾಸ್ಟೆಲ್‌ ಬಳಿ, ಕರಾವಳಿ ಉತ್ಸವ ಮೈದಾನ ಬಳಿ, ಕುದ್ರೋಳಿ ಸಹಿತ ನಗರದ ವಿವಿಧೆಡೆ ಹಾಕಿರುವ ಹಂಪ್ಸ್‌ಗಳಲ್ಲಿ ಈಗ ಬಣ್ಣವೇ ಇಲ್ಲ. ಮಳೆಗಾಲ ಹತ್ತಿರವಾಗುತ್ತಿರುವ ಸದ್ಯ ಸಂದರ್ಭದಲ್ಲಿ ಗೊತ್ತೇ ಆಗದ ಹಂಪ್ಸ್‌ ಇರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

ಹಂಪ್ಸ್‌ಗಳ ಬಣ್ಣ ಮಾಸಿದ ಪರಿಣಾಮ ನಗರದ ಬಹುತೇಕ ಭಾಗದಲ್ಲಿ ಅಪಘಾತ ವಲಯ ಸೃಷ್ಟಿಯಾಗಿವೆ. ಹಂಪ್ಸ್‌ ಬಗ್ಗೆ ತಿಳಿಯದೆ ವೇಗವಾಗಿ ಬಂದರೆ ವಾಹನಗಳಿಗೆ ಅಪಾಯ ಕಟ್ಟಿಟ್ಟಬುತ್ತಿ. ಅದರಲ್ಲೂ ವಿವಿಧ ಕಡೆಗಳಲ್ಲಿ ರಸ್ತೆಯುಬ್ಬುಗಳಿಗೆ ಹಾಕಿದ ಬಿಳಿ ಬಣ್ಣ ಕಾಣದೆ ರಾತ್ರಿ ಸಂಚರಿಸುವವರಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ.

ನಗರದ ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ಹಂಪ್ಸ್‌ ಕಾರಣದಿಂದಾಗಿ ಈ ಹಿಂದೆ ಅಪಘಾತಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಬಹುತೇಕ ಕಡೆಗಳಲ್ಲಿ ವೈಜ್ಞಾನಿಕ ರೀತಿಯ ಐಆರ್‌ಸಿ ಮಾದರಿಯ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಈ ಕಾರಣದಿಂದ ‘ರಬ್ಬರ್‌ ಹಂಪ್ಸ್‌’ಗಳನ್ನು ತೆರವು ಮಾಡಲಾಗಿದೆ. ಹೊಸ ಹಂಪ್ಸ್‌ಗಳು ಆದ ಕೂಡಲೇ ಬಣ್ಣ ಬಳಿದಿದ್ದು, ಅದು ನಿತ್ಯ ವಾಹನ ಸಂಚಾರದಿಂದ ಮಾಸಿ ಹೋಗಿವೆ. ಈಗ ಮತ್ತೂಮ್ಮೆ ಬಣ್ಣ ಬಳಿಯಬೇಕಾಗಿದೆ.

Advertisement

ಹಂಪ್ಸ್‌ ಮಾಯ!

ಕೊಟ್ಟಾರಚೌಕಿ ಫ್ಲೈಓವರ್‌ ಕೆಳಗಡೆ, ಚಿಲಿಂಬಿ, ಬೆಂದೂರ್‌ ಸಹಿತ ನಗರದ ಕೆಲವು ಹಂಪ್ಸ್‌ಗಳಲ್ಲಿ ಬಣ್ಣ ಮಾಸಿದ್ದು ಮಾತ್ರವಲ್ಲ; ಹಂಪ್ಸ್‌ ಕೂಡ ಮಾಯವಾಗಿವೆ. ಈ ಪೈಕಿ ಕೆಲವೆಡೆ ಹಂಪ್ಸ್‌ನ ಕೆಲವು ಭಾಗದ ಡಾಮರು ಕಿತ್ತೋಗಿದೆ. ಇಲ್ಲಿ ವಾಹನ ಸವಾರರು ಸರ್ಕಸ್‌ ಮಾಡಬೇಕಿದೆ.

ಸೂಕ್ತ ಕ್ರಮ

ನಗರದ ಕೆಲವು ಹಂಪ್ಸ್‌ಗಳ ಬಣ್ಣ ಮಾಸಿದೆ. ಕೆಲವೇ ದಿನದಲ್ಲಿ ಹಂಪ್ಸ್‌ಗಳಿಗೆ ಬಣ್ಣ ಬಳಿಯಲು ಹಾಗೂ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. -ಪ್ರೇಮಾನಂದ ಶೆಟ್ಟಿ, ಮೇಯರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next