Advertisement

ಶಾಲಾ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ತಾರ

12:59 AM Apr 28, 2019 | mahesh |

ಕೈರಂಗಳ: “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಸಿನೆಮಾ ಮೂಲಕ ಸುದ್ದಿ ಮಾಡಿದ ಶಿಥಿಲಾವಸ್ಥೆಯಲ್ಲಿದ್ದ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ದುಗ್ಗಜ್ಜರ ಕಟ್ಟೆಯ ಖಾಸಗಿ ಅನುದಾನಿತ ಶಾಲೆ ಈಗ ಹೊಸ ರೂಪ ಪಡೆಯುತ್ತಿದೆ.

Advertisement

ಕಾಸರಗೋಡು ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ರಿಷಬ್‌ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣಗೊಂಡ ಈ ಚಲನಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದಿದ್ದು, ಸಿನೆಮಾದ ಪ್ರಮುಖ ಕಥಾಭಾಗ ದುಗ್ಗಜ್ಜರಕಟ್ಟೆಯ ಖಾಸಗಿ ಅನುದಾನಿತ ಶಾಲೆ ಚಿತ್ರೀಕರಣಗೊಂಡಿತ್ತು. ಸುಮಾರು 118 ವರ್ಷಗಳ ಇತಿಹಾಸ ವಿರುವ ಈ ಶಾಲೆಯಲ್ಲಿ ಚಿತ್ರೀಕರಣ ನಡೆಸಿದ ಸಿನೆಮಾ ಯಶಸ್ಸಿನ ಬಳಿಕ ನಿರಂತರವಾಗಿ ರಿಷಭ್‌ ಶೆಟ್ಟಿ ಮತ್ತು ತಂಡ ಈ ಶಾಲೆಯ ಸಂಪರ್ಕದಲ್ಲಿದ್ದುಕೊಂಡು, ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದರು. ಶಿಥಿಲಾವಸ್ಥೆಯಲ್ಲಿದ್ದ ಶಾಲೆಯ ಛಾವಣಿ ಮರು ನಿರ್ಮಾಣ ಕಾರ್ಯ ಮುಗಿದ ಬಳಿಕ ಈಗ ಶಾಲೆಯ ಗೋಡೆಗಳಲ್ಲಿ ಬಣ್ಣಬಣ್ಣದ ಚಿತ್ತಾರ ಮೂಡಿ ಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ 25 ದಿನಗಳಿಂದ ಶಾಲೆಯ ಗೋಡೆಗಳಲ್ಲಿ ಬಣ್ಣದ ಚಿತ್ತಾರಗಳನ್ನು ಮೂಡಿಸುವ ಕಾಯಕದಲ್ಲಿ ಮಂಗಳೂರಿನ ಬೋಗನ್‌ ಆರ್ಟ್‌ ವಿಲ್ಲಾದ ಆರು ಮಂದಿ ಕಲಾವಿದರು ತೊಡಗಿಸಿಕೊಂಡಿದ್ದಾರೆ.

ತುಳುನಾಡಿನ ಸಂಸ್ಕೃತಿ
ತನ್ಹಾ ಬೋಗನ್‌ ನೇತೃತ್ವದಲ್ಲಿ ತುಳುನಾಡಿನ ಸಂಸ್ಕೃತಿ, ಜಾನಪದ ಕಲೆಗಳು, ಆಟೋಟ, ಕೃಷಿ ಪರಂಪರೆ, ತುಳುನಾಡಿನ ವೀರರಾದ ಕೋಟಿ ಚೆನ್ನಯ, ಪರಶುರಾಮ, ವೀರರಾಣಿ ಅಬ್ಬಕ್ಕ, ದೈವಾರಾಧನೆ, ಯಕ್ಷಗಾನ ಕಂಬಳ ಸೇರಿದಂತೆ ಸಂಪೂರ್ಣ ತುಳುನಾಡಿನ ಸಂಸ್ಕೃತಿ ಸಾರುವ ಚಿತ್ತಾರಗಳನ್ನು ಗೋಡೆ ಗಳಲ್ಲಿ ಪಡಿ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಭೂಸೇನೆ, ವಾಯುಸೇನೆ, ನೌಕಾದಳಕ್ಕೆ ಸಂಬಂಧಿಸಿದ ಚಿತ್ತಾರಗಳನ್ನೂ ಬರೆಯಲಾಗುತ್ತಿದೆ.

ಶಾಲೆಯ ಗೋಡೆಗಳಲ್ಲಿ ಮೂಡಿಸಿರುವ ಚಿತ್ತಾರಗಳು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಗುಣಮಟ್ಟದ ಪೈಂಟ್‌ ಬಳಸಲಾಗಿದೆ. ಮತದಾನದ ಸಂದರ್ಭದಲ್ಲಿ ಚಿತ್ರಗಳ ಮೇಲೆ ಅಂಟಿಸಿ ರುವ ನೋಟಿಸ್‌ ತೆಗೆಯುವಾಗ ಹಾನಿಯಾಗಿತ್ತು. ಹಾನಿಗೀಡಾದ ಚಿತ್ರಗಳನ್ನು ಸರಿಪಡಿಸಿದ್ದು, ಮುಂದಿನ ಒಂದು ವಾರ ದೊಳಗೆ ಕಾರ್ಯ ಪೂರ್ಣಗೊಳ್ಳಲಿದೆ.

ಹೊಸತನದ ಪರಿಕಲ್ಪನೆ
“ರಿಷಭ್‌ ನನ್ನ ಗೆಳೆಯರಾಗಿದ್ದವರು. ಶಾಲೆಯಲ್ಲಿ ಹೊಸತನದ ಪರಿಕಲ್ಪನೆಯಲ್ಲಿ ಕಲೆಯನ್ನು ಮೂಡಿಸುವ ವಿಚಾರದಲ್ಲಿ ನನ್ನಲ್ಲಿ ಮಾತನಾಡಿದ್ದರು. ಈ ನಿಟ್ಟಿನಲ್ಲಿ ತುಳುನಾಡಿನ ಕಲೆಯನ್ನು ಮೂಡಿಸುವ ನನ್ನ ಪರಿಕಲ್ಪನೆಯನ್ನು ಅವರಿಗೆ ವಿವರಿಸಿದ್ದು, ಇದರಡಿ ಶಾಲೆಯ ಗೋಡೆಯಲ್ಲಿ ಚಿತ್ತಾರ ಮೂಡಿಸಲು ಒಪ್ಪಿಗೆ ನೀಡಿದರು. ಈಗ ರಿಷಭ್‌ ಶೆಟ್ಟಿ ಗೋಡೆಯಲ್ಲಿ ಮೂಡಿರುವ ಚಿತ್ತಾರವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಮೂಲಕ ಶಾಲೆಗೂ, ಕಲೆಯನ್ನು ಮೂಡಿಸಿದ ಕಲಾವಿದರಿಗೂ ಉತ್ತೇಜನ ನೀಡಿದ್ದಾರೆ’ ಎನ್ನುತ್ತಾರೆ ಟೀಮ್‌ ಬೋಗನ್‌ ವಿಲ್ಲಾದ ಕಲಾವಿದೆ ತನ್ಹಾ.

Advertisement

ಹೊಸ ಶಾಲೆ, ಹೊಸ ಕಲಿಕೆ
“ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರದ ಕೊನೆಯಲ್ಲಿ ಮಕ್ಕಳೇ ಶಾಲೆ ಉಳಿಸಿಕೊಂಡ, ರಾಮಣ್ಣ ರೈ ಶಾಲೆಗೆ ಪೈಂಟ್‌ ಮಾಡಿಸಿ ಹೊಸ ಬೋರ್ಡ್‌ ಕೊಡುಗೆ ನೀಡಿದ್ದು ನೆನಪಿರಬಹುದು. ಆದರೆ ಸರಿಯಾದ ಸೌಲಭ್ಯಗಳಿರದೆ ಹೆಚ್ಚು ಕಡಿಮೆ ಕಥೆಯಲ್ಲಿನ ಶಾಲೆಯದ್ದೇ ಸ್ಥಿತಿಯಲ್ಲಿದ್ದ ಚಿತ್ರೀಕರಣಕ್ಕೆ ಬಳಸಿದ್ದ ಕೈರಂಗಳ ಶಾಲೆಗೂ ಏನಾದರೂ ಪುಟ್ಟ ಕೊಡುಗೆಯನ್ನು ನೀಡಬೇಕು ಎಂದು ತೀರ್ಮಾನಿಸಿ ಸರಕಾರಿ ಶಾಲೆ ಉಳಿಸಿ ಕಾರ್ಯಕ್ರಮದಡಿ ಅದರ ದುರಸ್ತಿ ಕಾರ್ಯಕ್ಕೆ ಕೈ ಹಾಕಿದೆವು. ಈಗ ದುರಸ್ತಿ ಕಾರ್ಯ ಮುಗಿದಿದ್ದು, ಚಿತ್ತಾರ ಬಿಡಿಸುವ ಕಾರ್ಯ ನಡೆಯುತ್ತಿದೆ. ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಒಂದು ಹೆಜ್ಜೆ ಇಟ್ಟಿದ್ದೇವೆ’ ಎಂಬುದಾಗಿ ಟ್ವಿಟ್ಟರ್‌ನಲ್ಲಿ ರಿಷಭ್‌ ಶೆಟ್ಟಿ ಬರೆದು ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next