Advertisement

ಮನ ತುಂಬಿಕೊಂಡ ವರ್ಣ ವೈಭವ 

06:28 PM Jan 31, 2020 | mahesh |

ಮಣಿಪಾಲ ಸ್ಕೂಲ್‌ ಆಫ್ ಆರ್ಟ್‌ ಇಪ್ಪತ್ತೆರಡು ವರ್ಷಗಳಿಂದ ಆಸಕ್ತರಿಗೆ ಕಲಾಶಿಕ್ಷಣ ನೀಡುತ್ತಾ ಹಲವು ಪ್ರತಿಭೆಗಳ ಉಜ್ವಲನಕ್ಕೆ ಕಾರಣವಾಗಿದೆ. ಸೂಕ್ತ ಚಿತ್ರಕಲಾ ತರಬೇತಿ, ಆಗಾಗ್ಗೆ ಕಲಾಪ್ರದರ್ಶನ ನಡೆಸಿ ಅನೇಕ ಮರಿಕಲಾವಿದರನ್ನು ಹುಟ್ಟುಹಾಕಿದೆ. ಹಾಗೆ ಈ ಬಾರಿ ಉಡುಪಿಯ ಚಿತ್ರಕಲಾ ಮಹಾವಿದ್ಯಾಲಯದ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ವರ್ಣ ವೈಭವ ಶೀರ್ಷಿಕೆಯಡಿ ಇಪ್ಪತ್ತೂಂದು ಕಲಾವಿದರ ನೂರಾ ಮೂವತ್ಮೂರು ಕಲಾಕೃತಿಗಳ ಪ್ರದರ್ಶನ ನಡೆಸಿದ್ದು ದಾಖಲೆ ಜನರಿಂದ ವೀಕ್ಷಿಸಲ್ಪಟ್ಟಿತು. 

Advertisement

ಕಲಾಪ್ರದರ್ಶನದಲ್ಲಿದ್ದ ಹೆಚ್ಚಿನ ಚಿತ್ರಗಳು ಜಲವರ್ಣ ಮತ್ತು ಆಕ್ರಿಲಿಕ್‌ ಮಾಧ್ಯಮದಲ್ಲಿ ರಚನೆಗೊಂಡಿದ್ದವು. ಉತ್ತಮ ಚೌಕಟ್ಟು ಹೊಂದಿದ್ದು ಅಚ್ಚುಕಟ್ಟಾಗಿ ಪ್ರದರ್ಶನಗೊಂಡಿದ್ದವು. ವಿವಿಧ ವಿಷಯಗಳಾದ ಯಕ್ಷಗಾನ, ಕಂಬಳ, ನೇಮೋತ್ಸವ, ಪೇಜಾವರ ಶ್ರೀ, ದೇವತೆಗಳು, ಮಹಾತ್ಮರು, ಜನಜೀವನ ದೃಶ್ಯಗಳು, ಸ್ತ್ರೀಯರ ಅಲಂಕಾರ, ಡೋಲು ಬಾರಿಸುವವ, ಪ್ರಾಣಿ ಪಕ್ಷಿ ಸಂಕುಲಗಳು, ವಸ್ತುಗಳ ಸ್ಥಿರಚಿತ್ರಣ, ಇತ್ಯಾದಿಗಳು ಅನುಕರಣ-ವೀಕ್ಷಣ-ಕಲ್ಪನ ವಿಧಾನದಲ್ಲಿ ಸೊಗಸುಗೊಂಡಿದ್ದವು. ಚಿತ್ರದೊಳಗೆ ಮುಗ್ಧತೆ, ಬಣ್ಣಗಳ ಪಾರದರ್ಶಕತೆ, ನೆರಳು-ಬೆಳಕಿನ ಗಾಢ ಪರಿಣಾಮ ಬಿಂಬಿತವಾಗಿದ್ದವು. ಕಲಾವಿದರಾದ ಡಾ| ಗುಣಸಾಗರಿ ರಾವ್‌, ಪ್ರತೀಕ್ಷಾ ಪಿ. ಶೆಣೈ, ಸುಬ್ರಹ್ಮಣ್ಯ, ವಿಘ್ನೇಶ್‌ ಎನ್‌. ಸಾಲ್ಯಾನ್‌, ಎಂ.ವಿ.ವಿ.ಎಸ್‌.ಸೃಜಾ, ಪ್ರಜ್ವಲ್‌, ವೈಭವ್‌, ವಿಮಲ್‌, ಪ್ರಸನ್ನ ಕೆ.ಭಟ್‌, ಇಶಾನ್‌ ಭಟ್‌, ಅನನ್ಯಾ ನಾಯಕ್‌, ಶಶಾಂಕ್‌, ಕೆನ್ನೆತ್‌, ಅನ್ವಿಷಾ ಪಾಟೀಲ್‌, ಶಿಶಿರ್‌, ಆದಿತ್ಯ ಎಸ್‌. ಕೆ., ನಿಧಿ ವರ್ಮ, ಹಿಮಾಂಶು ಎಸ್‌. ಕುಂದರ್‌, ಶ್ರೀನಿಧಿ ಎಸ್‌. ನಾಯಕ್‌, ರಾಘವೇಂದ್ರ ಎಫ್. ಎಂ., ಪವನ್‌ ಎಂ. ಮುಂತಾದವರು ಗಮನಾರ್ಹ ಕಲಾಕೃತಿಗಳನ್ನು ಚಿತ್ರಿಸಿದ್ದಾರೆ.

ಯಾವುದೇ ಒಂದು ಚಿತ್ರ ಅದನ್ನು ರಚಿಸಿದ ಕಲಾವಿದನು ಪಡೆದಿರುವ ಮಾರ್ಗದರ್ಶನ, ಅವನು ಅಭಿವೃದ್ಧಿಗೊಳಿಸಿಕೊಂಡಿರುವ ಸೃಜನಶೀಲ ಅಂಶಗಳು ಮತ್ತು ಕೌಶಲ ಹಾಗೂ ವೀಕ್ಷಕ ಕಲಾಕೃತಿಯನ್ನು ಅನುಭವಿಸುವ ರೀತಿ ಈ ಮೂರೂ ಅಂಶಗಳಿಂದ ಪೂರ್ಣಗೊಳ್ಳುತ್ತದೆ. ಮಕ್ಕಳ ಚಿತ್ರಕ್ಕೂ, ಯುವ ಕಲಾವಿದರ ಚಿತ್ರಕ್ಕೂ, ಹಿರಿಯ ಕಲಾವಿದರ ಚಿತ್ರಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಕಲಾ ಪ್ರದರ್ಶನ ವೀಕ್ಷಿಸುವಾಗ ನಾವು ಕಲಾವಿದರ ವಯೋಮಿತಿ ಹಾಗೂ ಅವರು ಬೆಳೆದು ಬಂದ ವಾತಾವರಣಗಳನ್ನು ಗಮನಿಸಬೇಕಾಗುತ್ತದೆ. ಎಲ್ಲವನ್ನೂ ಒಂದೇ ದೃಷ್ಟಿಕೋನದಿಂದ ಅಳೆಯಲಾಗುವುದಿಲ್ಲ. ಮಕ್ಕಳ ಚಿತ್ರದಲ್ಲಿ ಮುಗ್ಧತೆ, ನೇರ ವರ್ಣಸಂಯೋಜನೆ ಇದ್ದರೆ ಯುವಕರ ಕಲಾಕೃತಿಗಳಲ್ಲಿ ಹಾತೊರೆಯುವ ಭಾವನೆಗಳು ಮೂರ್ತ-ಅಮೂರ್ತ ಸ್ವರೂಪದಲ್ಲಿರುತ್ತದೆ. ಕೆಲವೊಮ್ಮೆ ಕ್ಯಾನ್ವಾಸಿನಾಚೆಗೂ ಹರಿದಿರುವ ಭಾವನೆಗಳನ್ನು ಆ ಸೀಮಿತ ಚೌಕಟ್ಟಿನಲ್ಲಿ ಬಂಧಿಸಿಡುವ ಸಮಸ್ಯೆ ಎದುರಾದಾಗ ಹಿರಿಯ ಕಲಾವಿದರ ಮಾರ್ಗದಶ‌ìನ ಬೇಕಾಗುತ್ತದೆ.

ಉಪಾಧ್ಯಾಯ ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next