Advertisement

ಬಣ್ಣ, ಭಾವ ಮತ್ತು ನನ್ನ ಬದುಕು

04:16 PM Mar 26, 2019 | |

ದಾಸರ ಪದಗಳ ಹರಿಕಾರ ವಿದ್ಯಾಭೂಷಣರ ಜೀವನ ಕಥನ “ನೆನಪೇ ಸಂಗೀತ’ ಕೃತಿಯ ಆಯ್ದ ಭಾಗವಿದು. ಪ್ರಕೃತಿ ಪ್ರಕಾಶನದ ಮೂರನೇ ಹೊತ್ತಗೆ. ಈ ಕೃತಿಯು ಜ.19ರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಬಿಡುಗಡೆಗೊಳ್ಳುತ್ತಿದೆ. ಅಂದು ಜಯಂತ್‌ ಕಾಯ್ಕಿಣಿ, ಅಬ್ದುಲ್‌ ರಶೀದ್‌, ಲಕ್ಷ್ಮೀಶ ತೋಳ್ಪಾಡಿ ಹಾಗೂ ವಿದ್ಯಾಭೂಷಣರು ಉಪಸ್ಥಿತರಿರುತ್ತಾರೆ…

Advertisement

ಕಣ್ಣು ಬಣ್ಣಗಳನ್ನು ಗ್ರಹಿಸುತ್ತದೆ. ಕಣ್ಣು ಮುಖಕ್ಕೇ ಬಣ್ಣ ಕೊಡುವ ಒಂದು ವಿಶಿಷ್ಟ ದೇಹಾವಯವ. ಕಣ್ಣನ್ನು ನೋಡಿಯೇ ವ್ಯಕ್ತಿಯ ಮನದ ಬಣ್ಣ ಭಾವನೆಗಳನ್ನು ಓದಿಬಿಡಬಹುದು! “ಬಾಯಿ ಬಿಟ್ಟರೆ ಬಣ್ಣಗೇಡು’ ಎಂಬಂತೆ. ವ್ಯಕ್ತಿಯ ಭಾವನೆಗಳಿಗೆ ಅನುಗುಣವಾಗಿ ಬಣ್ಣಗಳು ಕಣ್ಣಿಗೆ, ಮನಕ್ಕೆ ಹಿತವೆನಿಸಬಹುದು, ಅಹಿತವೂ ಆಗಬಹುದು. ಕಣ್ಣಿಂದಲೇ ಮನದಲ್ಲಿ ಬಣ್ಣ ಬಣ್ಣದ ಭಾವನೆಗಳು! ಕಣ್ಣೇ ಕಾಮನ ಬೀಜ. ಕಣ್ಣಿಂದಲೇ ನೋಡು ಮೋಕ್ಷಸಾಮ್ರಾಜ್ಯ! ಪ್ರತಿದಿನ ಪ್ರತಿಹೊತ್ತು, ಬಣ್ಣಹೊತ್ತು ಪ್ರಕೃತಿ, ಕಣ್ಣಿಗೆ, ಮನಕ್ಕೆ ಹಿತ- ಅಹಿತಕರವಾಗಿರುತ್ತದೆ. ಸಂಜೆಯ ಹೊಂಬಿಸಿಲು ಬಳಿದ ಹಸಿರು ಎಷ್ಟು ಚಂದ! ಹಾಗೆಯೇ ಮುಂಜಾವಿನದ್ದೂ. ಹೊಸ ಉತ್ಸಾಹದ, ಶಾಲೆಗೆ ಹೊರಡುವ, ಗೆಳೆಯರೊಂದಿಗಿನ ಆ ಬೆಳಗು- ಕಣ್ಣಿಗೆ, ಮೈಗೆ ಹಿತವಾಗಿ ನಿರಂತರ ಸವಿನೆನಪು! ಬ್ಯಾಟು ಹಿಡಿದು ಆಡಲು, ಈಜಲು ಗೆಳೆಯರೊಂದಿಗೆ ಹೊರ ಹೊರಟ ಹೊಂಬಿಸಿಲ ಹಸಿರ ಸಂಜೆ ಇಂದಿಗೂ ಉತ್ಸಾಹದಾಯಿ. ಭಾವಕ್ಕನುಗುಣವಾಗಿ ಬಣ್ಣ!

ನನಗೆ ಮೊದಲಿಂದಲೂ “ಹಸಿರು’ ಇಷ್ಟವೇ. ವಾಸ್ತುತಜ್ಞರೊಬ್ಬರು ಅಂದಿದ್ದರು- “ನಿಮಗೆ ಕೆಂಬಣ್ಣ ಕೂಡಿ ಬರುವುದಿಲ್ಲ!’. ಆದರೂ ಮಣ್ಣಿನ ಕೆಂಪು- ಕಂಪು ನನಗಿಷ್ಟವೇ. ಅದಮಾರಿನ ದೊಡ್ಡ ಶ್ರೀಗಳವರು, ಹಸಿರು ಕಣ್ಣಿಗೆ ಹಿತವೆಂದು ಅನ್ನುತ್ತಿದ್ದರೂ, ಕಪ್ಪು ಬಣ್ಣದ ಕಾರುಗಳನ್ನೇ ಕೊಳ್ಳುತ್ತಿದ್ದರು. ನಾನಾದರೂ ತೆಳು ನೀಲಿ ಬಣ್ಣದ ಕಾರನ್ನೇ ಕೊಂಡಿದ್ದೆ. ನೀಲಿ ಬಣ್ಣವೂ ಹೃದ್ಯವಾದುದೇ. ಮಣ್ಣು- ಹಸಿರು ಸಹಜವಾಗೇ ಸಮರಸಗೊಳ್ಳುತ್ತವೆ. ಅದಕ್ಕೆಂದೇ ಹಿರಿಯರು ಹಸಿರಿನ ಮಧ್ಯೆ ಪರ್ಣಕುಟೀರಕ್ಕೆ ಸಮನಾಗಿ ಮಣ್ಣಿನ ಹೆಂಚಿನ ಮನೆಗಳನ್ನು ಗುಡ್ಡದ ಆಕಾರದಲ್ಲಿ ಕಟ್ಟಿಕೊಂಡರು. ಪ್ರಕೃತಿಯೊಂದಿಗಿನ ಬಾಳ್ವೆ ಸಹ್ಯವಾದುದು.

ಯಾಕೋ ಏನೋ “ಕಾವಿ’ಯ- “ಕೇಸರಿ’ಯ ಬಣ್ಣ ನನಗೆ ಕೂಡಿ ಬರಲಿಲ್ಲ. ಕೆಂಪು ಬಣ್ಣದ ದಾಯಾದಿ ಸಂಬಂಧ ಕಾವಿ- ಕೇಸರಿಗಿದ್ದುದು ಅದಕ್ಕೆ ಕಾರಣವೇನೋ. ಒಮ್ಮೆ ನಾವು ಏಳೆಂಟು ಜನ ಸ್ವಾಮಿಗಳು ಒಂದೆಡೆ ಸೇರಿದ್ದೆವು. ಯತಿ ಸಮ್ಮೇಳನ ವೆಂದಿ ಟ್ಟುಕೊಳ್ಳಿ! ಯಾವುದೋ ಉತ್ಸವದ ಸಂಭ್ರಮವದು. ಅದಕ್ಕೆಂದೇ ಹೊಸಹೊಸ ಎರಡು ಕಾವಿ ವಸ್ತ್ರಗಳನ್ನು ಮೇಲೊಂದು, ಕೆಳಗೊಂದು ತೊಟ್ಟಿದ್ದೆವು. ಒಂದುಕ್ಷಣ ಬೇರೆಯೇ ನಿಂತು, ಎಲ್ಲ ಕಾವಿಧಾರಿಗಳನ್ನು ಗಮನಿಸಿದೆ. ಯಾಕೋ ಏನೋ “ಛೇ’ ಎಂದೆನಿಸಿತು.

ನಮ್ಮಪ್ಪಯ್ಯ ಸರಳವಾಗಿ ತಮ್ಮ 60ನೇ ವರ್ಷದ ಶಾಂತಿಯನ್ನು ಮಾಡಿಕೊಂಡರು. ಹತ್ತಿರದ ಸಂಬಂಧಿಗಳಿಗೆ, ತಮ್ಮ ಮಕ್ಕಳಿಗೆ ವಸ್ತ್ರಗಳನ್ನು, ಉಡುಗೊರೆಯಾಗಿ ನೀಡಿದರು. ನನಗೂ. ಆದರದು ಕಾವಿ ಬಣ್ಣದ ರೇಷ್ಮೆಯ ಪಟ್ಟೆ! ನನಗೆ ನಿಜವಾಗಿಯೂ ತುಂಬಾ ಬೇಸರವೆನಿಸಿತು.

Advertisement

ಪೀಠತ್ಯಾಗ ಮಾಡಿದ ಮೇಲೆ, ಗೃಹಸ್ಥಾಶ್ರಮ ಸ್ವೀಕರಿಸಿದ ಮೇಲೆ ನಮ್ಮ ಮನೆಗೆ ಪೇಜಾವರ ಶ್ರೀಪಾದರನ್ನು ಕರೆದಿದ್ದೆ. ಬಂದಿದ್ದರು. ಹಿಂತೆರಳುತ್ತಾ ಕಾರಿನಲ್ಲಿ ಕುಳಿತವರು ನನ್ನನ್ನು ಕರೆದರು. ಮೆಲುಮಾತಿನಿಂದಲೇ ನುಡಿದರು- “ನಿಮಗೆ ಈ ಬಿಳಿಯ ವಸ್ತ್ರಗಳು ಒಪ್ಪುವುದಿಲ್ಲ. ನಿಮಗೆ ಕಾವಿಯೇ ಚಂದ. ಸ್ವತಃ

ಬಾಲಸಸನ್ಯಾಸಿಗಳಾಗಿದ್ದ ಅವರು ನನ್ನನ್ನು ಮೊದಲ ಸಲ ನೋಡಿದ್ದು ಮತ್ತು ನೋಡುತ್ತಲೇ ಇದ್ದದ್ದು ಕಾವಿಧಾರಿಯಾಗಿದ್ದ ಸಂನ್ಯಾಸಿ ಯನ್ನಾಗಿಯೇ! ನನ್ನ ಹೆಂಡತಿಯೂ ಹೇಳುತ್ತಿರುತ್ತಾಳೆ- “ನಿಮಗೆ, ನಿಮ್ಮ ಮೈಗೆ ಕಾವಿಯೇ ಚೆನ್ನ. ಅವಳೂ ನನ್ನನ್ನು ಮೊದಲು ನೋಡಿದ್ದು, ಕಾವಿ ಧರಿಸಿದವನನ್ನೇ. ಮೊದಲ ನೋಟದಲ್ಲಿನ ಬಣ್ಣ ಮನದಲ್ಲಿ ಸ್ಥಿರವಾಗಿಬಿಟ್ಟಿತು! ಮತ್ತೆ, ಭಾವಕ್ಕನುಗುಣವಾಗಿ ಬಣ್ಣ! ನಮ್ಮ ದೇಶದಲ್ಲಿ, ಸಮಾಜದಲ್ಲಿ ಈ ಬಣ್ಣದ ವಸ್ತ್ರ ಧರಿಸಿದವನನ್ನು ಹಿಂದೆ ಮುಂದೆ ನೋಡದೆ ಜನ ಒಪ್ಪಿಬಿಡುತ್ತಾರೆ! ಎಂದೆಂದೂ ಆತನಿಗೆ ಅಗ್ರ ಮರ್ಯಾದೆಯೇ!

ನನ್ನ ಮಗಳಿಗೆ ಇಷ್ಟವಾದುದು ಗುಲಾಬಿ ಬಣ್ಣ. ಎಲ್ಲದಕ್ಕೂ “ಪಿಂಕ್‌-ಪಿಂಕ್‌’ ಅನ್ನುತ್ತಿರುತ್ತಾಳೆ. ಮಕ್ಕಳು ಓದುವ ಕೊಠಡಿಗೆ ಈ ಬಣ್ಣ ಬಳಿದರೆ ಏಕಾಗ್ರತೆಗೆ ಸಹಕಾರಿಯಂತೆ. ದೇಶ- ವಿದೇಶಗಳಲ್ಲೂ ಸಾಮಾನ್ಯವಾಗಿ ಮಕ್ಕಳಿಗೆ ಈ ಬಣ್ಣ ತುಂಬಾ ಇಷ್ಟ. ಸದಾ ಆಟದಲ್ಲಿ ಮಗ್ನನಾಗುವ ನನ್ನ ಮಗ ಬಣ್ಣದ ಬಗ್ಗೆ ಈಗಿನ್ನೂ ತಲೆಕೆಡಿಸಿಕೊಂಡಿಲ್ಲ. ನನ್ನ ಹೆಂಡತಿಗೆ ಕೆಂಪು ಇಷ್ಟವೇ. ನನಗಂತೂ ಎಲ್ಲ ಬಣ್ಣಗಳ ಸಮಾವೇಶವಾದ ಬಿಳಿಯೇ ಇಷ್ಟ. ನಮ್ಮ ತಂದೆಯವರೂ ಬಿಳಿಯ ವಸ್ತ್ರಗಳನ್ನೇ ತೊಡುತ್ತಿದ್ದರು!

ಒಮ್ಮೆ ಮಂಗಳೂರಿನಲ್ಲಿ ಪೇಜಾವರರ ಪ್ರವಚನ, ನನ್ನ ವಾಚನದೊಂದಿಗೆ ಸಪ್ತಾಹ ಕ್ರಮದಲ್ಲಿ ನಡೆಯಿತು. ನೆಹರೂ ಮೈದಾನದಲ್ಲಿ. ಕೊನೆಯ ದಿನ ಸಂಘಟಕರು ನನಗೊಂದು ಕಾರನ್ನು ಉಡುಗೊರೆಯಾಗಿ ನೀಡಿದರು. ನನ್ನಲ್ಲಿ ಆಗ ಕಾರಿರಲಿಲ್ಲವಾದರೂ, ಪ್ರಾಮಾಣಿಕ ವಾಗಿಯೇ, ಬೇಡ- ಬೇಡವೆಂದೆ. ಒತ್ತಾಯಿಸಿ ನೀಡಿದರು. ಪೇಜಾವರರ ಮೂಲಕ ಕೊಡಿಸಿದರು. ತುಂಬಾ ಸಂಕೋಚಪಟ್ಟು ಕೊಂಡು ಸ್ವೀಕರಿಸಿದೆ. ಆ ಕಾರಿನ ಬಣ್ಣವಾದರೋ ಪೂರ್ತಿ “ಕಾವಿ!’ ಇದೇನಪ್ಪಾ ಗ್ರಹಚಾರ ಅನಿಸಿತು. ಕೆಲವು ತಿಂಗಳು ಆ ಕಾವಿ ಬಣ್ಣದ ಕಾರಿನಲ್ಲೇ ಓಡಾಡಿದೆ. ಆ ದಿನಗಳಲ್ಲಿ ಯಾಕೋ ನನಗೆ ತಲೆನೋವು ಬರುತ್ತಿತ್ತು. ಹಿಂದೆಲ್ಲ ಇರಲಿಲ್ಲ. ಯಾಕೆಂದು ಪರಿಶೀಲಿಸಿದರೆ, ದೂರದೂರ ಸಂಚಾರ ಮಾಡುತ್ತಿದ್ದ ನಾನು ಕಾರಿನ ಮುಂಭಾಗವನ್ನೇ (ಬಾನೆಟ್‌) ಬಿಡದೆ ನೋಡುತ್ತಿದ್ದೆನಾಗಿ, ಆ ಕಾವಿ ಬಣ್ಣವೇ ನನ್ನ ತಲೆನೋವಿಗೆ ಕಾರಣವೆಂದು ತಿಳಿದುಬಿಟ್ಟಿತು. ಹೀಗೋ ಸಮಾಚಾರ? ಒಡನೆ ಪುತ್ತೂರಿನ ಗ್ಯಾರೇಜೊಂದಕ್ಕೆ ಕಾರನ್ನು ಕಳಿಸಿದೆ. ಆಮೂಲಾಗ್ರವಾಗಿ ಕಾರಿನ ಕಾವಿ ಬಣ್ಣವನ್ನು ಕೆರೆದು ತೆಗೆಸಿ, ಬಿಳಿ ಬಣ್ಣವನ್ನು ಕೊಡಿಸಿದೆ! ಮತ್ತೆ ಅದರಲ್ಲಿ ಸಂಚರಿಸಿದೆ. ಭ್ರಮೆಯೋ, ಮತ್ತೂಂದೋ, ನನ್ನ ತಲೆನೋವಂತೂ ಇಲ್ಲವಾಯಿತು! ಒಂದೊಮ್ಮೆ ಕಾರನ್ನು ಉಡುಗೊರೆಯಾಗಿ ನೀಡಿದ ಸಜ್ಜನರ ಕುರಿತಾಗಿ ನನ್ನಲ್ಲಿ ಪಾಪಪ್ರಜ್ಞೆ ಕಾಡಿತ್ತಾದರೂ ನಿರ್ವಾಹವಿರಲಿಲ್ಲ.

ಈ ಕಾಲಕ್ಕೆ ಕಾವಿ- ಕೇಸರಿಗಳು ವೈರಾಗ್ಯದ, ಶಾಂತಿಯ, ತಪದ ಸಂಕೇತವಾಗಿ ಉಳಿದಿದೆಯೇ?  “ಹಸಿರೇ ಉಸಿರು’ ಪ್ರಾಸಬದ್ಧವಾಗಿಯೂ ಚೆನ್ನಾಗಿದೆ. ಮತ್ತದು ವಾಸ್ತವವೂ ಆಗಿದೆ. ಅಭಿವೃದ್ಧಿಯ ಹೆಸರಲ್ಲಿ ನಮ್ಮ ಜಿಲ್ಲೆಯಲ್ಲೂ, ರಾಜ್ಯದಲ್ಲೂ ಪರಿಸರ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿದ್ದರೆ, ಅದನ್ನು ತಡೆಯಲು ಅಲ್ಲಲ್ಲಿ ಹಲವಾರು ಧೀರರು ಸಂಘಟಿಸಿ ಹೋರಾಟ ನಡೆಸುತ್ತಿದ್ದರು. ದೇವರಕಾಡು, ನಾಗಬನದಂಥ ಪರಿಸರ ಸಂರಕ್ಷಣೆಯ ಕುರಿತಾದ ಅದ್ಭುತ ಪರಿಕಲ್ಪನೆ ಬೇರೂರಿರುವ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂಥ ಹೋರಾಟ ಆರಂಭವಾಗಿತ್ತು. ಡಾ. ಶಿವರಾಮ ಕಾರಂತರಂಥ ಹಿರಿಯರ ಬೆಂಬಲ, ಮಾರ್ಗದರ್ಶನ ಅದಕ್ಕಿತ್ತು. ಪೇಜಾವರ ಶ್ರೀಪಾದರಂತೂ ಸ್ವತಃ ತೊಡಗಿಸಿಕೊಂಡಿದ್ದರು. ನಮ್ಮೂರಲ್ಲೂ ಆಸಕ್ತರ ಸಹಕಾರ, ಭಾಗವಹಿಸುವಿಕೆಯೊಂದಿಗೆ “ಪರಿಸರ ಸಂರಕ್ಷಣಾ ವೇದಿಕೆ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಜಾಗೃತಿಯನ್ನುಂಟು ಮಾಡುವ ಕಾರ್ಯಕ್ರಮಗಳನ್ನು, ಗೋಷ್ಠಿಗಳನ್ನು ಮಾಡುತ್ತಿದ್ದೆವು. ಈ ದಿಸೆಯಲ್ಲಿ ತಜ್ಞರಾದ ಜಿಲ್ಲೆಯ ಶಂಪಾ ದೈತೋಟ, ಸೋಮನಾಥ ನಾಯಕ್‌, ರಂಜನ ರಾವ್‌ ಯರ್ಡೂರು, ಆರ್‌.ಎನ್‌. ಭಿಡೆ ಮುಂತಾದವರು ನಮ್ಮನ್ನು ಬೆಂಬಲಿಸಿದರು. ಇದೇ ಸಮಯಕ್ಕೆ “ಪಶ್ಚಿಮಘಟ್ಟ ಉಳಿಸಿ’ ಆಂದೋಲನ ಆರಂಭವಾಯ್ತು. ಸಹ್ಯಾದ್ರಿಯ ಈ ಕೊನೆಯಿಂದ ಆ ಕೊನೆಯತನಕ ಪಾದಯಾತ್ರೆಗಳಲ್ಲಿ ನಾನೂ ಭಾಗವಹಿಸಿದ್ದೆ. ಪಾದಯಾತ್ರೆಗೆ ಪೋಷಕವಾಗಿ “ವನಸಿರಿ’ ಎಂಬ ಧ್ವನಿಸುರುಳಿ ಯೊಂದನ್ನು ಹಾಡಿ ಧ್ವನಿಮುದ್ರಿಸಿ ಪ್ರಚುರಪಡಿಸಿದೆ. ಈ ದಿಸೆಯಲ್ಲಿ ಗುರುವಾಯನಕೆರೆಯ “ನಾಗರಿಕ ಸೇವಾ ಟ್ರಸ್ಟ್‌’ ಸಹಕಾರಿ ಯಾಗಿತ್ತು. ಶಂಪಾ ದೈತೋಟ, ಸುಬ್ರಾಯ ಚೊಕ್ಕಾಡಿ, ಲಕ್ಷ್ಮೀಶ ತೋಳ್ಪಾ³ಡಿ ಯವರ ಪರಿಸರ ಸಂಬಂಧಿ ಗೀತೆಗಳನ್ನು ಅದರಲ್ಲಿ ಹಾಡಿದ್ದೆ. ಡಾ. ಕಾರಂತರು ಆ ಧ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದ್ದರು.

ಪಶ್ಚಿಮ ಘಟ್ಟದ ತಪ್ಪಲಿನ ಕರಾವಳಿಯ ಉದ್ದಗಲ, ಪ್ರತಿಯೊಂದು ಕುಟುಂಬಕ್ಕೆಂಬಂತೆ ನಾಗಬನಗಳಿವೆ. ಅದಕ್ಕೆ ಸಂಬಂಧಪಟ್ಟವರು ತುಂಬಾ ಭಯ- ಭಕ್ತಿಯಿಂದ ಅವುಗಳಿಗೆ ನಡೆದುಕೊಳ್ಳುತ್ತಾರೆ. ಶತಮಾನಗಳಿಂದ ಕೃಷಿಯನ್ನು ಉದ್ದೇಶಿಸಿ, ಕಾಡು ಕಡಿದು, ಭೂಮಿಯನ್ನು ಸಮತಟ್ಟುಗೊಳಿಸಿ ಉಪಯೋಗಿಸುತ್ತಿದ್ದಂತೆ, ಪರಿಸರದ ಸಮತೋಲನೆಯನ್ನು ಕಾಪಾಡಿಕೊಳ್ಳಲು ಗದ್ದೆ, ತೋಟಗಳ ಮಧ್ಯೆಮಧ್ಯೆ ಮರಗಿಡಗಳ ಸಮೂಹವನ್ನು ವನಗಳಂತೆ ಉಳಿಸಿಕೊಳ್ಳುತ್ತಿದ್ದರು. ಮನುಷ್ಯನ ದುರಾಸೆ ಹೆಚ್ಚಿ ಅವುಗಳನ್ನೂ ಕಡಿದು ತಿಂದಾನೆಂದು ಆ ವನಗಳನ್ನು ದೇವ- ನಾಗರ ಹೆಸರಲ್ಲಿ ಮೀಸಲಿರಿಸಿ, ನಂಬಿಕೆ, ಭಯ, ಭಕ್ತಿಯಿಂದ ನಡೆದುಕೊಳ್ಳುವಂತೆ ಮಾಡಿದ್ದರು ನಮ್ಮ ಹಿರಿಯರು! ಇಂದಿಗೂ ಈ ಪ್ರದೇಶದಲ್ಲಿ ನಾಗಾರಾಧನೆ ಮಹತ್ವಪೂರ್ಣ. ನಾಗಾರಾಧನೆ, ನಾಗಮಂಡಲದಂಥ ಕಾರ್ಯಕ್ರಮಗಳಿಗೆ ನಾನು ಹೋದೆನೆಂದರೆ ಧಾರ್ಮಿಕ ಉಪನ್ಯಾಸಗಳಲ್ಲಿ ನಾಗಬನ ಸಂರಕ್ಷಣೆಯ, ಪರಿಸರ ಸಂರಕ್ಷಣೆಯ ಕುರಿತಾಗಿಯೂ ಹೇಳುತ್ತಿದ್ದೆ. ಹಾಗೆಯೇ ನಮ್ಮ ವೇದಿಕೆಯ ವತಿಯಿಂದ “ನಾಡಿವೈದ್ಯ’ದ ಕುರಿತಾದ ಅಪೂರ್ವ ಸಮಾವೇಶ- ಪ್ರದರ್ಶನ ನಡೆಸಿದ್ದೆವು. ಭಾರೀ ಅಣೆಕಟ್ಟುಗಳ ನಿರ್ಮಾಣ, ಅದರಿಂದಾಗುವ ಅರಣ್ಯನಾಶ, ಜೀವವೈವಿಧ್ಯದ ಹಾನಿ ಎಂಬಿವೇ ಮೊದಲಾದ ವಿಷಯಗಳಲ್ಲಿ ಜನಜಾಗೃತಿಯ ಪ್ರಯತ್ನವನ್ನು ಯಥಾಸಾಧ್ಯ ಮಾಡುತ್ತಿದ್ದೆವು.

ರಥಯಾತ್ರೆ ಹೊರಟಿದ್ದ ಎಲ್‌.ಕೆ. ಆಡ್ವಾಣಿಯವರನ್ನು ಬಂಧಿಸಿದಾಗ ನಾಡಿನಾದ್ಯಂತ ಪ್ರತಿಭಟನೆ ನಡೆಯಿತಷ್ಟೇ. ನಮ್ಮ ಕಡೆಯೂ ಬಂಧನವನ್ನು ವಿರೋಧಿಸಿ, ರಸ್ತೆ ಬಂದ್‌ ಆಚರಿಸಲಾಯ್ತು. ಹೇಗೆ ಗೊತ್ತೇ? ರಸ್ತೆಯ ಇಕ್ಕೆಲಗಳಲ್ಲಿ ಸಮೃದ್ಧವಾಗಿ ವರ್ಷಗಳಿಂದ ಬೆಳೆದು ನಿಂತಿದ್ದ, ರಕ್ಷಿತಾರಣ್ಯದ ಬೆಲೆಬಾಳುವ ಜಾತಿಯ ಮರಗಳನ್ನು ರಾತ್ರೋರಾತ್ರಿ, ನಿರ್ದಯವಾಗಿ, ರಸ್ತೆಗೆ ಅಡ್ಡಲಾಗುವಂತೆ ಕಡಿದುರುಳಿಸಿ ಬಂದ್‌ ಆಚರಿಸಿದರು! ಅದೂ ಒಂದೇ- ಎರಡೇ? ಸುಮಾರು ಮುನ್ನೂರು- ನಾನ್ನೂರು ಮರಗಳನ್ನು! ಇಂಥ ಕೃತ್ಯವನ್ನು ದೇಶಭಕ್ತರು ಮಾಡಿದರೆ? ಅಥವಾ ಈ ಸಂದರ್ಭವನ್ನು ಮತ್ತಾರಾದರೂ ದುರುಪಯೋಗ ಪಡಿಸಿಕೊಂಡರೇ? ಜನ ತಲೆಗೊಂದರಂತೆ ಮಾತನಾಡಿಕೊಂಡರು. ನನಗಂತೂ ಸಿಟ್ಟು- ಅಳು- ಮನವೆಲ್ಲ ಕಲಕಿ ಹೋಗಿತ್ತು. ಅನವಶ್ಯ ಮರ ಕಡಿದ ಅನಾಗರಿಕ ಕೃತ್ಯವನ್ನು ಪ್ರತಿಭಟಿಸಿ ಎರಡು ದಿನಗಳ ನಿಟ್ಟುಪವಾಸವನ್ನು ಸಂಕಲ್ಪಿಸಿ ಪತ್ರಿಕೆಗಳಲ್ಲಿ ಹೇಳಿಕೆ ನೀಡಿದೆ. “ದೇವರೇ ಈ ನಮ್ಮ ಜನರಿಗೆ ಒಳ್ಳೆ ಬುದ್ಧಿ ಕೊಡು’ ಎಂದು ಪ್ರಾರ್ಥಿಸಿದೆ. ಊರಿನ ಕೆಲವು ವಿದ್ಯಾವಂತ ದೇಶಭಕ್ತರೇ ಗೊಣಗಿ- ಟೀಕಿಸಿದರಂತೆ. ಆಡ್ವಾಣಿಜೀಯವರನ್ನು ಬಂಧಿಸಿದುದರ ವಿರುದ್ಧ ತಾನೇ ಮರ ಕಡಿದದ್ದು- ಸ್ವಾಮಿಗಳಿಗೇಕೆ ಈ ಉಸಾಬರಿ?!

ನನಗೆ ಇಂದಿಗೂ ಹಸಿರು ಇಷ್ಟವೇ. ಹಲವಾರು ವರುಷಗಳಿಂದ ಅನಿವಾರ್ಯವಾಗಿ ಬೆಂಗಳೂರಿನ ಕಾಂಕ್ರೀಟ್‌ ಕಾಡಿನಲ್ಲಿರುವ ನಾನು ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಾಗಿಲ್ಲ. ಆದರೆ, ಕಾರ್ಯಕ್ರಮಗಳಿಗೆಂದು ಹೊರ ಹೊರಟರೆ ದಾರಿಯಲ್ಲಿ ಸಿಗುವ ಹಸಿರಿನ ಸಿರಿಯನ್ನು, ಗುಡ್ಡಬೆಟ್ಟಗಳ, ನದಿಗಳ ವೈಭವವನ್ನು ಕಂಡೆನಾದರೆ ಮೈಮರೆಯುವೆ. ಮತ್ತದೇ ಗತದ ನೆನಪು. ನನ್ನ ಅಂತರಾಳದ ಆಸೆ ಅದೇ. ಎಂದಾದರೂ ಮತ್ತೆ ಅಸದೃಶ, ಸುಂದರ ಪಶ್ಚಿಮ ಘಟ್ಟದ ಮಡಿಲಲ್ಲಿ ಮನೆಮಾಡಿ ಹಾಯಾಗಿರಬೇಕೆಂದು!

Advertisement

Udayavani is now on Telegram. Click here to join our channel and stay updated with the latest news.

Next