Advertisement
ಮಣಿಪುರದ ಮಹಾರಾಜ ಚಿತ್ರವಾಹನನ ರಾಜಕುವರಿ ಚಿತ್ರಾಂಗದೆ ಗಂಡುಗಲಿಯಂತೆ ಪರಾಕ್ರಮಿಯಾಗಿ ಮಣಿಪುರ ರಾಜ್ಯವನ್ನು ರಕ್ಷಿಸುತ್ತಿರುವ ಸಮಯದಲ್ಲಿ ಅರ್ಜುನನ ಪ್ರವೇಶವಾಗುತ್ತದೆ. ಚಿತ್ರಾಳ ಸಾಹಸಕ್ಕೆ ಪಾರ್ಥನು ತಲೆದೂಗಿದರೂ ಆಕೆಯ ಬಗ್ಗೆ ಪ್ರೇಮಭಾವ ಮೂಡುವುದಿಲ್ಲ, ಇದರಿಂದ ವಿಚಲಿತಳಾದ ಚಿತ್ರಾ ಅರ್ಜುನನ ಮನವೊಲಿಸಲು ಮದನನ ಸಹಾಯ ಬೇಡುವಳು. ಆಕೆಯ ಕೋರಿಕೆಯಂತೆ ಹೂವಿನ ರಥದಲ್ಲಿ ಆಗಮಿಸುವ ಮದನ ಹೊಸತೊಂದು ಭ್ರಮಾಲೋಕವನ್ನೇ ಸೃಷ್ಟಿಸುತ್ತಾನೆ. ಇದಕ್ಕೆ ಪೂರಕವಾಗಿ ವಸಂತನೂ ತನ್ನ ಪ್ರಭಾವದಿಂದ ಗಿಡ ಮರಗಳು ಚಿಗುರುವಂತೆ ಮಾಡಿ ಹಸಿರು ನಂದನವನವನ್ನೇ ಧರೆಗಿಳಿಸುವನು. ತತ್ಪರಿಣಾಮವಾಗಿ ಚಿತ್ರಾಳ ಗಂಡಸ್ತನ ಮಾಯವಾಗಿ ಹೆಣ್ತನ ಮೂಡುವ ಸನ್ನಿವೇಶವನ್ನು ಅತ್ಯಂತ ನಾಜೂಕಾಗಿ ಹಾಗೂ ನವಿರಾಗಿ ಪ್ರಸ್ತುತ ಪಡಿಸಿದ ನಿರ್ದೇಶಕರ ಜಾಣ್ಮೆ ಮೆಚ್ಚುವಂಥಾದ್ದು. ಗಂಡು ಚಿತ್ರಾ ಪೊರೆ ಕಳಚಿಕೊಳ್ಳುವ ಹಾವಿನಂತೆ ಒಂದೊಂದೇ ವಸ್ತ್ರಾಭರಣ ತೆಗೆದಂತೆ ಹೆಣ್ಣು ಚಿತ್ರಾ ಅದೇ ವೇಗ ಹಾಗೂ ತನ್ಮಯತೆಯಿಂದ ಪರಿವರ್ತನೆಯಾಗುವುದು ಹಾಗೂ ಆಕೆ ಗಂಡಸ್ತನದಿಂದ ಹೆಣ್ತನಕ್ಕೆ ಸ್ಥಿತ್ಯಂತರ ಹೊಂದುವ ಪ್ರಕ್ರಿಯೆ ಅತ್ಯಂತ ಸೂಕ್ಷ್ಮವಾಗಿ ಸಾಕಾರಗೊಂಡಿತು. ಚಿತ್ರಾ ಪಾತ್ರಧಾರಿ ವಿ| ಅನಘಶ್ರೀ ಹಾಗೂ ಚಿತ್ರಾಳ ಕುಲಾಂತರಿ ಸ್ವಪ್ನ ಸುಂದರಿ ಪಾತ್ರವಹಿಸಿದ ವಿ| ಧೀಮಹಿಯವರ ಪ್ರೌಢ ವಾಚಿಕ ಹಾಗೂ ಆಂಗಿಕ ಅಭಿನಯ ಅದ್ಭುತವಾಗಿತ್ತು. ತಬಲಾ ನುಡಿಯನ್ನು ಸ್ವಪ್ನ ಸುಂದರಿಯ ಚಲನವಲನಕ್ಕೆ ಹಾಗೂ ಚಿತ್ರಾಳಿಗೆ ಗಂಡು ಧ್ವನಿ ಹಾಗೂ ಸ್ವಪ್ನ ಸುಂದರಿಗೆ ಹೆಣ್ಣು ಧ್ವನಿಯಲ್ಲಿ ಜತಿಸ್ವರ ಅಳವಡಿಸಿಕೊಂಡಿದ್ದು ಸಾಂಕೇತಿಕವಾಗಿ ಪರಿವರ್ತನೆಯನ್ನು ಅರ್ಥಪೂರ್ಣಗೊಳಿಸಿತು. ಸ್ವಪ್ನ ಸುಂದರಿಯ ಸೌಂದರ್ಯಕ್ಕೆ ಮರುಳಾದ ಅರ್ಜುನನನ್ನು ಕಂಡು ಜುಗುಪ್ಸೆಗೊಂಡ ಚಿತ್ರಾ ಪ್ರಜೆಗಳ ಕೋರಿಕೆಯಂತೆ ಮೃಗ ಬೇಟೆಗೆ ಸನ್ನದ್ಧಳಾಗಿ ತನ್ನ ಗಂಡಸ್ತನವನ್ನು ಮರಳಿ ಪಡೆದುಕೊಳ್ಳುವ ಬದಲಾವಣೆಯನ್ನು ಚೆಂಡೆ ಮದ್ದಲೆಗಳ ಹಿನ್ನೆಲೆಯಲ್ಲಿ ಯಕ್ಷಗಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಪ್ರೀತಿ ಕಾಮವೆನ್ನುವುದು ಪರಸ್ಪರ ಆಕರ್ಷಣೆಯಲ್ಲಿ ಒಬ್ಬರನ್ನೊಬ್ಬರು ಆರಾಧಿಸುವ ಅರ್ಥಪೂರ್ಣ ಸಂಬಂಧವೂ ಹೌದು ಎನ್ನುವ ದ್ವಂದ್ವವನ್ನು ಪ್ರಸ್ತುತ ಪಡಿಸಿದ ರೀತಿ ಅನನ್ಯ. ಬಣ್ಣ ಬಣ್ಣದ ಪರಿಕರಗಳು, ಸುಮಧುರ ಸಂಗೀತ, ಹಿತ ಮಿತವಾದ ಬೆಳಕು, ನೇತ್ರಾನಂದಕರಾದ ವಸ್ತ್ರವಿನ್ಯಾಸ “ಚಿತ್ರಾ’ ನೃತ್ಯ ನಾಟಕದ ಒಂದಕ್ಕೊಂದು ಪೂರಕವಾದ ಅಂಶಗಳು.
Advertisement
ಬಣ್ಣದ ಚಿತ್ತಾರ ವರ್ಣಮಯ”ಚಿತ್ರಾ’
12:30 AM Feb 15, 2019 | |
Advertisement
Udayavani is now on Telegram. Click here to join our channel and stay updated with the latest news.