Advertisement

ಕೆಸರು ಗದ್ದೆಯಲ್ಲ, ಕಾಲೋನಿ ರಸ್ತೆ

11:22 AM Jul 28, 2019 | Suhan S |

ಗದಗ: ಹೇಳಿಕೊಳ್ಳಲು ಇವು ಪ್ರತಿಷ್ಠಿತರ ಬಡಾವಣೆಗಳಾದರೂ ಅಲ್ಪಸ್ವಲ್ಪ ಮಳೆಯಾದರೆ ಸಾಕು ಇಲ್ಲಿನ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಯಾಗಿ ಮಾರ್ಪಡುತ್ತವೆ. ಇದರಿಂದಾಗಿ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತುಂಬ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳನ್ನು ದುರಿಸ್ತಿಗೊಳಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲವೆಂದು ಸ್ಥಳೀಯ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಸತತ ಬರಗಾಲದ ನಡುವೆ ಇತ್ತೀಚೆಗೆ ಮುಂಗಾರು ಬಿರುಸುಗೊಂಡಿದ್ದು, ಎಲ್ಲಡೆ ಹರ್ಷ ಮೂಡಿಸಿದೆ. ಆದರೆ, ನಗರದ ಹೃದಯ ಭಾಗದ ಮುಳಗುಂದ ನಾಕಾಕ್ಕೆ ಹೊಂದಿಕೊಂಡಿರುವ ಇಲ್ಲಿನ ಸರ್ವೋದಯ ಕಾಲೋನಿ, ಹುಡ್ಕೋ ಕಾಲೋನಿ ಜನರಿಗೆ ಮಳೆ ಎಂಬುದು ಒಂದು ರೀತಿಯ ಶಾಪವಾಗಿ ಪರಿಣಮಿಸಿದೆ.

ರಾಚೋಟೇಶ್ವರ ನಗರ ಹಾಗೂ ಮುಳಗುಂದ ನಾಕಾ ನಡುವೆ ಸಂಪರ್ಕ ಕಲ್ಪಿಸುವ ಸರ್ವೋದಯ ಕಾಲೋನಿ ರಸ್ತೆಗಳಿಂದ ಪಾದಚಾರಿ ಹಾಗೂ ಬೈಕ್‌ ಸವಾರರಿಗೆ ಹೆಚ್ಚಿನ ಅನುಕೂಲವಾಗಿವೆ. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ರಸ್ತೆ ಎಂಬುದು ಕೆಸರು ಗದ್ದೆಯಂತಾಗಿದ್ದು, ಆತಂಕದಲ್ಲೇ ಹೆಜ್ಜೆಯಿಡುವಂತಾಗಿದೆ. ಈಗಾಗಲೇ ನಾಲ್ಕೈದು ಜನರು ಬಿದ್ದು ಗಾಯಗೊಂಡಿದ್ದಾರೆ. ಇನ್ನು, ವೃದ್ಧರು, ಶಾಲಾ ಮಕ್ಕಳು, ಬೈಕ್‌ ಸವಾರರ ಪರಿಸ್ಥಿತಿ ಹೇಳತೀರದು ಎಂಬುದು ಸ್ಥಳೀಯರ ದೂರು.

ಅಭಿವೃದ್ಧಿ ನೆಪದಲ್ಲಿ ರಸ್ತೆ ಹಾಳು: ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ 24×7 ಕುಡಿಯುವ ನೀರಿನ ಕಾಮಗಾರಿ ಕಳೆದ ನಾಲ್ಕೈದು ವರ್ಷಗಳಿಂದ ಪೂರ್ಣಗೊಳ್ಳುತ್ತಿಲ್ಲ. ಒಮ್ಮೆ 24×7 ನೀರಿನ ಪೈಪ್‌ಲೈನ್‌ಗಾಗಿ ರಸ್ತೆಗಳನ್ನು ಅಗೆದರೆ, ಇನ್ನೊಮ್ಮೆ ಒಳಚರಂಡಿಗಾಗಿ ರಸ್ತೆಗಳಲ್ಲಿ ತಗ್ಗು ತೋಡಲಾಗುತ್ತದೆ. ಬಡಾವಣೆಯಲ್ಲಿ ಉಭಯ ಕಾಮಗಾರಿಗಳಿಗಾಗಿ ಸುಸ್ಥಿತಿಯಲ್ಲಿ ಡಾಂಬರ್‌ ರಸ್ತೆಯಲ್ಲಿ ಪೈಪ್‌ಲೈನ್‌ಗಾಗಿ ಬೇಕಾಬಿಟ್ಟಿಯಾಗಿ ತೆಗ್ಗು ಅಗೆಯಲಾಗಿದೆ. ಬಳಿಕ ಸಮಪರ್ಕವಾಗಿ ಮಣ್ಣು ಮುಚ್ಚದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣ ಎನ್ನುತ್ತಾರೆ ಅಂಬಾಸಾ ಚವ್ಹಾಣ್‌.

ಕಾಲೋನಿಯಲ್ಲೇ 24×7 ಕುಡಿಯುವ ನೀರಿನ ಬೃಹತ್‌ ಓವರ್‌ ಹೆಡ್‌ ಟ್ಯಾಂಕ್‌ ಇದೆ. ಮುಖ್ಯರಸ್ತೆಯಿಂದ ಟ್ಯಾಂಕ್‌ಗೆ ಇದೇ ಮಾರ್ಗವಾಗಿ ಸಂಪರ್ಕ ಕಲ್ಪಿಸಲಾಗಿದೆ. ಅದಕ್ಕಾಗಿ ಬೃಹತ್‌ ಗಾತ್ರದ ಪೈಪ್‌ ಅಳವಡಿಸಲು ಬಹುತೇಕ ರಸ್ತೆಯನ್ನೇ ತೋಡಿದ್ದಾರೆ. ಹೀಗಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿಗೊಳಿಸುವಂತೆ ಹಲವು ಬಾರಿ ನಗರಸಭೆ ಅಧಿಕಾರಿಗಳು ಹಾಗೂ ಹಿಂದಿನ ನಗರಸಭೆ ಸದಸ್ಯರಾಗಿದ್ದ ಎಂ.ಸಿ. ಶೇಖ್‌ ಅವರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

Advertisement

ಇನ್ನು, ಹುಡ್ಕೋ ಕಾಲೋನಿಯ ಜಾಗೃತ ಆಂಜನೇಯ ದೇವಸ್ಥಾನದ ರಸ್ತೆ, ಸಿದ್ಧಲಿಂಗ ನಗರದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ನಗರಸಭೆ ಮಾಜಿ ಸದಸ್ಯೆ ವಂದನಾ ವರ್ಣೇಕರ ಮನೆ ಸಮೀಪ, ಎಂಐಜಿ ಮನೆಗಳ ಭಾಗದ ಹಲವು ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಮೂಲಗಳ ಪ್ರಕಾರ, ರಸ್ತೆ ಹದಗೆಡಲು ಕಾರಣರಾದವರೇ ರಸ್ತೆಯನ್ನು ನಿರ್ಮಿಸಿ ಕೊಡಬೇಕು. ಆದರೆ, ಈ ಭಾಗದಲ್ಲಿ 24×7 ಹಾಗೂ ಒಳಚರಂಡಿ ಕಾಮಗಾರಿಗಳು ನಡೆದಿದ್ದರಿಂದ ಉಭಯ ಗುತ್ತಿಗೆದಾರರು, ಪರಸ್ಪರ ಬೊಟ್ಟು ಮಾಡಿ ಜಾರಿಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಗಳು ದುರಸ್ತಿಕಾಣದೇ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next