ಕೊಲೊರೆಕ್ಟಲ್ ಕ್ಯಾನ್ಸರ್ ಎಂದೂ ಕೂಡ ಕರೆಯಲ್ಪಡುವ ಕೊಲೊನ್ ಕ್ಯಾನ್ಸರ್ ಸಾಮಾನ್ಯವಾಗಿ ಕೊಲೊನ್ ಅಥವಾ ಗುದನಾಳದ ಒಳ ಗೋಡೆಗಳ ಮೇಲೆ ಪೊಲಿಪ್ಸ್ ಎಂಬ ಸಣ್ಣ, ಕ್ಯಾನ್ಸರ್ ರಹಿತ ಬೆಳವಣಿಗೆಯಾಗಿ ಪ್ರಾರಂಭವಾಗುತ್ತದೆ. ಈ ಪೊಲಿಪ್ಸ್ ನಂತರ ಕ್ಯಾನ್ಸರ್ ಆಗಿ ಬೆಳೆಯಬಹುದು. ಇತ್ತೀಚಿನ ದಿನಗಳಲ್ಲಿ, ಜೀವನಶೈಲಿಯಲ್ಲಿನ ಬದಲಾವಣೆಗಳು, ಆಹಾರ ಪದ್ಧತಿ ಮತ್ತು ವಯಸ್ಸಾದ ಜನಸಂಖ್ಯೆಯ ಹೆಚ್ಚುತ್ತಿರುವ ಅನುಪಾತದಂತಹ ಅಂಶಗಳಿಂದಾಗಿ ಕರುಳಿನ ಕ್ಯಾನ್ಸರ್ ಭಾರತದಲ್ಲಿ ಪ್ರಮುಖ ಕ್ಯಾನ್ಸರ್ ವಿಧಗಳಲ್ಲಿ ಒಂದಾಗಿದೆ. ಕೊಲೊನ್ ಕ್ಯಾನ್ಸರ್ ನ ಸಂಕೇತಗಳು ಮತ್ತು ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಮತ್ತು ತ್ವರಿತವಾಗಿ ವೈದ್ಯರನ್ನು ಭೇಟಿ ಮಾಡುವುದು ಮುಖ್ಯವಾಗಿದೆ.
ಅದರ ಬೆಳವಣಿಗೆಯನ್ನು ಮೊದಲೇ ಕಂಡುಹಿಡಿದರೆ ಚಿಕಿತ್ಸೆಗಳನ್ನು ಉತ್ತಮವಾಗಿ ನೀಡಬಹುದು ಮತ್ತು ಫಲಿತಾಂಶಗಳನ್ನು ಸುಧಾರಿಸಲು ಸಹಾಯ ಮಾಡಬಹುದು. ಕರುಳಿನ ಕ್ಯಾನ್ಸರ್ ನ ಸಾಮಾನ್ಯ ಸಂಕೇತಗಳು ಮತ್ತು ರೋಗಲಕ್ಷಣಗಳು ಈ ಕೆಳಗಿನಂತಿವೆ:
1 ಮಲದಲ್ಲಿನ ರಕ್ತ, ಕಪ್ಪು ಅಥವಾ ಜಿಗುಟಾದ ಮಲ, ನಿರಂತರ ಅತಿಸಾರ, ಅಥವಾ ಮಲಬದ್ಧತೆ ಸೇರಿದಂತೆ ಮಲ ವಿಸರ್ಜನೆಯ ರೀತಿಯಲ್ಲಿ ಬದಲಾವಣೆಗಳು.
2 ಹೊಟ್ಟೆಯಲ್ಲಿ ನೋವು, ಸೆಳೆತ ಅಥವಾ ಉಬ್ಬುವಿಕೆಯ ಭಾವನೆ
3 ಎಲ್ಲಾ ಸಮಯದಲ್ಲೂ ದಣಿವು ಅಥವಾ ಸ್ಪಷ್ಟವಾದ ಕಾರಣವಿಲ್ಲದೆ ಬಲಹೀನತೆಯ ಸ್ಥಿತಿ.
4 ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು.
5 ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತಸ್ರಾವವಾಗುವ ಕಾರಣದಿಂದ ರಕ್ತದಲ್ಲಿ ಕಡಿಮೆ ಕಬ್ಬಿಣದ ಅಂಶ.
ಇತರ ಅನೇಕ ಹೊಟ್ಟೆ ಮತ್ತು ಕರುಳಿನ ಸಮಸ್ಯೆಗಳು ಇದೆ ರೀತಿಯ ಸಂಕೇತಗಳನ್ನು ಹೊಂದಿರುವುದರಿಂದ, ಈ ರೋಗ ಲಕ್ಷಣಗಳನ್ನು ಸಣ್ಣ ಸಮಸ್ಯೆಗಳೆಂದು ಪರಿಗಣಿಸಿ ವೈದ್ಯಕೀಯ ಸಹಾಯ ಪಡೆಯಲು ವಿಳಂಬ ಮಾಡಬಹುದು. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕೆಲವು ದಿನಗಳವರೆಗೆ ಮುಂದುವರಿದರೆ ಅಥವಾ ಕಾಲಾನಂತರದಲ್ಲಿ ಸ್ಥಿತಿಯು ಹದಗೆಟ್ಟರೆ, ಸಮಸ್ಯೆಯನ್ನು ಕಂಡುಹಿಡಿಯಲು ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ.
ಸ್ಕ್ರೀನಿಂಗ್ ಪರೀಕ್ಷೆಗಳ ಮೂಲಕ ಕರುಳಿನ ಕ್ಯಾನ್ಸರ್ ನ ಆರಂಭಿಕ ಪತ್ತೆಯನ್ನು ಮಾಡಬಹುದು.
1 ಕೊಲೊನೋಸ್ಕೋಪಿ, ಇಲ್ಲಿ ಪೊಲಿಪ್ಸ್ ಅಥವಾ ಕ್ಯಾನ್ಸರ್ ನ ಸಂಕೇತಗಳಿಗಾಗಿ ಸಂಪೂರ್ಣ ಕೊಲೊನ್ ಮತ್ತು ಗುದನಾಳದ ಪರೀಕ್ಷೆಯನ್ನು ಮಾಡಲಾಗುತ್ತದೆ.
2 ಫೀಕಲ್ ಅಕುಲ್ಟ್ ಬ್ಲಡ್ ಟೆಸ್ಟ್ (FOBT) ಅಥವಾ ಫೀಕಲ್ ಇಮ್ಯುನೊಕೆಮಿಕಲ್ ಟೆಸ್ಟ್ (FIT), ಇದು ಕರುಳಿನ ಕ್ಯಾನ್ಸರ್ ನ ಸಂಕೇತವಾದ ಮಲದಲ್ಲಿನ ರಕ್ತವನ್ನು ಪತ್ತೆ ಹಚ್ಚಲು ಮಾಡಲಾಗುತ್ತದೆ.
3 ಫೆಲ್ಕ್ಸಿಬಲ್ ಸಿಗ್ಮೋಯ್ಡೋಸ್ಕೋಪಿಯು ಕೊಲೊನೋಸ್ಕೋಪಿಗೆ ಹೋಲುವ ಪರೀಕ್ಷೆಯಾಗಿದೆ, ಆದರೆ ಇಲ್ಲಿ ಕೊಲೊನ್ ನ ಕೆಳಭಾಗವನ್ನು ಪರೀಕ್ಷೆ ಮಾಡಲಾಗುತ್ತದೆ.
50 ವರ್ಷ ಮೇಲ್ಪಟ್ಟ ವ್ಯಕ್ತಿಗಳು ವಾರ್ಷಿಕವಾಗಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಾಗಿದೆ.
ಕೊಲೊನ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ಸಾಧ್ಯವಾದರೆ, ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ ಅಥವಾ ಇವುಗಳ ಮಿಶ್ರಣದಂತಹ ಚಿಕಿತ್ಸೆಗಳು ಉತ್ತಮವಾಗಿ ಕೆಲಸ ಮಾಡುತ್ತವೆ. ಕ್ಯಾನ್ಸರ್ ನ ಹಂತ, ಅದು ಎಲ್ಲಿದೆ ಮತ್ತು ಇತರ ವೈಯಕ್ತಿಕ ವಿವರಗಳನ್ನು ಆಧರಿಸಿ ಚಿಕಿತ್ಸೆಯ ಯೋಜನೆಯನ್ನು ಮಾಡಲಾಗುತ್ತದೆ.
ಡಾ. ಬಸವಂತರಾವ್ ಮಲ್ಲಿಪಾಟೀಲ್
ಕನ್ಸಲ್ಟೆಂಟ್ – ವೈದ್ಯಕೀಯ ಆಂಕೊಲಾಜಿಸ್ಟ್
ಮಣಿಪಾಲ್ ಆಸ್ಪತ್ರೆ, ಹೆಬ್ಬಾಳ