ಜೇವರ್ಗಿ: ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳ ನಡುವೆ ಶನಿವಾರ ಬೆಳಗ್ಗೆ ಸಂಭವಿಸಿದ ಮುಖಾಮುಖೀ ಡಿಕ್ಕಿಯಲ್ಲಿ ಮೂವರು ಶಿಕ್ಷಕಿಯರು ಹಾಗೂ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಪಟ್ಟಣದ ತಾಲೂಕು ಕ್ರೀಡಾಂಗಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತರನ್ನು ತಾಲೂಕಿನ ಸಿಗರಥಹಳ್ಳಿ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿಯರಾದ ಸಹರಾ ಕಾತೂಲ್ (30), ಆಯೇಶಾ ಸಿದ್ಧಿಕಿ (35), ಯಾಳವಾರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಪರವೀನ್ ಬೇಗಂ (40) ಹಾಗೂ ಕಲಬುರಗಿ ಘಟಕದ ದಾವಣಗೆರೆ ಬಸ್ ಚಾಲಕ ರುಕ್ಕಪ್ಪ ಯಶವಂತರಾಯ (55) ಎಂದು ಗುರುತಿಸಲಾಗಿದೆ.
ಏನಾಯ್ತು?: ಕಲಬುರಗಿಯಿಂದ ದಾವಣಗೆರೆ ಕಡೆ ಹೊರಟಿದ್ದ ಬಸ್ ಹಾಗೂ ಸುರಪುರದಿಂದ ಕಲಬುರಗಿ ಕಡೆ ತೆರಳುತ್ತಿದ್ದ ಸಾರಿಗೆ ಬಸ್‌ಗಳು ಮುಖಾಮುಖೀ ಡಿಕ್ಕಿಯಾಗಿ, ನಂತರ ದಾವಣಗೆರೆಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್‌ಗಳು ಎದುರು ಬದುರು ಬರುತ್ತಿರುವಾಗ ನಾಯಿಯೊಂದು ಅಡ್ಡಬಂದಿದೆ.
ಅದನ್ನು ಉಳಿಸಲು ಹೋಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದಾವಣಗೆರೆಗೆ ತೆರಳುತ್ತಿದ್ದ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳಗ್ಗೆ ಜಿಟಿಜಿಟಿ ಮಳೆ ಬರುತ್ತಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡೆ ತಡೆ ಉಂಟಾಯಿತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಪವನಂದಿ, ಸಿಪಿಐ ಡಿ.ಬಿ. ಪಾಟೀಲ, ಪಿಎಸ್‌ಐ ರಾಜಕುಮಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಸರ್ಕಾರಿ
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಅಪಘಾತದಲ್ಲಿ ಮೃತಪಟ್ಟ ಮೂವರು ಶಿಕ್ಷಕಿಯರು ಹಾಗೂ ಬಸ್ ಚಾಲಕನ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಮೃತಪಟ್ಟ ಹಾಗೂ ಗಾಯಗೊಂಡ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಡಾ.ಅಜಯಸಿಂಗ್ ತಿಳಿಸಿದ್ದಾರೆ.