ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕೋವಿಡ್ ಸಂದಿಗ್ಧತೆಯ ನಡುವೆಯೂ ಸರಕಾರ ಕಾಲೇಜು ಆರಂಭಿಸಿದ್ದು, ಮಂಗಳವಾರದಿಂದ ವಿದ್ಯಾರ್ಥಿಗಳು ತರಗತಿ ಯಲ್ಲಿ ಕುಳಿತು ಪಾಠ ಕೇಳಲು ಆರಂಭಿಸಿದ್ದಾರೆ.
ಮಾರ್ಚ್‌ನಿಂದ ಮುಚ್ಚಿದ್ದ ತರಗತಿಗಳು ತೆರೆದಿವೆ. ಕೋವಿಡ್ ಪರೀಕ್ಷೆ ಮತ್ತು ಪಾಲಕರ ಸಮ್ಮತಿ ಪತ್ರ ಕಡ್ಡಾಯ ಮಾಡಲಾಗಿತ್ತು. ಮೊದಲ ದಿನ ಕಾಲೇಜಿಗೆ ಬಂದ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಸಹಿತ ವಿವಿಧ ಕೋರ್ಸ್‌ಗಳ ತರಗತಿಗಳು ಆರಂಭ ವಾಗಿವೆ. ಪದವಿಯ ಐದನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿ 3ನೇ ಸೆಮಿಸ್ಟರ್, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ತರಗತಿ ಆರಂಭವಾಗಿದ್ದರೂ ರಾಜ್ಯದ ಎಲ್ಲ ಕಾಲೇಜುಗಳಲ್ಲೂ ಸರಾಸರಿ ವಿದ್ಯಾರ್ಥಿಗಳ ಹಾಜರಾತಿ ಶೇ. 10ರಷ್ಟು ದಾಟಿರಲಿಲ್ಲ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಕಾಲೇಜು ಆವರಣದಲ್ಲಿ ಸುರಕ್ಷೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಆಸೀನರಾಗಲು ಬೇಕಾದ ವ್ಯವಸ್ಥೆ ಮಾಡಲಾ ಗಿತ್ತು. ಕಾಲೇಜಿನ ಪ್ರವೇಶ ದ್ವಾರ ಮತ್ತು ತರಗತಿಯ ಪ್ರವೇಶದ್ವಾರ ದಲ್ಲಿ ಸ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನರ್ ಮೂಲಕ ಪರೀಕ್ಷಿ ಸಿಯೇ ಒಳಗೆ ಬಿಡಲಾಗಿದೆ. ಮಾಸ್ಕ್ ಧಾರಣೆ ಕಡ್ಡಾಯವಾಗಿತ್ತು. ಕೆಲವು ಕಾಲೇ ಜುಗಳಲ್ಲಿ ಸ್ವಲ್ಪ ಅವ್ಯವಸ್ಥೆ ಆಗಿರಬಹುದು. ಅದರ ವರದಿಯನ್ನು ಪಡೆಯುತ್ತಿದ್ದೇವೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿ ಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ಶಿಕ್ಷಣದ ಮೊರೆ: ಮೊದಲ ದಿನ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಹಿಂದೇಟು ಹಾಕಿದ್ದು, ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಂಡಿದ್ದರು. ಕೊರೊನಾ ಆತಂಕದ ಜತೆಗೆ ಮೊದಲ ದಿನದ ವ್ಯವಸ್ಥೆ ಹೇಗಿರುತ್ತದೆ ಎಂಬುದರ ಸ್ಪಷ್ಟತೆ ವಿದ್ಯಾರ್ಥಿಗಳಲ್ಲಿ ಇರಲಿಲ್ಲ. ಆನ್‌ಲೈನ್ ಮತ್ತು ತರಗತಿ ಬೋಧನೆ ಎರಡಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆ. ಸರಕಾರದ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿದ್ದೇವೆ ಎಂದು ಕುಲಪತಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮೊದಲ ದಿನ ನಿರೀಕ್ಷೆಯಷ್ಟು ವಿದ್ಯಾರ್ಥಿಗಳು ಬಂದಿಲ್ಲ. ತರಗತಿ ಮತ್ತು ಕಾಲೇಜಿನಲ್ಲಿ ಎಲ್ಲ ಸುರಕ್ಷಾ ಕ್ರಮಗಳು ಅಚ್ಚುಕಟ್ಟಾಗಿ ಪಾಲನೆಯಾಗಿವೆ. ಮಂಗಳವಾರ ಸರಾಸರಿ ಶೇ. 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ.
– ಪ್ರೊ| ಎಸ್. ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ
ಕಡಿಮೆ ಹಾಜರಾತಿಗೆ ಕಾರಣ
ಅನೇಕ ವಿದ್ಯಾರ್ಥಿಗಳು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಇರಲಿಲ್ಲ. ಜತೆಗೆ ಆನ್‌ಲೈನ್ ತರಗತಿ ನಿರಂತರವಾಗಿ ನಡೆಯುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳು ಇದರಲ್ಲೇ ಪಾಲ್ಗೊಂಡಿದ್ದಾರೆ.
ಅಂತಿಮ ವರ್ಷದವರಿಗೆ ರೆಗ್ಯುಲರ್ ತರಗತಿಗಳು ಇರಲಿವೆ. ಮೊದಲ ಮತ್ತು ಎರಡನೇ ವರ್ಷದವರಿಗೆ ಸಂಪರ್ಕ ತರಗತಿಗಳು ನಡೆಯಲಿವೆ. ಯಾರನ್ನೂ ಒತ್ತಾಯ ಮಾಡಿಲ್ಲ. ವಿದ್ಯಾರ್ಥಿಗಳು ಸ್ವ-ಇಚ್ಛೆಯಿಂದ ಬರಬಹುದು. ಕ್ರಮೇಣ ಹಾಜರಾತಿ ಏರಿಕೆಯಾಗುವ ನಿರೀಕ್ಷೆ ಇದೆ.
-ಡಾ| ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ