Advertisement

ಕೊಲೀಜಿಯಂ-ನ್ಯಾಯಾಧೀಶರ ನೇಮಕಾತಿಯ ಸಮಸ್ಯೆ

11:03 PM Dec 18, 2022 | Team Udayavani |

ಕೊಲೀಜಿಯಂ ಪದ್ಧತಿಯ ನೇಮಕಾತಿಯ ಬಗ್ಗೆ ಅಸಮಾಧಾನದ ವಿಚಾರವನ್ನು ಈಗ ನ್ಯಾಯಾಂಗದಲ್ಲಿಯೇ ಬಹಿರಂಗವಾಗಿ ಚರ್ಚಿಸಲಾಗುತ್ತಿದೆ. ಅಪಾರ ಶಕ್ತಿಯುಳ್ಳ ನ್ಯಾಯಾಂಗಕ್ಕೆ ಯೋಗ್ಯರನ್ನು ಆರಿಸಿ ನೇಮಿಸಲು ಪಾರದರ್ಶಕವಾದ ಒಂದು ವ್ಯವಸ್ಥೆ ಇರಬೇಕು ಎಂಬುದು ಈಗ ಹೊರ ಹೊಮ್ಮುತ್ತಿರುವ ಅಭಿಪ್ರಾಯ. ಆದರೆ ಇನ್ನಷ್ಟು ಕಾಲ ಕೂಡಿ ಬಾರದೆ ಈ ಬಿಕ್ಕಟ್ಟು ಶಮನವಾಗಲಾರದು. ಇಲ್ಲವೆ ಆರಂಭದ ತೀರ್ಮಾನದ ನ್ಯಾಯಾಧೀಶರಂತೆ ನ್ಯಾಯಾಂಗವು ಧಾರಾಳ ಮನಸ್ಸಿನಿಂದ ಕಾನೂನನ್ನು ಎತ್ತಿ ಹಿಡಿಯಬೇಕು.

Advertisement

ಭಾರತದ ಸಂವಿಧಾನದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಇವುಗಳು ಅವರವರ ಕಾರ್ಯವ್ಯಾಪ್ತಿಯಲ್ಲಿ ಸ್ವತಂತ್ರಿಕರು. ಆದರೆ ಶಾಸಕಾಂಗ ಮತ್ತು ಕಾರ್ಯಾಂಗ ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿದರೆ ಅದನ್ನು ಪ್ರಶ್ನಿಸಿ ಸರಿಪಡಿಸುವ ಅಧಿಕಾರವು ಉನ್ನತ ನ್ಯಾಯಾಂಗಕ್ಕೆ ಇದೆ. ಉನ್ನತ ನ್ಯಾಯಾಧೀಶರನ್ನು ಸರಕಾರಿ ನೌಕರರಂತೆ ವಜಾಗೊಳಿಸಲು ಅಸಾಧ್ಯ. ಹೀಗಾಗಿ ಯಾರನ್ನು ಯಾರು ನೇಮಿಸಬೇಕು ಎಂಬುದು ತಿಕ್ಕಾಟಕ್ಕೆ ಮೂಲ.

ಮೊದಲು ಸರಕಾರವು ನ್ಯಾಯಾಧೀಶರನ್ನು ನೇಮಿಸುತ್ತಿತ್ತು. ಬದ ಲಾದ ಪರಿಸ್ಥಿತಿಯಲ್ಲಿ ಕೊಲೀಜಿಯಂ ಮಾತ್ರ ಭಾರತದ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸ ಬಹುದು. ಈ ಸ್ಥಿತಿ ಹೇಗೆ ಸೃಷ್ಟಿಯಾಯಿತು ಎಂದು ನೋಡುವಾ.

ಕಾನೂನು ಏನನ್ನುತ್ತದೆ?: ಸಂವಿಧಾನದಲ್ಲಿ ಎಲ್ಲಿ ಹುಡುಕಿದರೂ ನಿಮಗೆ ಕೊಲೀಜಿಯಂ ಸಿಗದು. ಸುಪ್ರೀಂ ಕೋರ್ಟ್‌ನ ನ್ಯಾಯಾ ಧೀಶರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ ಎಂಬುದು ಆರ್ಟಿಕಲ್‌ 124ರಲ್ಲಿ ನಮಗೆ ಸಿಗುವ ಕಾನೂನು. ಹಾಗೆ ನೇಮಿಸುವ ಮೊದಲು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನ್ಯಾಯಾಧೀಶರು ಗಳೊಂದಿಗೆ ರಾಷ್ಟ್ರಪತಿಯವರು ತನಗೆ ಯುಕ್ತ ಕಂಡಂತೆ ಸಮಾಲೋಚನೆ ನಡೆಸಬಹುದು. ಹಾಗೆಯೇ 217ನೇ ಆರ್ಟಿಕಲ್‌ ಪ್ರಕಾರ ಹೈಕೋರ್ಟ್‌ನ ನ್ಯಾಯಾಧೀಶರನ್ನೂ ರಾಷ್ಟ್ರಪತಿಯವರೇ ನೇಮಿಸುತ್ತಾರೆ. ಸಚಿವ ಸಂಪುಟವು ಸೂಚಿಸುವಂತೆ ರಾಷ್ಟ್ರಪತಿಯವರು ಕಾರ್ಯವೆಸಗುತ್ತಾರೆ ಎಂಬುದೂ ಸಂವಿಧಾನದ ಆರ್ಟಿಕಲ್‌ 74ರಿಂದ ತಿಳಿಯುತ್ತದೆ. ಹೀಗಾಗಿ ನ್ಯಾಯಾಧೀಶರ ನೇಮಕವು ಸಚಿವ ಸಂಪುಟದ ಮೂಲಕವೇ ನಡೆಯಬೇಕಷ್ಟೆ. ಇಷ್ಟು ಸರಳ ಕಾನೂನು ಇದ್ದರೂ ಈ ಸಮಸ್ಯೆ ಹೇಗೆ ಹುಟ್ಟಿತು?

ನೇಮಕಾತಿಯ ವಿರಸದ ಮೂಲ: ಆಳುವ ಪ್ರಭುಗಳಿಗೂ ತಾವೇ ನೇಮಿಸುವ ಪರಮೋಚ್ಚ ನ್ಯಾಯಾಲಯದ ಲಾರ್ಡ್‌ಗಳಿಗೂ ಕಾನೂನಿನ ವಿಷಯದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇದೆ. ಯಾಕೆಂದರೆ ಪ್ರಭುಗಳು ಮಾಡಿದ ಕಾನೂನು ಸಂವಿಧಾನಕ್ಕೆ ಅನುಗುಣವಾಗಿದೆಯೆ ಅಥವಾ ವಿರೋಧಿಯೇ ಎಂಬುದನ್ನು ನಿರ್ಣ ಯಿಸುವ ಕೊನೆಯ ಮಾತು ನ್ಯಾಯಾಲಯಕ್ಕೆ ಇದೆ. ಶಾಸಕಾಂಗವು ಕಾನೂನನ್ನು ಮಾಡಿದ ಮೇಲೆ ಅದನ್ನು ಯಾರೂ ಹೈಕೋರ್ಟ್‌ ಯಾ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಮಾಡಿದ ಕಾನೂನು ಸಂವಿಧಾನದ 7ನೇ ಶೆಡ್ನೂಲಿನಲ್ಲಿ ನಮೂದಿಸಿದ ಶಾಸಕಾಂಗದ ವ್ಯಾಪ್ತಿಯಲ್ಲಿ ಇರಬೇಕು ಮತ್ತು ಮೂಲಭೂತ ಹಕ್ಕಿಗೆ ವಿರೋಧವಾಗಿ ಇರಬಾರದು. ಶಾಸನದ ಈ ಬದ್ಧತೆಯನ್ನು ಕೋರ್ಟ್‌ ತೀರ್ಮಾ ನಿಸುತ್ತದೆ. ಇದು ಶೀತಲ ಸಮರದ ಮೂಲ. ಮೊದಮೊದಲು ಇದ್ದ ಸರಕಾರವಾಗಲೀ ನ್ಯಾಯಾಧೀಶರಾಗಲೀ ತಾವು ಪ್ರತಿಸ್ಪರ್ಧಿಗಳು ಎಂದು ಕಾರ್ಯವೆಸಗಿರಲಿಲ್ಲ. ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಇರುವುದೇ ಹಾಗೆ ಎಂಬ ನೈಜತೆಯಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದರು.

Advertisement

ಕೇಶವಾನಂದ ಭಾರತೀ ಪ್ರಕರಣ: ಸರಕಾರಕ್ಕೆ ತನ್ನ ಧೋರಣೆಗೆ ಅನುಸಾರವಾಗಿ ಕಾನೂನು ಇರಬೇಕಾಗುತ್ತದೆ. ಈ ಕಾನೂನುಗಳನ್ನು ಪ್ರಶ್ನಿಸಲಾಗದಂತೆ ಕಾಪಾಡಲು 9ನೇ ಶೆಡ್ನೂಲನ್ನು ಮಾಡಲಾಗಿತ್ತು. ಆ ಶೆಡ್ನೂಲಿನಲ್ಲಿ ಸೇರಿಸಲ್ಪಟ್ಟ ಕಾನೂನನ್ನು ಮೂಲಭೂತ ಹಕ್ಕಿನ ವಿರೋಧಿ ಎಂದು ನ್ಯಾಯಾಂಗವು ತೀರ್ಮಾನಿಸಲು ಸಾಧ್ಯವಿಲ್ಲ. 1970ರ ದಶಕದ ಆದಿಯಲ್ಲಿ ಭೂಸುಧಾರಣೆಯ ಕಾನೂನುಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗದಂತೆ ತಿದ್ದುಪಡಿ ಮಾಡಲಾಯಿತು. ಇದರಿಂದಾಗಿ ಸಮಾಜದ ಒಂದು ವರ್ಗಕ್ಕೆ ಅನುಕೂಲವಾದರೂ ಇನ್ನೊಂದು ವರ್ಗಕ್ಕೆ ಹೊಡೆತ ಬಿತ್ತು. ಕೇಶವಾನಂದ ಭಾರತೀ ಸ್ವಾಮೀಜಿಯವರ ಪ್ರಕರಣದಲ್ಲಿ ಇದರ ಸಂವಿಧಾನದ ಬದ್ಧತೆಯನ್ನು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಲಾಯಿತು. ಸುಪ್ರೀಂ ಕೋರ್ಟ್‌ 7-6ರ ಬಹುಮತದಿಂದ ಸರಕಾರದ ವಿರುದ್ಧ ತೀರ್ಮಾನಿಸಿತು. ಆರ್ಟಿಕಲ್‌ 368ರ ಸರಳ ಪದಪ್ರಯೋಗವನ್ನು ಗಮನಿಸಿದರೆ ಯಾವುದೇ ನಿರ್ಬಂಧವಿಲ್ಲದೆ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಆದರೆ ಈ ತೀರ್ಪಿನಂತೆ ಸರಕಾರವು ತನಗೆ ಇಷ್ಟಬಂದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ; ಯಾಕೆಂದರೆ ಆರ್ಟಿಕಲ್‌ 368ರಲ್ಲಿ ಹಾಗೆ ಬರೆಯದಿದ್ದರೂ ಅದರ ಪದಗಳನ್ನು ಮೀರಿ ಸಂವಿಧಾನಕ್ಕೆ ಒಂದು ಮೂಲ ಸ್ವರೂಪವಿದೆ. ಅದನ್ನು ವಿರೂಪಗೊಳಿಸಲಾಗದು. ಇದು ತೀರ್ಮಾನದ ತಿರುಳು.

ಸರಕಾರವು ಸೇಡು ತೀರಿಸಿತು: ಅಂದಿನ ಸರಕಾರವು ಈ ತೀರ್ಮಾನವನ್ನು ತನಗೆ ಮುಖಭಂಗ ಎಂಬುದಾಗಿ ಪರಿಗಣಿಸಿತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ನೇಮಕಾತಿಯ ಸರದಿ ಬಂತು. ಆಡಳಿತ ವಿರೋಧಿ ನ್ಯಾಯಾಧೀಶರೆಂಬ ಹಣೆಪಟ್ಟಿ ಪಡೆದುಕೊಂಡ ಮೂವರು ಹಿರಿಯ ನ್ಯಾಯಾಧೀಶರನ್ನು ಅವಗಣಿಸಿ ಅವರಿಂದ ಕಿರಿಯವರೊಬ್ಬರನ್ನು ಮುಖ್ಯ ನ್ಯಾಯಾಧೀಶ ರಾಗಿ ನೇಮಿಸಿದುದೇ ಈ ಘಟನೆ. ಮುಂದೆ 1977ರಲ್ಲೂ ಇಂತಹ ಇನ್ನೊಂದು ಅವಗಣನೆ ನಡೆಯಿತು. ನ್ಯಾಯಾಧೀಶರು ತನ್ನ ಹುದ್ದೆಯನ್ನು ಪಡೆಯುವಾಗ ಪ್ರಮಾಣೀಕರಿಸುವಂತೆ ತಾನು ಸಂವಿಧಾನಕ್ಕೆ ಅನುಗುಣವಾಗಿ ನಡೆಯಬೇಕೆ ವಿನಾ ಪ್ರಭುಗಳ ಮರ್ಜಿಯಂತಲ್ಲ. ನೇಮಿಸುವವರೂ ತಾವೇ ಆದರೆ ಹೇಗೆ? ಈ ಸಮಸ್ಯೆ ಬರಲಾರದಲ್ಲವೆ? ಯಾಕೆಂದರೆ ಕೊನೆ ಸಿಡಿ ನ್ಯಾಯಾಂಗದ ಬಳಿಯೇ ಇದೆ. ಈ ಚಿಂತನೆಯ ಮೊಳಕೆ ಇಲ್ಲಿದೆ.

ಪ್ರಥಮ ತೀರ್ಮಾನ: 1981ರಲ್ಲಿ ಆಗಿನ ಕಾನೂನು ಸಚಿವರು ಒಂದು ಸುತ್ತೋಲೆಯನ್ನು ಹೊರಡಿಸಿ ಆಗತಾನೆ ನೇಮಿಸಲ್ಪಟ್ಟ ಮತ್ತು ಇನ್ನು ಮುಂದೆ ನೇಮಿಸಲ್ಪಡುವ ಹೈಕೋರ್ಟ್‌ನ ನ್ಯಾಯಾಧೀಶರು ತಾವು ಯಾವುದೇ ಬೇರೊಂದು ಹೈಕೋರ್ಟ್‌ಗೂ ವರ್ಗಾವಣೆ ಹೊಂದಲು ಬರಹ ಮೂಲಕ ಒಪ್ಪಿಗೆ ನೀಡಲು ಸೂಚಿಸಿದರು. ವರ್ಗಾಯಿಸಲು ಸರಕಾರಕ್ಕೆ ಸಂವಿಧಾನದಲ್ಲಿ ಅವಕಾಶ ಇರಲಿಲ್ಲ. ಬೇರೆ ಬೇರೆ ನ್ಯಾಯವಾದಿಗಳ ಸಂಘದವರು ಈ ಸುತ್ತೋಲೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಸುಪ್ರೀಂ ಕೋರ್ಟ್‌ನವರು ಈ ರಿಟ್‌ಗಳನ್ನು ವರ್ಗಾಯಿಸಿಕೊಂಡು ತೀರ್ಮಾನಿಸಿದರು. ಇದು ನ್ಯಾಯಾಧೀಶರ ಪ್ರಥಮ ತಿರ್ಮಾನ ಎಂಬುದಾಗಿ ಮುಂದೆ ಪ್ರಚಲಿತವಾಯಿತು. ಆರ್ಟಿಕಲ್‌ 124ರಲ್ಲಿ ಸಮಾಲೋಚನೆ ಎಂದರೆ ಒಪ್ಪಿಗೆಗೆ ತತ್ಸಮಾನ ಎಂಬ ವಾದವನ್ನು ಸುಪ್ರೀಂ ಕೋರ್ಟು ಆಗ ಒಪ್ಪಲಿಲ್ಲ. ಏಳು ನ್ಯಾಯಾಧೀಶರನ್ನೊಳಗೊಂಡ ಒಂದು ವಿಸ್ತೃತ ನ್ಯಾಯಪೀಠದ ತೀರ್ಮಾನವು ಸರಕಾರದ ಪರವಾಗಿ ಬಂತು. ದ್ವಿತೀಯ ತೀರ್ಮಾನ: 1993ರಲ್ಲಿ 9 ನ್ಯಾಯಾಧೀಶರನ್ನು ಒಳಗೊಂಡ ಪೀಠದಲ್ಲಿ 1986ರ ತೀರ್ಮಾನವನ್ನು ವಿಮರ್ಶಿಸಲು ಒಂದು ಸಂದರ್ಭ ಒದಗಿತು. ಸುಪ್ರೀಂ ಕೋರ್ಟ್‌ನ ನ್ಯಾಯವಾದಿಗಳ ಸಂಘವು ರಿಟ್‌ ಅರ್ಜಿಯನ್ನು ದಾಖಲಿಸಿ ನ್ಯಾಯಾಧೀಶರ ನೇಮಕಾತಿಯಲ್ಲಿ ಸರಕಾರದಿಂದಾಗುವ ವಿಳಂಬ ನೀತಿಯನ್ನು ಪ್ರಶ್ನಿಸಿತು. ಈ ಬಾರಿ ಸುಪ್ರೀಂ ಕೋರ್ಟ್‌ನ 7-2 ಬಹುಮತದ ತೀರ್ಮಾನವಾಗಿ, ಸಮಾಲೋಚನೆಯೆಂದರೆ ಒಪ್ಪಿಗೆಯೇ ಎಂಬುದಾಗಿ ನಿರ್ಧರಿಸಲಾಯಿತು. ಈ ತೀರ್ಮಾನದಲ್ಲಿ ನೇಮಕಾತಿಯ ಬಗ್ಗೆ ಹಲವು ನಿರ್ದೇಶನಗಳನ್ನು ನೀಡಲಾಯಿತು. ಈ ತೀರ್ಮಾನವು ಕೊಲೀಜಿಯಂ ಪದ್ಧತಿಯ ಜನಕ.

ಮೂರನೆ ತೀರ್ಮಾನ: ಆರ್ಟಿಕಲ್‌ 143ರ ಅಡಿಯಲ್ಲಿ ರಾಷ್ಟ್ರಪತಿಯವರು ಕಾನೂನಿನ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ನಿಂದ ಪಡೆಯಲು ಅವಕಾಶವಿದೆ. ಎರಡನೆಯ ತೀರ್ಮಾನದ ಕೆಲವು ನಿರ್ದೇಶನಗಳ ಬಗ್ಗೆ ಸಂದೇಹ ಇದ್ದುದನ್ನು ಪರಿಹರಿಸಿಕೊಳ್ಳಲು ಕೆ. ಆರ್‌. ನಾರಾಯಣನ್‌ ರಾಷ್ಟ್ರಪತಿಗಳಾಗಿ¨ªಾಗ ಸರಕಾರವು ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ಕೋರಿ ಅರ್ಜಿ ಸಲ್ಲಿಸಿತು. ಆ ಸಂದರ್ಭದಲ್ಲಿ ಅನೇಕ ನ್ಯಾಯವಾದಿಗಳ ವಾದವನ್ನು ಆಲಿಸಿ ಸುಪ್ರೀಂ ಕೋರ್ಟ್‌ನ 9 ಮಂದಿ ನ್ಯಾಯಾಧೀಶರ ಪೀಠವು ತನ್ನ ಅಭಿಪ್ರಾಯವನ್ನು ಪ್ರಕಟಿಸಿತು. ಇಲ್ಲಿ ಪರೋಕ್ಷವಾಗಿ ಮುಖ್ಯ ನ್ಯಾಯಾಧೀಶರ ಅಭಿಪ್ರಾಯವನ್ನು ಪಡೆಯುವುದು ಎಂದರೆ ಅವರ ಹಿರಿಯ ಸಹೋದ್ಯೋಗಿಗಳ ಅಭಿಪ್ರಾಯವನ್ನೂ ಒಳಗೊಂಡು ಮುಖ್ಯ ನ್ಯಾಯಾಧೀಶರು ನೀಡಬಹುದಾದ ಅಭಿಪ್ರಾಯ ಎಂಬುದಾಗಿ ಅರ್ಥೈಸಲಾಯಿತು. ಈ ತೀರ್ಮಾನದಲ್ಲಿ ಕೊನೆಗೆ 9 ನಿರ್ದೇಶನಗಳನ್ನು ನೀಡಲಾಯಿತು. ತನ್ನ ಹಿಂದಿನ ತೀರ್ಮಾನವನ್ನು ಸ್ಪಷ್ಟ ಪಡಿಸುತ್ತಾ ಕೊಲೀಜಿಯಂ ಅನ್ನು ದೃಢಪಡಿಸಲಾಯಿತು. ಸಂವಿಧಾನದಲ್ಲಿ ಮುಖ್ಯ ನ್ಯಾಯಾಧೀಶರಿಗೆ ಮಾತ್ರ ಇದ್ದ ಹಕ್ಕನ್ನು ತನ್ನ ಉಳಿದ ನಾಲ್ವರು ಹಿರಿಯ ಸಹ ನ್ಯಾಯಾಧೀಶರೊಂದಿಗೆ ಹಂಚಿಕೊಂಡಂತಾಯಿತು. ಈ ತೀರ್ಮಾನದ ಪ್ರಕಾರ ನೇಮಕಾತಿಯ ಸೂತ್ರ ಹೀಗಿದೆ: ನೇಮಿಸಲ್ಪಡಬೇಕಾದವರ ಹೆಸರನ್ನು ಕೊಲೀಜಿಯಂ ಸೂಚಿಸುವುದು; ಸರಕಾರವು ತನ್ನ ಅಭಿಪ್ರಾಯವನ್ನು ಸೂಚಿಸಬೇಕು; ಅವರಿಗೆ ಒಪ್ಪಿಗೆಯಾಗದಿದ್ದರೆ, ಕೊಲೀಜಿಯಂ ತನ್ನ ಅಂತಿಮ ನಿರ್ಧಾರವನ್ನು ತಿಳಿಸಬಹುದು ಮತ್ತು ಅದನ್ನು ಸರಕಾರವು ಪಾಲಿಸಬೇಕು. ಹೀಗೆ ಸಮಾಲೋಚನೆ ಎಂದರೆ ಒಪ್ಪಿಗೆಯೇ ಎಂಬುದಾಗಿ ವ್ಯಾಖ್ಯಾನಿಸಿ ನೇಮಕಾತಿ ಸೂತ್ರಗಳನ್ನು ರೂಪಿಸಿತು. 1999ರಲ್ಲಿ ಸರಕಾರವು ಒಂದು ಮೆಮೊರಾಂಡಮ್‌ ಆಫ್ ಪ್ರೊಸೀಜರ್‌ ತಯಾರಿಸಿ ಪ್ರಕಟಿಸಿದರೂ ಅದು ನ್ಯಾಯಾಂಗಕ್ಕೆ ಒಪ್ಪಿಗೆ ಆಗಲಿಲ್ಲ. ನೇಮಕಾತಿ ವಿಚಾರದಲ್ಲಿ ಬಿಕ್ಕಟ್ಟು ಉಂಟಾಯಿತು.

ನ್ಯಾಯಾಂಗ ನೇಮಕಾತಿ ಆಯೋಗದ ಕಾನೂನು: 2014ರಲ್ಲಿ ಸರಕಾರವು ಹೊಸ ಕಾನೂನೊಂದನ್ನು ರಚಿಸಿ ನೇಮಕಾತಿಯ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿತು. ಹಾಗೆ ಬಂದ ಕಾನೂನು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ, 2014. ಇದನ್ನು ಸಮರ್ಥಿಸಲು ಸಂವಿಧಾನಕ್ಕೆ 99ನೇ ತಿದ್ದುಪಡಿ ಮಾಡಲಾಯಿತು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಅವರ ಈರ್ವರು ಹಿರಿಯ ಸಹೋದ್ಯೋಗಿ ನ್ಯಾಯಾಧೀಶರು, ಕೇಂದ್ರ ಕಾನೂನು ಸಚಿವರು ಮತ್ತು ಈರ್ವರು ಶ್ರೇಷ್ಠ ವ್ಯಕ್ತಿಗಳು ಆಯೋಗದ ಸದಸ್ಯರಾಗಿರುತ್ತಾರೆ. ಈರ್ವರು ಶ್ರೇಷ್ಠ ವ್ಯಕ್ತಿಗಳನ್ನು ನೇಮಿಸಲು ಒಂದು ಉಪಆಯೋಗವನ್ನು ರಚಿಸಲಾಗಿದೆ. ಅದರಲ್ಲಿ ದೇಶದ ಪ್ರಧಾನಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ಸದನದ ವಿಪಕ್ಷದ ನಾಯಕರು ಇರುತ್ತಾರೆ. ಹಾಗೆ ನೇಮಿಸಲ್ಪಡುವ ಶ್ರೇಷ್ಠ ವ್ಯಕ್ತಿಗಳಲ್ಲಿ ಓರ್ವರು ಪರಿಶಿಷ್ಟ ಜಾತಿ ಯಾ ಪಂಗಡದ ಯಾ ಹಿಂದುಳಿದ ವರ್ಗದ ಯಾ ಅಲ್ಪಸಂಖ್ಯಾಕ ವರ್ಗದ ಯಾ ಮಹಿಳಾ ವರ್ಗದವರಾಗಿರಬೇಕು. ಈ ಆಯೋಗದ ಯಾರಾದರೂ ಈರ್ವರು ನೇಮಿಸಲ್ಪಡುವವರ ಪರವಾಗಿ ಸಹಮತರಲ್ಲವಾದರೆ ಆ ವ್ಯಕ್ತಿ ನೇಮಕಾತಿಗೆ ಅನರ್ಹರಾಗುವರು. ಅತ್ತ ನ್ಯಾಯಾಂಗವೂ ಇತ್ತ ಸರಕಾರವೂ ತಾನೇ ನೇಮಿಸಬೇಕು ಎಂಬ ವಾದವನ್ನು ಬದಿಗಿಟ್ಟು ಇತ್ತಂಡದವರನ್ನೂ ಒಟ್ಟುಗೂಡಿಸಿಕೊಂಡು, ಸಮಾಜವೂ ಸೇರಿಕೊಂಡು ನ್ಯಾಯಾಧೀಶರುಗಳನ್ನು ನೇಮಿಸಲು ಒಂದು ವ್ಯವಸ್ಥೆಯನ್ನು ಮಾಡಲಾಯಿತು. ಈ ಕಾನೂನನ್ನು 13-04-2015ರಂದು ಜಾರಿ ಮಾಡಲಾಯಿತು.

ನಾಲ್ಕನೇ ತೀರ್ಮಾನ: ಈ ಕಾನೂನನ್ನು ಪ್ರಶ್ನಿಸಿ ರಿಟ್‌ಗಳು ದಾಖಲಾದವು. ಅವುಗಳನ್ನು ಐದು ಮಂದಿಯ ನ್ಯಾಯಪೀಠದಲ್ಲಿ ತೀರ್ಮಾನಿಸಲಾಯಿತು. 4 ಮಂದಿ ನ್ಯಾಯಾಧೀಶರು ಈ ಕಾನೂನನ್ನು ಸಂವಿಧಾನ ವಿರೋಧಿ ಎಂದು ರದ್ದು ಮಾಡಿದರು. ಮುಕ್ತ ನ್ಯಾಯಾಂಗವು ಸಂವಿಧಾನದ ಒಂದು ಮೂಲ ಸ್ವರೂಪವಾಗಿದ್ದು, ಈ ಕಾನೂನು ಮುಕ್ತತೆಯ ವಿರೋಧಿಯಾದ ಕಾರಣ ಇದು ಅಸಿಂಧು ಎಂದು ಘೋಷಿಸಲಾಯಿತು. ಓರ್ವ ನ್ಯಾಯಾಧೀಶರು ಮಾತ್ರ ಇದು ಸರಿಯಾದ ಕಾನೂನು ಎಂದು ಎತ್ತಿಹಿಡಿದರು.(2016) 5 ಎಸ್‌ ಸಿ ಸಿ 1 ನೋಡಿ. ಹೀಗೆ ಸಂವಿಧಾನದಲ್ಲಿ ಇರುವ ಪದಗಳನ್ನು ತರ್ಜುಮೆ ಮಾಡಿ ಹಿಂದೆ ಸರಕಾರವು ತನ್ನ ಹಕ್ಕು ಎಂದು ವ್ಯವಹರಿಸುತ್ತಿದ್ದುದನ್ನು ಮೊಟಕುಗೊಳಿಸಿ ನ್ಯಾಯಾಂಗವು ನೇಮಕಾತಿ ವಿಚಾರದಲ್ಲಿ ತಾನೇ ಮೇಲೆ ಎಂಬುದಾಗಿ ತೋರಿಸಿತು. ಇದೇ ಕೊಲೀಜಿಯಂ.

ಕೊನೆಯ ಮಾತು: ಸಂವಿಧಾನದ ವ್ಯಾಖ್ಯಾನದ ವಿಚಾರ ಬಂದಾಗ ಎರಡು ಅಭಿಪ್ರಾಯಗಳು ಇದ್ದೇ ಇರುತ್ತವೆ. ವ್ಯಾಖ್ಯಾನಿಸುವ ನ್ಯಾಯಾಧೀಶರ ಅಂತರಂಗದ ಸುಪ್ತ ಕಾನೂನಾತ್ಮಕ ಅಭಿಪ್ರಾಯಗಳು ತಮ್ಮ ನ್ಯಾಯ ನಿರ್ಣಯದ ಮೇಲೆ ಪರಿಣಾಮವನ್ನು ಬೀರುವುದು ಸಹಜ. ಕೊಲೀಜಿಯಂ ಪದ್ಧತಿಯ ನೇಮಕಾತಿಯ ಬಗ್ಗೆ ಅಸಮಾಧಾನದ ವಿಚಾರ ಈಗ ನ್ಯಾಯಾಂಗದಲ್ಲಿಯೇ ಬಹಿರಂಗವಾಗಿ ಚರ್ಚಿಸಲಾಗುತ್ತಿದೆ. ಅಪಾರ ಶಕ್ತಿಯುಳ್ಳ ನ್ಯಾಯಾಂಗಕ್ಕೆ ಯೋಗ್ಯರನ್ನು ಆರಿಸಿ ನೇಮಿಸಲು ಪಾರದರ್ಶಕವಾದ ಒಂದು ವ್ಯವಸ್ಥೆ ಇರಬೇಕು ಎಂಬುದು ಈಗ ಹೊರ ಹೊಮ್ಮುತ್ತಿರುವ ಅಭಿಪ್ರಾಯ. ಆದರೆ ಇನ್ನಷ್ಟು ಕಾಲ ಕೂಡಿ ಬಾರದೆ ಈ ಬಿಕ್ಕಟ್ಟು ಶಮನವಾಗಲಾರದು. ಇಲ್ಲವೆ ಆರಂಭದ ತೀರ್ಮಾನದ ನ್ಯಾಯಾಧೀಶರಂತೆ ನ್ಯಾಯಾಂಗವು ಧಾರಾಳ ಮನಸ್ಸಿನಿಂದ ಕಾನೂನನ್ನು ಎತ್ತಿ ಹಿಡಿಯಬೇಕು.

– ಎಂ.ವಿ. ಶಂಕರ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next