Advertisement

ಕಾಲೇಜ್‌ ವಿದ್ಯಾರ್ಥಿಗಳ ಯಕ್ಷಯಾನ 

12:30 AM Feb 01, 2019 | Team Udayavani |

ಸುರತ್ಕಲ್‌ ಗೋವಿಂದದಾಸ ಕಾಲೇಜಿನಲ್ಲಿ ಎರಡು ದಿನ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ “ಯಕ್ಷಯಾನ – 2019’ದಲ್ಲಿ 8 ತಂಡಗಳು ಭಾಗವಹಿಸಿದ್ದವು. ಯಕ್ಷಗಾನದ ಪಾರಂಪರಿಕ ಚೌಕಟ್ಟಿನಲ್ಲಿ ವಿದ್ವತ್‌ ಪೂರ್ಣವಾದ ಭಾಷಾ ಪ್ರಯೋಗದಲ್ಲಿ, ಯಕ್ಷಗಾನದ ಯಾವುದೇ ಇತಿಮಿತಿಗಳನ್ನು ಮೀರದಂತೆ “ಯಕ್ಷಯಾನ’ ಪರಿಪೂರ್ಣ ಪ್ರಬುದ್ಧತೆಯಲ್ಲಿ ನಡೆಯಿತು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಇಂತಹ ಯಕ್ಷಗಾನ ಪ್ರಯೋಗವು ಖಂಡಿತ ಬೇಕು. ಪರಭಾಷೆಯ ವ್ಯಾಮೋಹದಲ್ಲಿ ಭಾಷೆಯು ಕಳೆದು ಹೋಗುತ್ತಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಯಕ್ಷಗನವೊಂದರಿಂದಲೇ ಭಾಷಾ ಪಾಂಡಿತ್ಯವನ್ನು ದೀರ್ಘ‌ಕಾಲ ಉಳಿಸಿ, ಬೆಳೆಸಲು ಸಾಧ್ಯ. ಹಾಸ್ಯ, ಸ್ತ್ರೀವೇಷ, ರಾಜವೇಷ, ಪುಂಡುವೇಷ, ಬಣ್ಣದ ವೇಷ ಈ ಐದು ಪ್ರಕಾರಗಳಿಗೆ ಹೆಚ್ಚು ಒತ್ತು ಕೊಟ್ಟು, ಆ ಪಾತ್ರಗಳನ್ನು ಪುರಸ್ಕರಿಸುವ ಒಂದು ಪರಿ ಇಲ್ಲಿ ಪ್ರಸ್ತುತಗೊಂಡಿತು. ತೀರ್ಪುಗಾರರಲ್ಲಿಯೂ ನಾಟ್ಯಗುರು, ವೇಷದಾರಿ, ಭಾಗವತರು, ಚೆಂಡೆ ಮದ್ದಲೆಯಲ್ಲಿ ಖ್ಯಾತ ನಾಮರುಗಳಾದ ರಮೇಶ ಶೆಟ್ಟಿ ಬಾಯಾರು, ಬೊಟ್ಟೆಕೆರೆ ಪುರುಷೋತ್ತಮ ಪೂಂಜಾ, ಪದ್ಮನಾಭ ಉಪಾಧ್ಯಾಯರುಗಳು ಭಾಗವಹಿಸಿ ತೀವ್ರ ಚರ್ಚೆಗೆ ಗ್ರಾಸವಲ್ಲದ ತೀರ್ಪುಕೊಟ್ಟರು. 

Advertisement

ಪ್ರಥಮ ಪ್ರಯೋಗವಾಗಿ ಅತಿಥೇಯರು ಶ್ಯಮಂತಕ ಮಣಿ ಎಂಬ ಆಖ್ಯಾನವನ್ನು ಆಡಿ ತೋರಿಸಿದರು.ಅನಂತರ ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಕಟೀಲು ಇವರು ನರಕಾಸುರ ಮೋಕ್ಷ, ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ ಇದರ ವಿದ್ಯಾರ್ಥಿಗಳು “ಅಭಿಮನ್ಯು ಕಾಳಗ’ ಆಳ್ವಾಸ್‌ ಕಾಲೇಜ್‌ ಮೂಡುಬಿದಿರೆ ಇವರು ಪಾಂಚಜನ್ಯ , ಎರಡನೇ ದಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮಂಗಳೂರು ಇವರು ಪಾಂಚಜನ್ಯ – ಗುರುದಕ್ಷಿಣೆ , ಎಸ್‌.ವಿ.ಎಸ್‌. ಕಾಲೇಜು, ಬಂಟ್ವಾಳ ಇವರು “ಸುದರ್ಶನ ವಿಜಯ’, ವಿವೇಕಾನಂದ ಕಾಲೇಜು ಪುತ್ತೂರು, ಇವರು “ನರಕಾಸುರ ಮೋಕ್ಷ’ ಎಂಬ ಪ್ರಸಂಗಗಳನ್ನು ಪ್ರದರ್ಶಿಸಿದರು. ಅತಿಥೆಯರಾದ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿಗಳಿಂದ ಕೊನೆಯ ಪ್ರದರ್ಶನ “ಮುರಾಸುರ ವಧೆ’ ಪ್ರದರ್ಶಿಸಲ್ಪಟ್ಟಿತು. 

ಆಳ್ವಾಸ್‌ ಕಾಲೇಜ್‌ ಮೂಡುಬಿದರೆ ಪ್ರಥಮ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ದ್ವಿತೀಯ ಮತ್ತು ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು, ಕಟೀಲು ತೃತೀಯ ಸ್ಥಾನ ಗಳಿಸಿವೆ. 

 ಯೋಗೀಶ್‌ ಕಾಂಚನ್‌ 

Advertisement

Udayavani is now on Telegram. Click here to join our channel and stay updated with the latest news.

Next