Advertisement
ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಎಎಲ್‌ಎಲ್‌ಬಿ ಕಲಿಯುತ್ತಿರುವ ಪವಿತ್ರಾ ಶೆಟ್ಯೆ ತನ್ನ ಕೇಶವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಕಾಣುವ ಸಲುವಾಗಿ ದಾನ ಮಾಡಿದ್ದಾಳೆ. ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ್ ನವರಾದ ಪವಿತ್ರಾ ಕಾನೂನು ಪದವಿ ಪಡೆಯುವ ಉದ್ದೇಶದಿಂದ ನಗರಕ್ಕೆ ಆಗಮಿಸಿದ್ದಾರೆ. ಅನಿವಾರ್ಯ ಕಾರಣದಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದ ಪವಿತ್ರಾ ಕಿಮೋಥೆರಪಿಗೆ ಒಳಗಾದ ಮಕ್ಕಳನ್ನು ನೋಡಿ ಕೇಶದಾನ ಮಾಡುವ ನಿರ್ಧಾರ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಆರೋಗ್ಯದಲ್ಲಿ ಉಂಟಾದ ಸಮಸ್ಯೆ ಹಿನ್ನೆಲೆಯಲ್ಲಿ ಪವಿತ್ರಾ ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ವೈದ್ಯರು ಕೆಲವು ಹೊತ್ತು ಹೊರಭಾಗದಲ್ಲಿ ಕಾಯುವಂತೆ ತಿಳಿಸಿದರಂತೆ. ಹಾಗೆ ಹೊರಭಾಗದಲ್ಲಿ ಕುಳಿತಿದ್ದಾಗ ಕಿಮೋ ಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ನಿಮ್ಮ ಕೂದಲು ತುಂಬಾ ಚೆನ್ನಾಗಿದೆ ಎಂದು ಮುಟ್ಟಿದ್ದಾಗ ಅವರ ಮುಖದಲ್ಲಿ ಕಂಡ ಅಸಹಾಯಕತೆಯಿಂದ ಬೇಸರಗೊಂಡ ಪವಿತ್ರಾ ಮಕ್ಕಳ ಮುಂದೆ ನಸು ನಗುತ್ತಾ ವೈದ್ಯರನ್ನು ಭೇಟಿಯಾಗಿ ವಾಪಾಸು ಬಂದಿದ್ದರು. ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯೊಂದನ್ನು ಸಂಪರ್ಕಿಸಿ ಕೇಶದಾನ ಮಾಡುವ ಬಗ್ಗೆ ಚರ್ಚಿಸಿ ಕಳೆದ ವಾರ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದ್ದಾರೆ. ನಗರದ ಅನೇಕ ವಿದ್ಯಾರ್ಥಿಗಳಿಂದ ಕೇಶದಾನ
ಪವಿತ್ರಾ ಅವರಿಗಿಂತ ಮುನ್ನ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹೆಣ್ಮಕ್ಕಳು ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ್ದಾರೆ. ಕ್ಯಾನ್ಸರ್ ಪೀಡಿತರಿಗಾಗಿ ಕೇಶ ಸಂಗ್ರಹಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಸಂಸ್ಥೆಯ ಮೂಲಕ ಕೇಶದಾನ ಮಾಡ ಲಾಗಿದೆ. ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ಕಿಮೋ ಥೆರಪಿ ಮಾಡಿದಾಗ ಅವರು ಕೇಶವನ್ನು ಕಳೆದುಕೊಳ್ಳುತಾರೆ. ಈ ಸಂದರ್ಭ ಹೆಚ್ಚಾಗಿ ಮಹಿಳೆಯರು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಅವರಿ ಗಾಗಿಯೇ ಕೃತಕ ಕೂದಲನ್ನು ತಯಾರಿಸಿ ಕೊಡಲಾಗುತ್ತದೆ. ಅದಕ್ಕಾಗಿ ಕೇಶದಾನದ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸಂಘ ಸಂಸ್ಥೆಗಳು ಕಾರ್ಯಚರಿಸುತ್ತಿವೆ.
Related Articles
ಕೇಶ ಎಲ್ಲ ಹೆಣ್ಮಕ್ಕಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಆದರೆ ನನಗೆ ಆ ಮಕ್ಕಳನ್ನು ನೋಡಿ ನನ್ನ ಸೌಂದರ್ಯಕ್ಕಿಂತ ಅವರ ಮುಖದ ನಗುವೇ ಮುಖ್ಯ ಎಂದೆನಿಸಿತು. ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ.
– ಪವಿತ್ರಾ ಶೆಟ್ಯೆ
Advertisement