Advertisement

ಯೋಗದೊಂದಿಗೆ ಕಾಲೇಜು ಆರಂಭ!

10:23 PM Jun 17, 2019 | Sriram |

ವಿಶೇಷ ವರದಿ-ಉಡುಪಿ: ಈ ಬಾರಿ ಕಾಲೇಜು ಆರಂಭಗೊಳ್ಳುವುದು ಜೂ. 20ರಂದು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುವುದು ಜೂ. 21ರಂದು. ಎಲ್ಲ ಕಾಲೇಜುಗಳಲ್ಲಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌), ಎನ್‌ಸಿಸಿ ಘಟಕಗಳಲ್ಲಿ ಯೋಗ ದಿನವನ್ನು ಆಚರಿಸಲು ಸೂಚನೆ ಬಂದಿದೆ. ಕಾಲೇಜು ಪ್ರವೇಶವಾಗುತ್ತಲೇ ಯೋಗಾಭ್ಯಾಸದಲ್ಲಿ ತೊಡಗುವ ಸಂಯೋಗವಿದು.
ಭಾವನಾತ್ಮಕ, ಮಾನಸಿಕ, ಶಾರೀರಿಕ ಹಂತಗಳ ಆಂತರಿಕ ಸಂಬಂಧಗಳಲ್ಲಿ ಸಮತೋಲನ ಕಾಪಾಡಲು ಯೋಗಾಭ್ಯಾಸ ಅಗತ್ಯ. ಇವು ಮೂರರಲ್ಲಿ ಒಂದು ಅವ್ಯವಸ್ಥಿತವಾದರೂ ಇನ್ನಿತರ ಹಂತಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ ಕಾಲೇಜುಗಳಲ್ಲಿ ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು, ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವ ಪ್ರಚುರಪಡಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ. ಇದೇ ರೀತಿ ವಿ.ವಿ. ಅನುದಾನ ಆಯೋಗದಿಂದಲೂ ಸೂಚನೆ ಬಂದಿದೆ. ಅದೇ ದಿನ ರಾತ್ರಿಯೊಳಗೆ ವರದಿ ಸಲ್ಲಿಸಲೂ ಸೂಚನೆ ಬಂದಿದೆ.

Advertisement

ಯೋಗ ದಿನಾಚರಣೆಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ವಿದ್ಯಾರ್ಥಿಗಳ ಪೋಷಕರಿಗೂ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು ಎಂದು ಸೂಚಿಸಲಾಗಿದೆ. ಕಾಲೇಜುಗಳ ಬೋಧಕ, ಬೋಧಕೇತರ ಸಿಬಂದಿ, ಎನ್‌ಸಿಸಿ ಕೆಡೆಟ್‌ಗಳೂ ಭಾಗವಹಿಸುವಂತೆ ಕರೆ ನೀಡಲಾಗಿದೆ. ಎಲ್ಲ ವಿ.ವಿ., ಕಾಲೇಜು, ಪಾಲಿಟೆಕ್ನಿಕ್‌ಗಳಿಗೂ ಸೂಚನೆ ಹೋಗಿರುವುದರಿಂದ ಎಲ್ಲ ಸಂಸ್ಥೆಗಳಲ್ಲಿ ಯೋಗ ದಿನ ನಡೆಯಲಿದೆ.

ಕೇಂದ್ರ ಸರಕಾರ ಯೋಗ ದಿನಾಚರಣೆಯ ಅನುಷ್ಠಾನಾಧಿಕಾರದ ಹೊಣೆಯನ್ನು ಆಯುಷ್‌ ಇಲಾಖೆಗೆ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಆಯುಷ್‌ ವೈದ್ಯಾಧಿಕಾರಿಗಳು ಸಂಯೋಜಕರಾಗಿದ್ದಾರೆ. ಧ್ಯಾನ, ಪ್ರಾಣಾಯಾಮ, ಕಪಾಲಭಾತಿ, ಯೋಗಾಸನಗಳನ್ನು ಅಳವಡಿಸಿ ಕೊಳ್ಳಲಾಗುತ್ತಿದೆ. ಎಲ್ಲ ಸರಕಾರಿ ಅಧಿಕಾರಿಗಳು, ಸಿಬಂದಿ ಪಾಲ್ಗೊಳ್ಳಲು ಸೂಚಿಸಲಾಗಿದೆ.

ಎಲ್ಲ ವಿ.ವಿ., ಕಾಲೇಜು, ಪಾಲಿಟೆಕ್ನಿಕ್‌ಗಳ ಎನ್‌ಎಸ್‌ಎಸ್‌ ಘಟಕಗಳು ಯೋಗ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚನೆ ಬಂದಿದೆ. ಇದರನುಸಾರ ಎಲ್ಲ ವಿದ್ಯಾ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.
– ಡಾ| ಗಣನಾಥ ಎಕ್ಕಾರು, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ, ಬೆಂಗಳೂರು

ಎಲ್ಲ ಕಾಲೇಜುಗಳಲ್ಲಿಯೂ ಯೋಗ ದಿನಾಚರಣೆ ನಡೆಸಲಿದ್ದಾರೆ. ಹೋದ ವರ್ಷವೂ ಇದೇ ರೀತಿ ನಡೆದಿತ್ತು.
– ಶ್ರೀಧರ ಮಣಿಯಾಣಿ, ವಿಶೇಷಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next