Advertisement
18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಆದ್ಯತಾ ವಲಯಕ್ಕೆ ಸೇರಿಸಿ ಕೊರೊನಾ ನಿರ್ಬಂಧಕ ಲಸಿಕೆ ನೀಡಿದ ಬಳಿಕ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ, ಪ್ರಾಥಮಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಚರ್ಚಿಸಿ ನಿರ್ಧಾರಕ್ಕೆ ಬರಲಿವೆ. ಮೊದಲು ಉನ್ನತ ಶಿಕ್ಷಣ, ಅನಂತರ ಪ್ರೌಢಶಾಲೆ, ಹೀಗೆ ಹಂತ ಹಂತವಾಗಿ ಆರಂಭಿಸಬೇಕಾಗುತ್ತದೆ. ಸಣ್ಣ ಮಕ್ಕಳಿಗೆ ಈಗಲೇ ಶಾಲೆ ಆರಂಭಿಸುವ ಧಾವಂತ ಇಲ್ಲ ಎಂದೂ ಸರಕಾರ ಹೇಳಿದೆ.
Related Articles
Advertisement
ಈಗಾಗಲೇ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡುವ ಕೆಲಸ ನಡೆಯುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳನ್ನು ಆದ್ಯತಾ ಗುಂಪಿಗೆ ಸೇರಿಸಿ ವ್ಯಾಕ್ಸಿನ್ ನೀಡಲಾಗುವುದು ಎಂದು ತಿಳಿಸಿದರು.
45 ದಿನದಲ್ಲಿ ಅನುಷ್ಠಾನ :
ಮೂರನೇ ಅಲೆ ನಿರ್ವಹಣೆ ತಜ್ಞರ ಸಲಹಾ ಸಮಿತಿ ಡಾ| ದೇವಿ ಶೆಟ್ಟಿ ತಂಡ ಮಂಗಳವಾರ ನೀಡಿರುವ ಪ್ರಾಥಮಿಕ ವರದಿಯನ್ನು ರಾಜ್ಯ ಸಚಿವರ ಕೊರೊನಾ ಸಮಿತಿಯಲ್ಲಿ ಚರ್ಚಿಸಲಾಗುವುದು. ಬಳಿಕ ಅಂತಿಮ ನಿರ್ಧಾರ ಕೈಗೊಂಡು 45 ದಿನಗಳೊಳಗೆ ಎಲ್ಲ ಜಿಲ್ಲೆಗಳ ಲ್ಲಿಯೂ ತಜ್ಞರ ಶಿಫಾರಸುಗಳನ್ನು ಅನುಷ್ಠಾನಿಸಲಾಗು ವುದು ಎಂದು ಸಚಿವ ಡಾ| ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಲೇಜು ಆರಂಭದ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಈ ಬಗ್ಗೆ ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳೆಲ್ಲರಿಗೂ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭಿಸಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯು ಮುಖ್ಯಮಂತ್ರಿಗಳ ಸಭೆಯಲ್ಲಿ ಸಲಹೆ ನೀಡಿತ್ತು. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಮತ್ತೆ ಚರ್ಚಿಸಲಾಗುವುದು. ವಿದ್ಯಾರ್ಥಿಗಳ ಕ್ಷೇಮ ಸರಕಾರದ ಮೊದಲ ಆದ್ಯತೆಯಾಗಿದೆ. ಆದ್ದರಿಂದ ಲಸಿಕೆ ಕೊಟ್ಟೇ ಕಾಲೇಜು ಆರಂಭಿಸಬೇಕೆಂದರೆ ಯಾವ ರೀತಿ, ಎಷ್ಟು ದಿನದೊಳಗೆ ಲಸಿಕಾ ಕಾರ್ಯಕ್ರಮ ಮಾಡಬೇಕೆಂದು ಚರ್ಚಿಸಲಾಗುವುದು ಎಂದರು.
ಕಾಲೇಜಿನಲ್ಲಿಯೇ ಲಸಿಕೆ: ಮಂಗಳೂರು ವಿ.ವಿ. :
ಮಂಗಳೂರು: ಕಾಲೇಜು ಆರಂಭಿಸಲು ಸರಕಾರ ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ 207 ಸಂಯೋಜಿತ ಕಾಲೇಜುಗಳಲ್ಲಿಯೇ ಜುಲೈ 15ರ ಒಳಗೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.
“ಉದಯವಾಣಿ’ ಜತೆ ಮಾತನಾಡಿದ ಅವರು, ಕಾಲೇಜು ಆರಂಭಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ಭೌತಿಕವಾಗಿ ತರಗತಿಗೆ ಹಾಜರಾಗುವ ಮುನ್ನ ಕನಿಷ್ಠ 1 ಡೋಸ್ ಲಸಿಕೆಯನ್ನು ತೆಗೆದುಕೊಂಡಿರಬೇಕು. ಈ ನೆಲೆಯಲ್ಲಿ ಆಯಾ ಕಾಲೇಜುಗಳು ವಿಶೇಷ ಆಸ್ಥೆ ವಹಿಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಜುಲೈ 3ನೇ ವಾರ ಎಸೆಸೆಲ್ಸಿ ಪರೀಕ್ಷೆ :
ಜುಲೈ ಮೂರನೇ ವಾರದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಬುಧವಾರ ಪ್ರತ್ಯೇಕ ಪ್ರಮಾಣಿತ ಕಾರ್ಯ ವಿಧಾನವನ್ನು ಬಿಡುಗಡೆ ಮಾಡಲಾಗಿದೆ. ಇಡೀ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರುವ ಸಿಬಂದಿ ಕೊರೊನಾ ಲಸಿಕೆ ಪಡೆದಿರಬೇಕು ಎಂದು ಇದರಲ್ಲಿ ಸೂಚಿಸಲಾಗಿದೆ. ಅಂದರೆ ಪರೀಕ್ಷೆ ವೇಳೆಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಪಡೆದಿರಬೇಕು. ಜತೆಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಅಥವಾ ಆರ್‌ಟಿಸಿಪಿಆರ್ ಪರೀಕ್ಷೆ ಮಾಡಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚಿಸಿದ್ದಾರೆ.