ದಾವಣಗೆರೆ: ಕಾಲೇಜಿಗೆ ಬಂದಂತಹ ವಿದ್ಯಾರ್ಥಿನಿ ನಾಪತ್ತೆ, ಕಾಲೇಜುನತ್ತ ಮುಖ ಮಾಡದ ಒಬ್ಬರೇ ಒಬ್ಬ ವಿದ್ಯಾರ್ಥಿ, ಕಾಲೇಜಿಗೆ ಬಂದವಿದ್ಯಾರ್ಥಿನಿಯರಿಗೆ ಸ್ವತಃ ಸ್ವಾಗತ ಕೋರಿದ ಪ್ರಾಚಾರ್ಯರು ಮತ್ತು ಬೋಧಕ ಸಿಬ್ಬಂದಿ…
ಇವು ಕೋವಿಡ್ ಅಟ್ಟಹಾಸದ ಕಾರಣಕ್ಕೆ ಎಂಟು ತಿಂಗಳ ನಂತರ ಮಂಗಳವಾರ ಪ್ರಾರಂಭವಾದ ಕಾಲೇಜುಗಳಲ್ಲಿ ಕಂಡ ಬಂದ ನೋಟಗಳು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜುಗಳ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದು, ನ.17 ರಿಂದ ಅಂತಿಮ ಪದವಿ, ಸ್ನಾತಕೋತ್ತರ ಪದವಿ ತರಗತಿಗೆ ಅನುಮತಿ ನೀಡಿದ್ದರೂ ವಿದ್ಯಾರ್ಥಿಗಳು ಬರುವುದಿಲ್ಲ… ಎಂಬ ನಿರೀಕ್ಷೆಯಂತೆ ಕೆಲ ಕಾಲೇಜುಗಳಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಕಂಡು ಬಂದರೆ. ಇನ್ನು ಕೆಲ ಕಾಲೇಜುಗಳಲ್ಲಿ ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಆದರೆ, ವಿದ್ಯಾರ್ಥಿಗಳ ಸುಳಿವೇ ಇರಲಿಲ್ಲ.
ದಾವಣಗೆರೆಯ ಮಹಿಳಾ ಕಾಲೇಜೊಂದಕ್ಕೆ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ಆಗಮಿಸಿದ್ದರು. ಇಬ್ಬರು ಕೋವಿಡ್ ಪರೀಕ್ಷಾ ಪ್ರಮಾಣಪತ್ರದೊಂದಿಗೆ ಬಂದ ಹಿನ್ನೆಲೆಯಲ್ಲಿ ಪ್ರವೇಶವಕಾಶ ನೀಡಲಾಯಿತು. ಓರ್ವ ವಿದ್ಯಾರ್ಥಿನಿಗಾಗಿ ಬೋಧನೆ ಸಹ ನಡೆಯಿತು. ಇನ್ನೋರ್ವ ವಿದ್ಯಾರ್ಥಿನಿ ಕೆಲ ಹೊತ್ತಿನಲ್ಲೇ ವಾಪಾಸ್ಸಾದರು. 700ಕ್ಕೂ ಹೆಚ್ಚು ಅಂತಿಮ ಪದವಿ ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ಹಾಜರಾಗಿದ್ದರು ಎನ್ನುವುದು ವಿಶೇಷ. ಇನ್ನೊಂದು ಕಾಲೇಜಿನಲ್ಲಿ ಅಂತಿಮ ಪದವಿಯ 380ಕ್ಕೂ ವಿದ್ಯಾರ್ಥಿಗಳಿದ್ದು ಪ್ರಾಚಾರ್ಯರಾದಿಯಾಗಿ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿ ಹಾಜರಾಗಿದ್ದರು. ಆದರೆ, ಒಬ್ಬ ಒಬ್ಬೇ ವಿದ್ಯಾರ್ಥಿ ಕಾಲೇಜಿನತ್ತ ಸುಳಿಯಲೇ ಇಲ್ಲ.
ಮತ್ತೂಂದು ಕಾಲೇಜಿನಲ್ಲಿ ಅಂತಿಮ ಪದವಿಯ 600ಕ್ಕೂ ಹೆಚ್ಚುವಿದ್ಯಾರ್ಥಿಗಳಿದ್ದು, ಅವರಲ್ಲಿ 30 ವಿದ್ಯಾರ್ಥಿಗಳು ಮಾತ್ರ ಬಂದಿದ್ದರು. ಕಾಲೇಜಿನಲ್ಲೇ ಕೋವಿಡ್ ಪರೀಕ್ಷೆ ಮಾಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ರಿಸಲ್ಟ್ ಇಲ್ಲದೆ ಬಂದಿದ್ದರು. ಅಂತಿಮವಾಗಿ ಕಾಲೇಜು ಆವರಣದಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಕೋವಿಡ್ ಪರೀಕ್ಷಾ ವ್ಯವಸ್ಥೆ ಮಾಡಲಾಯಿತು. ಬಹುತೇಕ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ವಿರಳವಾಗಿತ್ತು. ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬರಲೇ ಇಲ್ಲ. ಕಾಲೇಜುಗಳ ಪ್ರಾರಂಭದ ಮೊದಲ ದಿನವೇ ನೀರಸ ವಾತಾವರಣ ಕಂಡು ಬಂದಿತು.
ಆಫ್‌ಲೈನ್ ಕ್ಲಾಸ್ ಒಳ್ಳೇದು : ಕೋವಿಡ್ ಹಿನ್ನೆಲೆಯಲ್ಲಿ ಎಂಟು ತಿಂಗಳನಿಂದ ಕಾಲೇಜ್ ಇರಲೇ ಇಲ್ಲ. ಆನ್‌ಲೈನ್ ಮೂಲಕ ಪಾಠದ ವ್ಯವಸ್ಥೆ ಮಾಡಲಾಗಿತ್ತು. ಆನ್‌ಲೈನ್‌ಗಿಂತಲೂಆಫ್‌ಲೈನ್ ಬಹಳ ಅನುಕೂಲ ಆಗುತ್ತದೆ. ಹಾಗಾಗಿ ಕಾಲೇಜಿಗೆ ಬಂದಿದ್ದೇನೆ.ನನ್ನ ಫ್ರೆಂಡ್ಸ್ ಸಹ ಬರುವ ನಿರೀಕ್ಷೆ ಇತ್ತು. ಆದರೆ, ಕೆಲವರ ಪೋಷಕರು ಬೇಡ ಅಂದಿರುವ ಕಾರಣಕ್ಕೆ ಬರದೇ ಇರಬಹುದು. ಯಾರು ಬರಲಿ, ಬಿಡಲಿ ನಾನಂತೂ ಕಾಲೇಜಿಗೆ ಬರುತ್ತೇನೆ ಎಂದು ಹೆಸರು ಹೇಳಲಿಚ್ಚಿಸಿದ ವಿದ್ಯಾರ್ಥಿನಿಯೊಬ್ಬರು ಪ್ರತಿಕ್ರಿಯಿಸಿದರು.
ಏನೂಂತ ಹೇಳುವುದು : ಕಾಲೇಜುಗಳ ಪ್ರಾರಂಭಿಸುವ ಸರ್ಕಾರದ ನಿರ್ಧಾರದ ಬಗ್ಗೆ ಏನೂ ಅಂತ ಹೇಳುವುದು. ಅಂತಿಮ ವರ್ಷದ 380 ವಿದ್ಯಾರ್ಥಿನಿಯರು ಇದ್ದಾರೆ. ಒಬ್ಬರೇ ಒಬ್ಬರು ಬಂದಿಲ್ಲ. ನಮ್ಮ ಕಾಲೇಜಿಗೆ ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಆಗಮಿಸುತ್ತಾರೆ. ಕೋವಿಡ್ ಪರೀಕ್ಷೆಗೆ ಒಳಗಾದರೂ ರಿಸಲ್ಟ್ ಬರುವುದಕ್ಕೆ ಒಂದು ವಾರವಾದರೂ ಬೇಕಾಗುತ್ತದೆ. ಅದರಿಂದಲೂ ವಿದ್ಯಾರ್ಥಿನಿಯರು ಬರುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಉಪನ್ಯಾಸಕಿಯೊಬ್ಬರು ಹೇಳಿದರು.
ನಿರ್ಧಾರ ಸರಿ ಇದೆ : ಕಾಲೇಜುಗಳ ಪ್ರಾರಂಭಿಸುವ ಸರ್ಕಾರದ ನಿರ್ಧಾರ ತಪ್ಪೇನು ಇಲ್ಲ. ವಿದ್ಯಾರ್ಥಿಗಳೇ ಕೋವಿಡ್ ಟೆಸ್ಟ್ ಮಾಡಿಸಿ ಕೊಂಡು ಬರಬೇಕು ಎನ್ನುವ ಕಾರಣಕ್ಕೆ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಕಾಲೇಜಿನಲ್ಲೇ ಕೋವಿಡ್ ಪರೀಕ್ಷೆ ನಡೆಸುವ ವ್ಯವಸ್ಥೆಗೆ ಕೋರಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ. ರಾಘವನ್ ಅವರಿಗೆ ಪತ್ರಬರೆದಿದ್ದು, ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯರ ಪೋಷಕರಿಗೆ ಮಾದರಿ ಪತ್ರ ನೀಡಲಾಗಿದೆ.
–ಡಾ|ಬಿ.ಪಿ. ಕುಮಾರ್, ಪ್ರಾಚಾರ್ಯರು, ಎ.ವಿ. ಕಮಲಮ್ಮ ಮಹಿಳಾ ಕಾಲೇಜು.