ಕಲಬುರಗಿ: ಪ್ರಸಕ್ತ ವರ್ಷದಿಂದ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಆಯಾ ಕಾಲೇಜಿನ ಕೇಂದ್ರದ ವಿದ್ಯಾರ್ಥಿಗಳು ಅದೇ ಪರೀಕ್ಷಾ ಕೇಂದ್ರದಲ್ಲಿ ಬಾರದಂತೆ ಪರ್ಯಾಯ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಭಾಗ ಟ್ಟದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಯಾ ಕಾಲೇಜಿನ ವಿದ್ಯಾರ್ಥಿಗಳು ಆಯಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯದಿರುವುದರಿಂದ ಪರೀಕ್ಷಾ ಕೇಂದ್ರದ ಅಧೀಕ್ಷಕರು ಹೆಚ್ಚಿನ ಶ್ರಮ ವಹಿಸಬೇಕಾಗಿದೆ. ಆದ್ದರಿಂದ ಪರೀಕ್ಷೆಯನ್ನು ಸುವ್ಯವಸ್ಥೆಯಿಂದ ನಡೆಸಬೇಕೆಂದು ಸೂಚಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗಲೆಂದು ಪರೀಕ್ಷೆ ಸಮಯ ಬದಲಾವಣೆ ಮಾಡಲಾಗಿದೆ. ಪರೀಕ್ಷೆಗಳು ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿವೆ ಎಂದರು. ಪಿಯು ಇಲಾಖೆ ಸಹಾಯಕ ನಿರ್ದೇಶಕ ಅಶೋಕಕುಮಾರ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರದಲ್ಲಿ ಲೋಪ ದೋಷ ಕಂಡು ಬಂದಲ್ಲಿ ಅದನ್ನು ಮುಖ್ಯ ಅಧೀಕ್ಷರೇ ಸರಿಪಡಿಸಿಕೊಂಡು ಹೋಗುವ ಬಗೆಗೆ ಕುರಿತು ವಿವರಣೆ ನೀಡಿದರು.
ಕಲಬುರಗಿ ವಿಭಾಗದ ಆರು ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಮುಖ್ಯ ಅಧೀಕ್ಷಕರು ಪಾಲ್ಗೊಂಡಿದ್ದರು. ಕಲಬುರಗಿ ಪಿಯು ಶಿಕ್ಷಣ ಇಲಾಖೆ ಪಿಯು ಉಪನಿರ್ದೇಶಕ ಎಸ್.ಎಂ. ಸಾಳೂಂಕ್ಯ ವಂದಿಸಿದರು.