Advertisement

ನ. 17ರಿಂದ ಕಾಲೇಜು: ಪದವಿ ತರಗತಿ ಆರಂಭ, ನೇರ ಹಾಜರು-ಆನ್‌ಲೈನ್‌ ವಿದ್ಯಾರ್ಥಿಗಳ ಆಯ್ಕೆ

11:15 PM Oct 23, 2020 | mahesh |

ಬೆಂಗಳೂರು: ಕೋವಿಡ್ ಆತಂಕದ ನಡುವೆಯೇ ರಾಜ್ಯ ಸರಕಾರವು ಕಾಲೇಜುಗಳ ಬಾಗಿಲು ತೆರೆಯಲು ಮುಂದಾಗಿದೆ. ನ. 17ರಿಂದ ರಾಜ್ಯದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌, ಡಿಪ್ಲೊಮಾ ತರಗತಿಗಳು ಆರಂಭವಾಗಲಿವೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಆರಂಭಿಸಲಾಗಿದೆ.  ಇದರ ಜತೆಗೆ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬಹುದು ಅಥವಾ ಆನ್‌ಲೈನ್‌ ಕಲಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕೊರೊನಾ ಹಿನ್ನೆಲೆಯಲ್ಲಿ ಸರಕಾರವೇ ಇಂಥ ಅವಕಾಶ ನೀಡಿದೆ.

Advertisement

ಪೋಷಕರ ಒಪ್ಪಿಗೆ ಬೇಕು
ಕಾಲೇಜುಗಳ ಆರಂಭ ಮತ್ತು ಪೂರ್ವ ಸಿದ್ಧತೆಗಳ ಸಂಬಂಧ ಶುಕ್ರವಾರ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ. ಬಳಿಕ ನ. 17ರಿಂದ ಕಾಲೇಜುಗಳ ಬಾಗಿಲು ತೆರೆಯಲು ನಿರ್ಧರಿಸಲಾಯಿತು. “ವಿದ್ಯಾರ್ಥಿಗಳು ತರಗತಿಗಳಿಗೆ ಭೌತಿಕವಾಗಿ ಹಾಜರಾಗುವುದು ಕಡ್ಡಾಯವಲ್ಲ. ಯಾರು ಹಾಜರಾಗಲು ಇಚ್ಛಿಸುತ್ತಾರೋ ಅಂತಹ ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರವನ್ನು ತರಬೇಕು. ಜತೆಗೆ ಕಾಲೇಜಿಗೆ ಬರುತ್ತೇವೆ ಎಂದು ನ. 17ರೊಳಗೆ ನೋಂದಣಿಯನ್ನೂ ಮಾಡಿಸಬೇಕು ಎಂದು ಸಭೆಯ ಬಳಿಕ ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಾಕ್ಟಿಕಲ್‌: ಹಾಜರಿ ಕಡ್ಡಾಯ
ಬೋಧನಾ ತರಗತಿಗಳಿಗೆ ಬರುವುದು ಐಚ್ಛಿಕವಾಗಿದ್ದರೂ, ಪ್ರಾಯೋಗಿಕ ತರಗತಿಗಳಿಗೆ ಮಾತ್ರ ಎಲ್ಲ ವಿದ್ಯಾರ್ಥಿಗಳು ಬರಲೇಬೇಕು. ಈ ನಿಯಮ ರಾಜ್ಯದ ಎಲ್ಲ ಪದವಿ ಕಾಲೇಜುಗಳು, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಕಾಲೇಜುಗಳಿಗೆ ಅನ್ವಯವಾಗುತ್ತದೆ.

ಕೋವಿಡ್‌ ಕಾರ್ಯಪಡೆ ರಚನೆ
ತರಗತಿಗಳಲ್ಲಿ ಸೋಂಕು ಹರಡದಂತೆ ನಿಗಾ ವಹಿಸುವ ಸಲುವಾಗಿ ಪ್ರತೀ ವಿದ್ಯಾಸಂಸ್ಥೆಯಲ್ಲೂ ಕೋವಿಡ್‌ ಕಾರ್ಯಪಡೆ ರಚಿಸಲಾಗುವುದು. ಕಾಲೇಜು ತೆರೆಯುವಿಕೆಯ ಬಗ್ಗೆ ವಿದ್ಯಾರ್ಥಿಗಳಿಂದಲೇ ಬೇಡಿಕೆ ಬಂದಿದ್ದು, ಕ್ಯಾಂಪಸ್‌ ಸಂದರ್ಶನ ಮತ್ತು ಉದ್ಯೋಗ ನೇಮಕಾತಿಗಾಗಿ ಕಾಯುತ್ತಿದ್ದಾರೆ. ಇವರೆಲ್ಲರಿಗೂ ಸೂಕ್ತ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸಲು ಇಲಾಖೆ ಸಜ್ಜಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಅಶ್ವತ್ಥನಾರಾಯಣ ತಿಳಿಸಿದರು.

ಮಧ್ಯಾಂತರ ರಜೆ ಇಲ್ಲ
ಈ ವರ್ಷ ತಡವಾಗಿ ಕ್ಲಾಸ್‌ಗಳು ಆರಂಭವಾಗುತ್ತಿರುವುದರಿಂದ ಮಧ್ಯಂತರ ರಜೆ ಇರುವುದಿಲ್ಲ. ಹಾಗೆಯೇ ತರಗತಿಗಳನ್ನು ನಡೆಸುವುದಕ್ಕೆ ಹಲವಾರು ಇಲಾಖೆಗಳ ಸಹಕಾರ ಅಗತ್ಯವಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಆರೋಗ್ಯ ಸಹಿತ ಹಲವಾರು ಇಲಾಖೆಗಳು ಜತೆ ಸೇರಿ ಕೆಲಸ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿಗಳಿಗೂ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಹಾಸ್ಟೆಲ್‌ಗ‌ಳು ಕೂಡ ತೆರೆಯಲಿದ್ದು, ಎಚ್ಚರಿಕೆ ವಹಿಸು ವಂತೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗೆ ಸೂಚಿಸಲಾಗಿದೆ ಎಂದರು.

Advertisement

ಪ್ರಾಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ), ಶೈಕ್ಷಣಿಕ ಮಾರ್ಗಸೂಚಿಗಳು, ಸಾಮಾನ್ಯ ಮಾರ್ಗಸೂಚಿಗಳು, ಡಿಜಿಟಲ್‌ ಕಲಿಕೆ ನಿರ್ವಹಣ ವ್ಯವಸ್ಥೆ (ಡಿಎಲ…ಎಂಎಸ್‌), ಇ-ಪಠ್ಯ, ಡಿಎಲ್‌ಎಂಎಸ್‌-ವಿಶ್ಲೇಷಕಗಳು, ಡಿಜಿಟಲ್‌ ಕಲಿಕೆ ಅನುಷ್ಠಾನಗೊಳಿಸಲು ಬೇಕಾಗುವ ಉಪಕರಣ ವ್ಯವಸ್ಥೆ, ವಿದ್ಯಾರ್ಥಿ ನಿಲಯಗಳ ಆರಂಭ, ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನೀಡುವುದು ಇತ್ಯಾದಿ ವಿಷಯಗಳ ಬಗ್ಗೆ ಸಿಎಂ ಸಭೆಯಲ್ಲಿ ಮಂಡಿಸಲಾದ ವೀಡಿಯೋ ಪ್ರಸ್ತುತಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ವಿವರಿಸಿದರು.

ಪ್ರಮುಖ ಅಂಶ
– ಆನ್‌ಲೈನ್‌ ಅಥವಾ ತರಗತಿಗೆ ಹಾಜರಿ ಆಯ್ಕೆ ವಿದ್ಯಾರ್ಥಿಗಳಿಗೆ ಬಿಟ್ಟದ್ದು.
– ರವಿವಾರ ಆನ್‌ಲೈನ್‌ ತರಗತಿ ಮಾತ್ರ, ಬೇರೆ ಯಾವುದೇ ರಜೆ ಇಲ್ಲ.
– ಈ ವರ್ಷ ಸೆಮಿಸ್ಟರ್‌ ಪದ್ಧತಿ ಸಂಶಯ.
– ಪೋಷಕರ ಅನುಮತಿ ಕಡ್ಡಾಯ.
– ಆನ್‌ಲೈನ್‌ ಆಯ್ಕೆ ಮಾಡಿಕೊಂಡವರಿಗೆ ಕಾಲೇಜಿನಿಂದ ಲಿಂಕ್‌ ಪಡೆಯಲು ಅವಕಾಶ.
– ವಿದ್ಯಾರ್ಥಿಗಳ ಆಯ್ಕೆ , ಹಾಜರಾತಿ ಆಧಾರದಲ್ಲಿ ತರಗತಿ ವ್ಯವಸ್ಥೆ.

ಪದವಿ, ಸ್ನಾತಕೋತ್ತರ ಪದವಿ ಸಹಿತ ಉನ್ನತ ಶಿಕ್ಷಣ ತರಗತಿಗಳ ಆರಂಭ ಸಂಬಂಧ ಎಲ್ಲ ರೀತಿಯಲ್ಲೂ ಯೋಚಿಸಿ, ಸಮಾಲೋಚಿಸಿ, ಇಲಾಖೆಗಳು ಮತ್ತು ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ.
– ಡಾ| ಅಶ್ವತ್ಥನಾರಾಯಣ, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next