ಮೈಸೂರು: ನೂರಾರು ವರ್ಷಗಳ ಇತಿಹಾಸವಿರುವ ರಾಮನಗರ ಜಿಲ್ಲೆ ಕನಕಪುರದ ಶ್ರೀದೇಗುಲ ಮಠದ ಪಟ್ಟಾಧಿಕಾರವನ್ನು ಜೆಎಸ್ ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಚಾಮರಾಜನಗರ ಜಿಲ್ಲೆ ಕುಲಗಾಣದ ಕೆ.ಜಿ.
ಶಶಿಕುಮಾರ್ ಅವರಿಗೆ ಶ್ರೀಗಳ ಸಮ್ಮುಖದಲ್ಲಿ ನೀಡಲಾಯಿತು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿ ರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ದೇಗುಲ ಮಠದ ಹಿರಿಯ ಶ್ರೀಗಳಾದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರು, ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ಶಶಿಕುಮಾರ್ ಅವರಿಗೆ ಪಟ್ಟಾಧಿಕಾರ ನೀಡಲಾಯಿತು. ವಿಧಾನಸಭಾ ಚುನಾವಣಾ ನಂತರ ಪಟ್ಟಾಧಿಕಾರಿಯಾಗಿ ಪೀಠಾರೋಹಣ ಮಾಡಲಿದ್ದಾರೆ. ಉತ್ತರಾಧಿಕಾರಿ ಹಾಗೂ 13ನೇ ಪೀಠಾಧಿಪತಿಯಾಗಿದ್ದ ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ಅವರು ಅನಾ ರೋಗ್ಯದಿಂದ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.
ಮೈಸೂರಿನಲ್ಲಿ ವಾಸವಿರುವ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಸ್. ಗೌರಿ ಶಂಕರಸ್ವಾಮಿ, ಎಸ್. ಕೋಮಲಾಂಬ ಅವರ ದ್ವಿತೀಯ ಪುತ್ರ ಶಶಿಕುಮಾರ್(29) ಎಂಬಿಎ ಪದವೀಧರರು. ನಂಜನಗೂಡು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ಬಳಿಕ ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಧಾರ್ಮಿಕವಾಗಿ ಆಸಕ್ತಿ ಹೊಂದಿದ್ದ ಶಶಿಕುಮಾರ್ ಮೈಸೂರಿನ ಸುತ್ತೂರು ಮಠದಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದೇಗುಲ ಮಠದ ಶ್ರೀಗಳು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಅವರೊಡನೆ ಚರ್ಚಿಸಿ ಶಶಿಕುಮಾರ್‌ಗೆ ಪಟ್ಟಾಧಿಕಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ.