ಇದು ವೇದಕಾಲದ ಕತೆ. ಉಪಮನ್ಯು ಎಂಬವನಿದ್ದ. ಕಠಿಣ ವ್ರತ ಕೈಗೊಂಡು ವಿದ್ಯಾರ್ಜನೆಯಲ್ಲಿ ತಲ್ಲೀನವಾಗಿ ಕೃಶದೇಹಿಯಾಗಬೇಕಾದ ಅವನು ಸದೃಢನಾಗಿ, ಆರೋಗ್ಯವಂತನಾಗಿ ಇರುವುದನ್ನು ಗುರು ಗಮನಿಸಿದ. “ಹೀಗಿರಲು ಹೇಗೆ ಸಾಧ್ಯವಾಯಿತು?’ ಎಂದು ಗುರು ಕೇಳಿದರೆ, “ಭಿಕ್ಷೆ ಬೇಡಿ ಆಹಾರ ಸೇವಿಸುತ್ತೇನೆ’ ಎನ್ನುತ್ತಾನೆ.
ಗುರು ಆತ ಭಿಕ್ಷೆ ಬೇಡುವುದನ್ನು ನಿರ್ಬಂಧಿಸಿದ. ಮರುದಿನ ಉಪಮನ್ಯು ದನದ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿದು ಬದುಕಿದ. ಗುರು ಅದನ್ನೂ ನಿರ್ಬಂಧಿಸಿದ. ಕೊನೆಗೆ ಕಾಡಿನ ಎಲೆಯೊಂದನ್ನು ತಿಂದು ಬದುಕಲು ಪ್ರಯತ್ನಿಸಿದ ಉಪಮನ್ಯು. ಆ ಎಲೆಯನ್ನು ಸೇವಿಸಿದವರು ಕುರುಡರಾಗುತ್ತಾರಂತೆ. ಉಪಮನ್ಯು ಕಣ್ಣುಗಳನ್ನು ಕಳೆದುಕೊಂಡ. ಕೊನೆಗೆ ಅವನ ಗುರುಭಕ್ತಿಯನ್ನು ಮೆಚ್ಚಿ ಅಶ್ವಿನಿ ದೇವತೆಗಳು ಅವನಿಗೆ ಕಣ್ಣುಗಳನ್ನು ಕರುಣಿಸುತ್ತಾರಂತೆ.
ಕತೆಯ ವಿವರಗಳೇನೇ ಇರಲಿ, ಶಾಸ್ತ್ರವನ್ನು ಕಲಿಯುವುದರ ಜೊತೆಗೆ ಬದುಕನ್ನೂ ಕಲಿಯುವ ಪಾಠವನ್ನು ಹಿಂದಿನ ಗುರುಕುಲ ಶಿಕ್ಷಣದಲ್ಲಿ ಒದಗಿಸಲಾಗುತ್ತಿತ್ತೆಂಬುದಕ್ಕೆ ಈ ಕತೆಯೇ ಸಾಕ್ಷಿ. ಕಾಡಿಗೆ ತೆರಳಿದರೆ ಯಾವ ಎಲೆಯನ್ನು ತಿನ್ನಬೇಕು, ಯಾವ ಎಲೆಯನ್ನು ತಿನ್ನಬಾರದು ಎಂಬ ಸರಳ ಬದುಕಿನ ಆಯುರ್ವೇದವನ್ನು ಅರಿಯದಿದ್ದರೆ ಉಳಿದ ವೇದಗಳನ್ನು ಕಲಿತೇನು ಪ್ರಯೋಜನ?
ಉಪನಿಷತ್‌ನಲ್ಲಿ ಮತ್ತೂಂದು ಕತೆಯಿದೆ. ಅಯೋಧಾ ಧೌಮ್ಯ ಎಂಬ ಗುರುವಿನ ಶಿಷ್ಯ ಉದ್ದಾಲಕ ಆರುಣಿ. ಹೊಲದಲ್ಲಿ ಹರಿಯುವ ನೀರನ್ನು ತಡೆದು ನಿಲ್ಲಿಸುವಂತೆ ಗುರುಗಳು ಶಿಷ್ಯನಿಗೆ ಆದೇಶ ಮಾಡುತ್ತಾರೆ. ತೆರಳಿ ತುಂಬಾ ಹೊತ್ತಾದರೂ ಶಿಷ್ಯ ಮರಳುವುದಿಲ್ಲ. ಗುರುಗಳೇ ಅಲ್ಲಿಗೆ ಹೋಗಿ ನೋಡಿದಾಗ ಶಿಷ್ಯ ನೀರಿಗೆ ಅಡ್ಡಲಾಗಿ ತಾನೇ ಮಲಗಿದ್ದಾನೆ!
ನೀರನ್ನು ನಿಲ್ಲಿಸಲು ಅಸಾಧ್ಯವಾಗಿರಬೇಕು. ಗುರುವಿನ ಕೋಪಕ್ಕೆ ತುತ್ತಾಗುವುದು ಬೇಡವೆಂದು ತಾನೇ ಗದ್ದೆಯ ಬದುವಿನಲ್ಲಿ ಮಲಗಿ ಹರಿಯುವ ನೀರಿಗೆ ತಡೆಯೊಡ್ಡಿದ್ದ. ಅದು ಕೇವಲ ಗುರುಭಕ್ತಿಯ ಕತೆಯಲ್ಲ , ಗುರು ವೇದಾಧ್ಯಯನ ನಿರತ ಶಿಷ್ಯನಿಗೆ ಕೃಷಿಯ ಜ್ಞಾನವನ್ನು ಕಲಿಸಿದ ಒಂದು ಕಥನ !
ಇವತ್ತು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ದಿನ ಹೊಲ, ಗದ್ದೆ, ತೋಟಗಳಿಗೆ ಹೋಗಿ ದುಡಿಯಲು ಕಲಿಯುವ ಅವಕಾಶವನ್ನು ಕಡ್ಡಾಯವಾಗಿಸಬಹುದು. ಪಟ್ಟಣದ ಮಕ್ಕಳು ಅತ್ಯಂತ ಪ್ರತಿಭಾವಂತರಾಗಿರುತ್ತಾರೆ, ಆದರೆ ಅವರಿಗೆ, ಅಕ್ಕಿಯನ್ನು ಹೇಗೆ ಬೆಳೆದು, ಪಡೆಯುವುದು ಎಂಬ ಕನಿಷ್ಟಜ್ಞಾನ ಇರುವುದಿಲ್ಲ.
ಮತ್ತೆ “ಡೌನ್ ಟು ಅರ್ಥ್’ ಎನ್ನುತ್ತೇವಲ್ಲ- ಅದು ಸಾಧ್ಯವಾಗುವುದು ಹೇಗೆ?
ಕೆ. ಎನ್. ಕುಲಕರ್ಣಿ