Advertisement

ಹಿಂದುಳಿದ್ದ ಕಾಲೇಜು ಫ‌ಲಿತಾಂಶದಲ್ಲಿ ಫ‌ಸ್ಟ್‌

03:29 PM May 08, 2019 | Suhan S |

ಬೇತಮಂಗಲ: ದಶಕದ ಹಿಂದೆ ಮಕ್ಕಳಿಗೆ ಕೂರಲು ಸೂಕ್ತ ಕೊಠಡಿ, ಶೌಚಾಲಯ, ಬೋಧಕರು, ಆಸನಗಳ ವ್ಯವಸ್ಥೆ ಇರಲಿಲ್ಲ. ಸಾಕಷ್ಟು ಹಿಂದುಳಿದಿದ್ದ ಗಡಿ ಭಾಗದ ಸರ್ಕಾರಿ ಪದವಿ ಪೂರ್ವ ಕಾಲೇಜು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈಗ ಪ್ರಾಂಶುಪಾಲ ಡಾ.ಪಿ.ಕೃಷ್ಣಪ್ಪ, ಉಪನ್ಯಾಸಕರು ಸರ್ಕಾರದ ಅನುದಾನದ ಜೊತೆಗೆ ತಮ್ಮ ವೇತನವನ್ನೂ ನೀಡಿ ಕಾಯಕಲ್ಪ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಬೇತಮಂಗಲದಿಂದ 3 ಕಿ.ಮೀ. ದೂರದಲ್ಲಿರುವ ಈ ಸರ್ಕಾರಿ ಪದವಿ ಪೂರ್ವ ಕಾಲೇಜು 2009ರಲ್ಲಿ ಪ್ರಾರಂಭಗೊಂಡಿತ್ತು. ಅಂದು 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಕೂರಲು ಖುರ್ಚಿ, ಸುಸಜ್ಜಿತ ಕೊಠಡಿ, ಶೌಚಾಲಯ, ಹೀಗೆ ಹಲವು ಸೌಲಭ್ಯಗಳು ಮರೀಚಿಕೆಯಾಗಿ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಫ‌ಲಿತಾಂಶವೂ ಶೇ.40ಕ್ಕಿಂತ ಮೇಲೆ ಏಳುತ್ತಿರಲಿಲ್ಲ.

2011ರಲ್ಲಿ ಅಧಿಕಾರ ವಹಿಸಿಕೊಂಡ ಪ್ರಾಂಶುಪಾಲ ಡಾ.ಪಿ.ಕೃಷ್ಣಪ್ಪ, ಸರ್ಕಾರದಿಂದ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡಿಕೊಂಡು ಕಾಲೇಜಿನ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸಲು ಶ್ರಮಿಸಿದ್ದಾರೆ. ಕಾಲೇಜು ಅಭಿವೃದ್ಧಿಗೆ ಕೈಜೋಡಿಸಿರುವ ಉಪನ್ಯಾಸಕರೂ ತಮ್ಮ ವೇತನದಲ್ಲೇ ವಿದ್ಯಾರ್ಥಿಗಳಿಗೆ ಆಸನ(ಡೇಸ್ಕ್)ಗಳನ್ನು ಖರೀದಿಸಿಕೊಟ್ಟಿದ್ದಾರೆ. ಖಾಸಗಿ ಕಾಲೇಜಿನಂತೆಯೇ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದ್ದಾರೆ.

ಕಾಲೇಜಿನ ಆವರಣದಲ್ಲಿ ನೂರಾರು ವಿವಿಧ ಜಾತಿಯ ಮರ, ಗಿಡಗಳನ್ನು ಬೆಳೆಸಿ, ಅವುಗಳನ್ನು ಪೋಷಣೆ ಮಾಡಲಾಗುತ್ತಿದೆ. ಕಾಲೇಜಿನಲ್ಲಿ ಶಿಸ್ತು, ಸಮಯಪಾಲನೆ, ಇತರೆ ಕಾರ್ಯವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗುತ್ತದೆ. ಇದು ಗುಣಮಟ್ಟದ ಫ‌ಲಿತಾಂಶ ದೊರೆಯಲು ಕಾರಣವಾಗಿದೆ. ಸುಂದರಪಾಳ್ಯ ಕೆಜಿಎಫ್ ತಾಲೂಕಿಗೆ ಸೇರಿದ್ದರೂ ಬಂಗಾರಪೇಟೆ, ಮುಳಬಾಗಿಲು, ಕೋಲಾರ ಹಾಗೂ ನೆರೆಯ ಆಂಧ್ರ ಪ್ರದೇಶದಿಂದಲೂ ಮಕ್ಕಳು ಈ ಕಾಲೇಜಿಗೆ ಸೇರಿದ್ದಾರೆ.

ವಿದ್ಯಾರ್ಥಿಗಳಿಗೆ, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಬೋಧನೆ, ಸಮವಸ್ತ್ರ, ಇತರೆ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆಸಕ್ತಿ ಇರುವ ಮಕ್ಕಳಿಗೆ ಸಂಜೆಯೂ ವಿಶೇಷ ತರಗತಿ, ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ.

Advertisement

ವಿದ್ಯಾರ್ಥಿಗಳ ಹಾಜರಿ: 2018-19ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ ಸಾಲಿನಲ್ಲಿ 583 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. 2013ನೇ ಸಾಲಿನಿಂದ ಕಾಲೇಜಿನಲ್ಲಿ ವಿಜ್ಞಾನ (ಕೋರ್ಸ್‌) ವಿಷಯ ಪ್ರಾರಂಭಗೊಂಡಿದ್ದು, ಹೆಚ್ಚಿನ ವಿದ್ಯಾರ್ಥಿಗಳನ್ನು ಸೆಳೆಯವ ಕಾರ್ಯ ಮಾಡಲಾಗಿದೆ. ಫ‌ಲಿತಾಂಶದಲ್ಲಿ ಜಿಲ್ಲಾ ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಪ್ರಸಕ್ತ ಸಾಲಿನಿಂದ ಕಲಾ ವಿಭಾಗ, ವಾಣಿಜ್ಯ ವಿಭಾಗಗಳನ್ನು ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಲು ಚಿಂತನೆ ನಡೆದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ನಗರ ಪ್ರದೇಶಗಳ ಖಾಸಗಿ ಕಾಲೇಜುಗಳಂತೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪ್ರಸಕ್ತ ಸಾಲಿನ ವಿಜ್ಞಾನ ವಿಭಾಗದಲ್ಲಿ ಪೂಜಾ 600/564 ಅಂಕ ಪಡೆದುಕೊಂಡು ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದಿದ್ದು, ದಾಖಲಾತಿ ಹೆಚ್ಚಳವಾಗಲು ಕಾರಣಕರ್ತರಾಗಿದ್ದಾರೆ.

ಎನ್‌ಎಸ್‌ಎಸ್‌ ಶಿಬಿರದಲ್ಲೂ ಮುನ್ನಡೆ: ಪ್ರತಿ ವರ್ಷವೂ ಸಂದರಪಾಳ್ಯ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ. ರಾಜ್ಯಶಾಸ್ತ್ರ ಉಪನ್ಯಾಸಕ ಟಿ.ಸಿ ಮಂಜುನಾಥ್‌ ಇದರ ನೇತೃತ್ವ ವಹಿಸುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 8 ಬಾರಿ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್‌ ಆಗಿದೆ. ಕಾಲೇಜಿನ ವಿದ್ಯಾರ್ಥಿನಿ ಪ್ರತ್ಯುಶ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಸಾಧನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೆ ಸಮಾಜಶಾಸ್ತ್ರ ಉಪನ್ಯಾಸಕ ಎನ್‌.ಶಿವಕುಮಾರ್‌ ಶ್ರಮ ಹೆಚ್ಚಿದೆ.

ಒಟ್ಟಾರೆ ಕಾಲೇಜಲ್ಲಿ 12 ಉಪನ್ಯಾಸಕರು, ಪ್ರಾಂಶುಪಾಲ, ಒಬ್ಬ ಕ್ಲರ್ಕ್‌, ಒಬ್ಬ ಅಟೆಂಡರ್‌ ಕಾರ್ಯನಿರ್ವಹಿಸುತ್ತಿದ್ದು, ನಾವು ಕಾಲೇಜಿನ ಅಭಿವೃದ್ಧಿಗೆ ಶ್ರಮಮೀರಿ ಕೆಲಸ ಮಾಡಿದ್ದೇವೆ. ಅದೇ ರೀತಿ ಮಕ್ಕಳು ಉತ್ತಮ ಫ‌ಲಿತಾಂಶ ನೀಡುತ್ತಿದ್ದಾರೆ. ನಾವು ಇಂತಹ ಕಾಲೇಜು ಉಪನ್ಯಾಸಕರೆಂದರೆ ಹೆಚ್ಚು ಮಂದಿ ಹೆಮ್ಮೆ ಪಡುತ್ತಾರೆ ನಮಗೆ ತೃಪ್ತಿ ತಂದಿದೆ ಎನ್ನುತ್ತಾರೆ.

● ಆರ್‌.ಪುರುಷೋತ್ತಮರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next