ಕಾಲೇಜು ಕ್ಯಾಂಪಸ್ ಎಂದರೆ ಮೋಜು ಮಸ್ತಿಗೆ ಮಾತ್ರ ಸೀಮಿತವಲ್ಲ. ಅಲ್ಲಿ ವ್ಯಕ್ತಿತ್ವ ವಿಕಸನಕ್ಕೂ ಸಾಕಷ್ಟು ಅವಕಾಶಗಳಿವೆ. ಅದರ ಸದ್ಭಳಕೆ ವಿದ್ಯಾರ್ಥಿಗಳ ಕೈಯಲ್ಲಿದೆ. ಭಿತ್ತಿ ಪತ್ರಿಕೆ, ವಿವಿಧ ಸಂಘಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿ
ಕಾಲೇಜು ಶಿಕ್ಷಣದಲ್ಲಿ ಅವಕಾಶಗಳಿಗೆ ಬರವಿಲ್ಲ. ಕಲಿಕೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಹಲವು ಸಂಘ ಸಂಸ್ಥೆಗಳು ಕಾಲೇಜಿನೊಳಗೆ ಮತ್ತು ಹೊರ ಭಾಗದಲ್ಲಿವೆ. ಅವುಗಳ ಸದ್ಭಳಕೆಗೆ ಅನೇಕ ವೇದಿಕೆಗಳು ಕೂಡ ಇವೆ. ಈ ಕಾಲಘಟ್ಟದಲ್ಲಿ ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವಕಾಶ ಕಲ್ಪಿಸಿಕೊಡುತ್ತಾರೆ.
ಭಿತ್ತಿ ಪತ್ರಿಕೆ, ಗೋಡೆ ಮ್ಯಾಗಜಿನ್‌ಗಳು ಬರೆಹಗಾರರನ್ನು, ಸಾಹಿತ್ಯ ಆಸಕ್ತರನ್ನು, ಕಥೆ, ಕವನ, ಪ್ರಬಂಧಕಾರರನ್ನು ಸೃಷ್ಟಿಸುತ್ತಿವೆ. ಇದು ಭವಿಷ್ಯದಲ್ಲಿ ಬರಹ ಕ್ಷೇತ್ರದಲ್ಲಿ ಸಾಧನೆ ತೋರುವವರಿಗೆ ಒಂದು ಪೂರ್ವತಯಾರಿ ಇದ್ದಂತೆ. ಕನ್ನಡ ಸಂಘಗಳ ಸ್ಥಾಪಿಸಿ ಕ್ಷೇತ್ರ ಪರ್ಯಟನೆ, ಅಧ್ಯಯನ ಶಿಬಿರ, ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅನುಭವ ಸಮಾಜದಲ್ಲಿ ಗುರುತಿಸಿಕೊಳ್ಳಲು ಅನುಕೂಲ ಸೃಷ್ಟಿಸಬಹುದು.
ಸಾಂಸ್ಕೃತಿಕ, ಸಾಹಿತಿಕ ಸಂಘಗಳು, ಕೆಲವು ಕೋರ್ಸ್‌ಗಳಲ್ಲಿ ಕಡ್ಡಾಯವಾಗಿ ಇರಬೇಕಾಗಿರುವ ಸಂಘಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಮುಖ್ಯವಾಗಿ ಸಮಾಜ ಕಾರ್ಯ ಅಧ್ಯಯನ ಮಾಡುವ ವಿದ್ಯಾರ್ಥಿಗಳು ವರ್ಷದ ಅರ್ಧ ಭಾಗ ಅಧ್ಯಯನ ಪ್ರವಾಸ, ಕಾರ್ಯಕ್ರಮ ಆಯೋಜನೆಯಲ್ಲೇ ಬ್ಯುಸಿಯಾಗಿರುತ್ತಾರೆ. ಇದರಿಂದ ನಾಯಕತ್ವ, ಮಾತುಗಾರಿಕೆ, ಭಯ ದೂರವಾಗುವಿಕೆ ಅನುಕೂಲಗಳಿವೆ. ಸಂಘಟನೆ ಚಾತುರ್ಯವು ಅರಿತು ರಾಜಕೀಯ ಸಹಿತ ಇತ್ಯಾದಿ ಕ್ಷೇತ್ರಗಳಲ್ಲಿ ಪಳಗಲು ಸಾಧ್ಯವಾಗಬಹುದು.
ಈಗ ಕಾಲೇಜು ಕ್ಯಾಂಪಸ್‌ಗಳಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಾದ ರೋಟರಿ, ಜೇಸಿಯಂತಹ ಸಂಘಗಳು ವಿದ್ಯಾರ್ಥಿಗಳಿಗೆಂದೇ ಜ್ಯೂನಿಯರ್ ಸಂಘಗಳನ್ನು ಸೃಷ್ಟಿಸಿವೆ. ಅಲ್ಲಿ ವರ್ಷಕೊಮ್ಮೆ ಪದಾಧಿಕಾರಿಗಳನ್ನು ಆರಿಸಿ, ಒಂದಷ್ಟು ಕಾರ್ಯಚಟುವಟಿಕೆ ನೀಡಲಾಗುತ್ತದೆ. ಅದನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಗುರಿ ನೀಡಲಾಗುತ್ತದೆ. ಗುರಿ ಮೀರಿದ ಸಾಧನೆ ತೋರಿದ ಸಂಘಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ. ಈ ಮೂಲಕ ಸಮಾಜಮುಖೀ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ.
ಎನ್ಸೆಸ್ಸೆಸ್, ಎನ್‌ಸಿಸಿ, ಸ್ಫೋರ್ಟ್ಸ್ ಸಂಘಗಳು ಸೈನ್ಯ, ಪೊಲೀಸ್ ಮೊದಲಾದ ಹುದ್ದೆಗಳಿಗೆ ವಿದ್ಯಾರ್ಥಿ ಸಮುದಾಯವನ್ನು ಸೆಳೆಯಲು, ಸಜ್ಜುಗೊಳಿಸಲು ಸಹಕಾರಿ. ದುರ್ಘಟನೆ, ಪ್ರಾಕೃತಿಕ ಅವಘಡ ಉಂಟಾದ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಧುಮ್ಮುಕ್ಕಿ ಸಹಾಯಹಸ್ತ ಚಾಚಿದ ಉದಾಹರಣೆ ಬೇಕಾದಷ್ಟಿವೆ.
ಸದ್ಭಳಕೆ ಪ್ರಮಾಣ ಇಳಿಮುಖ
ವ್ಯಕ್ತಿತ್ವ ವಿಕಸನಕ್ಕೆ ದಾರಿಗಳು ಹಲವು. ಅದು ಯುವಜನತೆ ಯನ್ನು ಸೆಳೆಯುವ ಪ್ರಮಾಣ ಹಿಂದಿಗಿಂತ ಹೆಚ್ಚು. ಆದರೆ ಸದ್ಭಳಕೆ ಪ್ರಮಾಣ ಕಡಿಮೆ. ಬಡತನ, ಆರ್ಥಿಕ ಸಮಸ್ಯೆಗಳು ಈಗಿನ ಪೀಳಿಗೆಯ ಯುವ ಸಮುದಾಯಕ್ಕೆ ಅಷ್ಟಾಗಿ ಕಾಡದಿರುವ ಕಾರಣ ಬದುಕು ರೂಪಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಈ ಅವಕಾಶ ಬಳಕೆ ಆಗುವುದು ಅಷ್ಟಕಷ್ಟೆ. ನೇಮ್ ಆ್ಯಂಡ್ ಫೇಮ್ ನೆಪದಲ್ಲಿ ಸಂಘಟನೆ ಚುಕ್ಕಾಣಿ ಹಿಡಿಯುವವರೆ ಅಧಿಕ.
- ಕಿರಣ್ ಕುಂಡಡ್ಕ