ಹೊಸ ಹುರುಪು, ಹೊಸ ಕನಸಿನೊಂದಿಗೆ ಹೊಸ ದಾರಿಯಲಿ ಹೆಜ್ಜೆಯನ್ನಿಟ್ಟು ಬಂದ ಆ ದಿನ. ಹೊಸ ಪರಿಚಯ, ಹೊಸ ಕಾಲೇಜು ಅನ್ನೋ ಖುಷಿಗೆ ಪಾರವೇ ಇಲ್ಲ. ಕಾಲೇಜು ಹೇಗೋ ಏನೋ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲದಿದ್ದರೂ ಮನಸ್ಸಲ್ಲಿರೋ ಆ ಕ್ಷಣದ ಖುಷಿ ಆ ಪ್ರಶ್ನೆಯನ್ನು ಮರೆಮಾಚಿಸಿಬಿಟ್ಟಿತ್ತು. ಆತಂಕಪಟ್ಟು ಕೂತಾಗಲೆಲ್ಲಾ ನನ್ನ ಕನಸಿನ ಕಾಲೇಜಿದು, ನಾನಂದುಕೊಂಡಂತೆ ಇರಬಹುದು ಎಂಬ ಬಲವಾದ ನಂಬಿಕೆ ಆಧಾರವಾಗುತ್ತಿತ್ತು.
ಕಾಲೇಜು ಆರಂಭವಾಗಿ ತಿಂಗಳುಗಳೇ ಕಳೆದಿದ್ದರೂ ಹೊಸದು ಅನ್ನೋ ಭಾವ ಬರಲೇ ಇಲ್ಲ. ಹೊಸ ಸ್ನೇಹಿತರು ಮೊದಲೇ ಪರಿಚಯ ಅನ್ನೋ ಹಾಗೆ ತುಂಬಾನೇ ಆತ್ಮೀಯತೆ ಬೆಳೆದುಬಿಟ್ಟಿತ್ತು. ನಮ್ಮದು 15-16 ಜನರ ಗುಂಪು. ಕಾಲೇಜಿನ ಸೀನಿಯರ್ಸ್ ಗಳಿಗೆಲ್ಲಾ ನಾವೇ ಅಚ್ಚುಮೆಚ್ಚು. ಏನೇ ಸಂದರ್ಭವಾಗಿರಲಿ ನಾವೆಲ್ಲ ಒಟ್ಟಾಗಿ ನಿಲ್ಲುತ್ತಿದ್ದೆವು. ಬಹುಷಃ ಆ ಒಗ್ಗಟ್ಟುತನವೇ ನಮ್ಮ ಈ ಗೆಳತನದ ಬುನಾದಿ ಅನಿಸುತ್ತೆ. ಬದುಕಲ್ಲಿ ಆಸೆಪಟ್ಟಿದ್ದು ಏನೂ ನನ್ನದಾಗಿಲ್ಲ, ಯಾವುದೂ ನನಗೆ ದೊರೆತಿಲ್ಲ ಎಂಬ ಕೊರಗಿತ್ತು. ಆದರೆ ಬಯಸದೆ ಸಿಕ್ಕ ಪ್ರೀತಿಯೆಂದರೆ ಅದು ವಜ್ರದಂತಹ ಸ್ನೇಹಿತರ ಪ್ರೀತಿ. ಪದವಿಯಲ್ಲಿ ಆದ ಪ್ರತೀ ಪರಿಚಯವೂ ಒಂದು ಸುಂದರ ನೆನಪನ್ನು ಕೊಟ್ಟಿದೆ. ಕಾಲೇಜಿನಲ್ಲಿ ಸ್ನೇಹಿತರಾಗಿ, ಬದುಕಲ್ಲಿ ಹಿತೈಷಿಗಳಾಗಿ ಪ್ರತೀ ಕಷ್ಟದ ಸಂದರ್ಭಕ್ಕೂ ಕೈ ಬಿಡದೆ ನಿಂತಿರುವ ನಿಷ್ಕಲ್ಮಶ ಮನಸ್ಸುಗಳು. ಬದುಕಲ್ಲಿ ಸಿಕ್ಕ ಬೆಲೆಕಟ್ಟಲಾಗದ ಸಂಪತ್ತುಗಳಿವು.
ಡಿಗ್ರಿ ಲೈಫ್ ಎಂದರೆ ಅದು ಮೂರು ವರ್ಷಗಳ ನೆನಪಿನ ಬುತ್ತಿ. ಆದರೆ ನಮ್ಮ ಬ್ಯಾಚ್ ಗೆ ಡಿಗ್ರಿ ಲೈಫು ಬೇಗ ಬೇಗನೆ ಮುಗಿದು ಹೋಯಿತು. ಒಮ್ಮೆ ಹಿಂದಿರುಗಿ ನೋಡಿದಾಗ ಮೊನ್ನೆ ತಾನೇ ಕಾಲೇಜಿಗೆ ಬಂದಿದ್ದು ಅನಿಸುತ್ತೆ. ಆದರೆ ಈಗ ಕೊನೆಯ ವರ್ಷದ ಹೊಸ್ತಿಲಲ್ಲಿ ನಿಂತುಬಿಟ್ಟಿದ್ದೇವೆ. ಮೂರು ವರ್ಷಗಳ ನೆನಪನ್ನು ಒಂದೂವರೆ ವರ್ಷದಲ್ಲಿಯೇ ಅನುಭವಿಸುವಂತಹ ಅನಿವಾರ್ಯತೆ ಒದಗಿದೆ. ಒಂದೊಮ್ಮೆ ಅನಿಸಿ ಬಿಡುತ್ತೆ ಮತ್ತೆ ಜೂನಿಯರ್ ಗಳಾಗಿ ಇದ್ದುಬಿಡೋಣ ಎಂದು. ಆದರೆ ನಾವು ಸೀನಿಯರ್ಸ್ ಗಳಾಗಿ ನಿಂತಾಗ ವ್ಯತ್ಯಾಸಗಳೇನೂ ಇಲ್ಲವಾದರೂ ನೂರಾರು ಕೊಂಕು ಆಲೋಚನೆಗಳು. ಇನ್ನೇನು ನಮ್ಮದೇ ಹವಾ ನಾವಂದುಕೊಂಡಂತೆ ಇರಬಹುದು ಎನ್ನುವ ಆಲೋಚನೆಗಳು ಬಂದು ಹೋಗಿಬಿಡುತ್ತವೆ. ಆದರೆ, ಅದೆಲ್ಲವನ್ನೂ ಪಕ್ಕಕ್ಕಿಟ್ಟು ಕಾಲೇಜು ಜೀವನವನ್ನು ಅನುಭವಿಸಿ ಕನಸಿನತ್ತ ಸಾಗಿ ದಡ ಸೇರಿದರೆ ಬದುಕಿಗೊಂದು ಅರ್ಥ ಸಿಗುತ್ತೆ ಅಲ್ವಾ?
ಕೊನೆಯ ಆರು ತಿಂಗಳುಗಳನ್ನು ಮರೆಯಲಾಗದಂತೆ ಇನ್ನಷ್ಟು, ಮತ್ತಷ್ಟು ಉತ್ಸುಕತೆಯಲಿ ಕಳೆಯೋಣ ಅಂದುಕೊಂಡಾಗ ಅದನ್ನು ನಿಜವಾಗಿಸಿದ್ದು ಮುತ್ತಿನಂತ ಜೂನಿಯರ್ಸ್ ರಕ್ತಹಂಚಿ ಹುಟ್ಟಿಲ್ಲವಾದರೂ ಅದಕ್ಕೂ ಮಿಗಿಲಾಗಿ ತಮ್ಮಂದಿರ ಪ್ರೀತಿ ಕೊಟ್ಟಿರುವ ಬಗೆ ಎಂದಿಗೂ ಮರೆಯಲಾಗದ್ದು. ಅವರೊಂದಿಗೆ ಕಳೆದಿರುವ ದಿನಗಳನ್ನು ಹೇಗೆ ಮರೆಯಲಿ? ಆದರೆ ಅನಿವಾರ್ಯತೆ ಎನ್ನುವುದು ಎಲ್ಲವನ್ನು, ಎಲ್ಲರನ್ನು ಕಟ್ಟಿಹಾಕಿದೆ.
ಕನಸಿನ ಕಾಲೇಜು ಜೀವನಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳುವ ಸಂದರ್ಭ ಹತ್ತಿರವಾಗುತ್ತಿದೆ. ಬದುಕಲ್ಲಿ ತಿಳಿಯದಿರುವ ವಿಷಯವ ನಾನಿಲ್ಲಿ ಅರಿತೆ. ಜೀವನದಲ್ಲಿ ಎಂದೂ ಸಿಗದ ಒಲವ ಇಲ್ಲಿ ಕಂಡೆ. ಭಾರವಾದ ಹೆಜ್ಜೆಯನಿಟ್ಟು ನಡೆ ನೀ ಮುಂದೆ… ನಡೆ ನೀ ಮುಂದೆ. ಅರ್ಚನಾ ವಿ.ವಿ. ಕಾಲೇಜು ಮಂಗಳೂರು