Advertisement

ಕುಸಿಯುವ ಭೀತಿಯಲ್ಲಿ ಕಡಬ ಕಾಲೇಜು ತರಗತಿ ಕೊಠಡಿ

03:05 AM Jun 20, 2018 | Team Udayavani |

ಕಡಬ: ಮಳೆಯ ನೀರಿಗೆ ತೋಯ್ದು ಬಿರುಕು ಬಿಟ್ಟು ಗೋಡೆಗಳು, ಶಿಥಿಲಗೊಂಡಿರುವ ಛಾವಣಿ, ಯಾವುದೇ ಕ್ಷಣದಲ್ಲಿ ಧರಾಶಾಯಿಯಾಗಲು ಸಿದ್ಧಗೊಂಡಿರುವ ಕಟ್ಟಡ. ಅಪಾಯದ ಅಂಚಿನಲ್ಲಿ ಓಡಾಡುತ್ತಿರುವ ವಿದ್ಯಾರ್ಥಿಗಳು. ಇದು ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದು ಹೆಸರು ಪಡೆದಿರುವ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ತರಗತಿ ಕೊಠಡಿಯ ದುಸ್ಥಿತಿ. ಇದು ಇಂದು ನಿನ್ನೆಯ ಪರಿಸ್ಥಿತಿಯಲ್ಲ. ಕಳೆದ ವರ್ಷವೇ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಇಲಾಖೆ ಪ್ರಮುಖರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಗೋಡೆಯ ಬಿರುಕಿನ ಅಂತರ ಜಾಸ್ತಿಯಾಗಿದೆ. ಇದೇ ರೀತಿ ಮಳೆ ಸುರಿದರೆ ಯಾವುದೇ ಕ್ಷಣದಲ್ಲಿ ಕಟ್ಟಡ ಕುಸಿದುಬೀಳುವ ಸಂಭವ ಎದುರಾಗಿದೆ.

Advertisement

ಜೀವ ಹಾನಿಯಾದರೆ ಹೊಣೆ ಯಾರು?
ಶಿಥಿಲಗೊಂಡಿರುವ ಕಟ್ಟಡ ಕುಸಿದುಬಿದ್ದರೆ ಶಾಲೆಯ ರಂಗಮಂದಿರ ಸಹಿತ ಇಡೀ ತರಗತಿ ಕೊಠಡಿಗಳ ಬ್ಲಾಕ್‌ ಹಾನಿಗೊಳ್ಳಲಿದೆ. ಕೊಠಡಿ ಸಮಸ್ಯೆ ಎದುರಿಸುತ್ತಿದ್ದ ಪದವಿ ಪೂರ್ವ ಕಾಲೇಜು ವಿಭಾಗದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸದ್ರಿ ತರಗತಿ ಕೊಠಡಿಯನ್ನು ಇತ್ತೀಚಿನವರೆಗೂ ಪಾಠ ಪ್ರವಚನಕ್ಕೆ ಉಪಯೋಗಿಸಲಾಗುತ್ತಿತ್ತು.

ಗೋಡೆಯ ಬಿರುಕು ಹೆಚ್ಚಾದ ಕಾರಣದಿಂದ ಇದೀಗ ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ ವಿದ್ಯಾರ್ಥಿಗಳು ಓಡಾಡುತ್ತಿರುವ ಪ್ರದೇಶವಾಗಿರುವುದರಿಂದ ಕಟ್ಟಡ ಕುಸಿದರೆ ಜೀವಹಾನಿಯಾಗುವ ಆತಂಕವೂ ಇದೆ. ಕಟ್ಟಡ ದುರಸ್ತಿಗೊಳಿಸುವ ಸ್ಥಿತಿಯಲ್ಲಿಯೂ ಇಲ್ಲ. ಆದರೆ ಪದೇ ಪದೇ ಮಾನವಿ ಮಾಡಿದರೂ ಸಂಬಂದಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ವಿದ್ಯಾರ್ಥಿಗಳ ಹೆತ್ತವರ ಆರೋಪವಾಗಿದೆ. ಮೊದಲೇ ತರಗತಿ ಕೊಠಡಿಗಳ ಸಮಸ್ಯೆ ಎದುರಿಸುತ್ತಿರುವ ಕಾಲೇಜಿನಲ್ಲಿ ಇರುವ ಕಟ್ಟಡವೂ ಕುಸಿದುಬೀಳಲು ಸಿದ್ಧವಾಗಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.


ಹೊಸ ಕಟ್ಟಡಕ್ಕೆ ಒತ್ತಡ

ಶಿಥಿಲ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಗೊಳಿಸುವ ಕುರಿತು ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರಲಾಗುವುದು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಾಯ ಸಂಭವಿಸದಂತೆ ಮುಂಜಾಗರೂಕತೆ ವಹಿಸಿ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. 
– ಪಿ.ಪಿ. ವರ್ಗೀಸ್‌, ಜಿ.ಪಂ. ಸದಸ್ಯರು, ಕಡಬ

ಗಮನ ಸೆಳೆದಿದ್ದೇವೆ
ಕಳೆದ ವರ್ಷ ಜೂನ್‌ ತಿಂಗಳಲ್ಲಿ ಈ ಕುರಿತು ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಪಾಯ ಸಂಭವಿಸದಿರಲಿ ಎಂದು ಶಿಥಿಲ ಕಟ್ಟಡದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದ್ದು, ಮೊದಲೇ ತರಗತಿ ಕೊಠಡಿಯ ಸಮಸ್ಯೆ ಎದುರಿಸುತ್ತಿರುವ ನಮಗೆ ಈಗ ಇನ್ನಷ್ಟು ತೊಂದರೆ ಎದುರಾಗಿದೆ. ಕಳೆದ ವರ್ಷ ಕಟ್ಟಡ ದುರಸ್ತಿಗೆಂದು ಇಲಾಖಾ ಎಂಜಿನಿಯರ್‌ ಮೂಲಕ 17 ಲಕ್ಷ ರೂ. ಅಂದಾಜುಪಟ್ಟಿ ಮಾಡಿ ಸರಕಾರಕ್ಕೆ ಕಳುಹಿಸಿದೆ. ಕಟ್ಟಡ ಅಪಾಯದಲ್ಲಿರುವ ಬಗ್ಗೆ ತಹಶೀಲ್ದಾರರಿಗೂ ಪತ್ರ ಬರೆದು ಗಮನ ಸೆಳೆಯಲಾಗಿದೆ.
– ಡಾ| ವೇದಾವತಿ, ಉಪ ಪ್ರಾಂಶುಪಾಲರು

Advertisement

— ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next