Advertisement

ಸಾಧಕರಿಗೆ ವೇದಿಕೆಯಾದ ಕಾಲೇಜು

01:08 PM Feb 11, 2017 | Team Udayavani |

ಹುಬ್ಬಳ್ಳಿ: ಮೂರುಸಾವಿರಮಠದ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅನೇಕರು ಇದೀಗ ಸಮಾಜದ ಅನೇಕ ಉನ್ನತ ಹುದ್ದೆಗಳಲ್ಲಿ ಅಷ್ಟೇ ಅಲ್ಲದೇ ವಿವಿಧ ಮಠಗಳಲ್ಲಿ ಮಠಾಧೀಶರು ಆಗಿದ್ದಾರೆ ಎಂದು ಅಫ‌ಜಲಪುರದ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. 

Advertisement

ಜಗದ್ಗುರು ಗಂಗಾಧರ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಇದೇ ಮಹಾವಿದ್ಯಾಲಯದಲ್ಲಿ ನಾನು ಕೂಡಾ ಅಧ್ಯಯನ ಮಾಡಿದ್ದು, ಇದೀಗ ಶ್ರೀ ಸಂಸ್ಥಾನ ಹಿರೇಮಠದ ಮಠದಲ್ಲಿ ಪೀಠಾಧಿಪತಿಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು. 

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಗುರಿ, ಹಿಂದೆ ಗುರು ಇಟ್ಟುಕೊಂಡು ಮುನ್ನಡೆಯಬೇಕು. ಅಂದಾಗ ಮಾತ್ರ ಜೀವನದಲ್ಲಿ ಅಂದುಕೊಂಡ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸಂಚರಿಸುವ ಮೂಲಕ ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದರು. 

ಸಂಸ್ಥೆಯ ಗೌರವ ಕಾರ್ಯದರ್ಶಿ ಹನುಮಂತ ಶಿಗ್ಗಾಂವ ಮಾತನಾಡಿ, ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಇತ್ತೀಚೆಗೆ ಶೌರ್ಯ ಪ್ರಶಸ್ತಿ ಪಡೆದುಕೊಂಡಿರುವ ಶಿಯಾ ಖೋಡೆ ಅವಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ ಎಂದರು. 

Advertisement

ಸಂಸ್ಥೆಯ ಹಳೇ ವಿದ್ಯಾರ್ಥಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ, ಕನೆಕ್ಟ್ ಸಂಸ್ಥೆಯ ಮಹೇಶ ಮಾಶ್ಯಾಳ, ಲಿಂಗರಾಜ ಇಂಗಳಹಳ್ಳಿ ಸೇರಿದಂತೆ ಇನ್ನಿತರರು ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಬಿ.ಎಂ. ಸಾಲಿಮಠ ಸಂಸ್ಥೆಯ 25 ವರ್ಷಗಳಲ್ಲಿ ಕಾಲೇಜು ನಡೆದು ಬಂದ ದಾರಿ ಕುರಿತು ವರದಿ ನೀಡಿದರು. ಸಂಸ್ಥೆಯಲ್ಲಿ  ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದವರನ್ನು ಹಾಗೂ ಇತ್ತೀಚೆಗೆ ಶೌರ್ಯ ಪ್ರಶಸ್ತಿ ಪಡೆದ ಶಿಯಾ ಖೋಡೆ, ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ವಿತರಿಸಲಾಯಿತು. ಕೊನೆಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. 

Advertisement

Udayavani is now on Telegram. Click here to join our channel and stay updated with the latest news.

Next