Advertisement

‘ಕನ್ನಡ ಉಳಿಸಿ ಬೆಳೆಸಲು ಸಾಹಿತ್ಯ ಕಮ್ಮಟ ಸಹಕಾರಿ’

01:40 AM Dec 18, 2018 | Team Udayavani |

ಬಂಟ್ವಾಳ: ಕನ್ನಡ ಶಾಲೆಗಳಲ್ಲಿ ಸಾಹಿತ್ಯ ಕಮ್ಮಟ ಕಾರ್ಯಕ್ರಮಗಳು ಹೆಚ್ಚು ನಡೆದರೆ ಕನ್ನಡ ಉಳಿಸಿ ಬೆಳೆಸಲು ಸಹಕಾರಿಯಾದೀತು. ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ, ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಎನ್ನುವುದಕ್ಕೆ ಸಂತೋಷವಾಗುತ್ತದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶಿವಪ್ರಕಾಶ್‌ ತಿಳಿಸಿದರು. ಅವರು ಡಿ. 16ರಂದು ನೆಟ್ಲ ಸರಕಾರಿ ಹಿ.ಪ್ರಾ. ಶಾಲೆಯ ಮಕ್ಕಳು ರಚಿಸಿದ ‘ನಿಟಿಲಾಕ್ಷರ’ ಹಾಗೂ ಕೊಡ್ಮಾನ್‌ ಸರಕಾರಿ ಹಿ.ಪ್ರಾ. ಶಾಲಾ ಮಕ್ಕಳು ರಚಿಸಿದ ‘ಗರ್ಜನೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತ ನಾಡಿದರು. ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.

Advertisement

ಸಾಹಿತ್ಯದ ಅಭಿರುಚಿ
ಸಾಮಾಜಿಕ ಸೇವಾಕರ್ತೆ ಡಾ| ಕಮಲಾ ಪ್ರ.ಭಟ್‌ ಮಾತನಾಡಿ, ಮನೆಯಿಂದಲೇ ಸಂಸ್ಕಾರದ ಜೀವನ ಆರಂಭವಾಗಬೇಕು. ತಾಯಿ ಮತ್ತು ಶಾಲಾ ಶಿಕ್ಷಕಿ ಇಬ್ಬರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕಾರಣೀಕರ್ತರಾಗುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ಸಾಹಿತ್ಯದ ಅಭಿರುಚಿ ಬೆಳೆಯಲು ಇಂತಹ ಘಟನೆಗಳು ಸ್ಫೂರ್ತಿಯಾಗಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಕೊಡ್ಮಾನ್‌ ಶಾಲಾ ಸಂಚಾಲಕ ಕೊಡ್ಮಾನ್‌ ಕಾಂತಪ್ಪ ಶೆಟ್ಟಿ, ಜಿಲ್ಲಾ  ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಕಾಸರಗೋಡು ಅಶೋಕ್‌ ಕುಮಾರ್‌, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ರಾಧಾಕೃಷ್ಣ ಭಟ್‌, ಹಿರಿಯರಾದ ರಾಮಚಂದ್ರ ಬನ್ನಿಂತಾಯ, ನೆಟ್ಲ ಶಾಲೆಯ ಮುಖ್ಯ ಶಿಕ್ಷಕಿ ಸೆಲಿನ್‌ ಪಿಂಟೋ, ಎಸ್‌.ಡಿ.ಎಂ.ಸಿ. ಅಧ್ಯಕ್ಷೆ ಚಂದ್ರಿಕಾ ದೇವಾಡಿಗ, ಉಪಾಧ್ಯಕ್ಷೆ ಆಶಾ ಜೈದೇವ್‌, ಕಾರ್ಯದರ್ಶಿ ಅನುಪಮಾ, ಸಹಕಾರ್ಯದರ್ಶಿ ಮಣಿಶಂಕರ್‌, ಖಜಾಂಚಿ ಉಮಾ ಪಾಲಾಕ್ಷಪ್ಪ, ಸಂಘಟನ ಕಾರ್ಯದರ್ಶಿ ನಿರ್ಮಲಾ ಚಂದ್ರಶೇಖರ್‌, ಸಾಂಸ್ಕೃತಿಕ ಕಾರ್ಯದರ್ಶಿ ಜಯಶ್ರೀ ಮಂಜುನಾಥ್‌, ಕ್ರೀಡಾ ಕಾರ್ಯದರ್ಶಿ ಸವಿತಾ ಬಾಗೇವಾಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಮ್ಮಾನ
ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿದ ಡಾ| ನಾಗವೇಣಿ ಮಂಚಿ, ಜಿಲ್ಲಾ ಮಟ್ಟದ ನೃತ್ಯ ಪಟು ವಿಶೇಷ ಚೇತನ ವಿದ್ಯಾರ್ಥಿ ಮಾ| ಕೌಶಿಕ್‌ ಅವರನ್ನು ಸಮ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸುಮಂಗಲಾ ಕಲಾ ತಂಡದ ವತಿಯಿಂದ ವಚನಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೂ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು. ಮಂಗಳೂರು ಅಕ್ಕ ಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್‌ ಮಾನ್ವಿ ಪ್ರಸ್ತಾವಿಕವಾಗಿ ಮಾತನಾಡಿದರು. ಆಶಾ ಜೈದೇವ್‌ ಸ್ವಾಗತಿಸಿದರು. ಸವಿತಾ ಬಾಗೇವಾಡಿ ವಂದಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.

Advertisement

ಶಿಕ್ಷ‌ಣದಿಂದ ಜೀವನ ಸುಲಭ
ಗುಣಮಟ್ಟದ ಮೌಲ್ಯಗಳನ್ನು ಹೊಂದಿರುವ ಸಂಸ್ಕಾರ ಶಿಕ್ಷಣದಿಂದ ಮಾತ್ರ ಮುಂದಿನ ಜೀವನ ಸುಲಭ ಸಾಧ್ಯ. ಅದು ಕನ್ನಡ ಮಾಧ್ಯಮ ಶಾಲೆಗಳಿಂದ ಸಿಗುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಾಯಕವಾಗಿವೆ. ಸಾರ್ಥಕ ಕಾರ್ಯವಾಗಿ ಮೂಡಿಬಂದಿದೆ. 
– ಎನ್‌. ಶಿವಪ್ರಕಾಶ್‌, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next