ಕೆ.ಆರ್.ಪೇಟೆ: ಸರ್ಕಾರಿ ಶಾಲೆಯ ಉಳಿವಿಗಾಗಿ ಗ್ರಾಮಸ್ಥರೇ 1.50 ಕೋಟಿ ರೂ. ಸಂಗ್ರಹಿಸಿ ನೂತನ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಇತರೆ ಗ್ರಾಮಗಳಿಗೂ ಮಾದರಿಯಾಗಿದೆ ಎಂದು ಶಾಸಕ ನಾರಾಯಣಗೌಡ ಪ್ರಶಂಸಿಸಿದರು.
ತಾಲೂಕಿನ ರಾಯಸಮುದ್ರ ಗ್ರಾಮದ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ಒಂದೂವರೆ ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸು ತ್ತಿರುವ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ತ್ಯಜಿಸಿ ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸುವ ಜೊತೆಗೆ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಹೇಳಿದರು.
ಉಚಿತ ಗುಣಮಟ್ಟದ ಶಿಕ್ಷಣ: ಸರ್ಕಾರಿ ಶಾಲೆಗಳ ಕಟ್ಟಡದ ಕೊರತೆಗೆ, ಶಿಕ್ಷಕರ ಸಮಸ್ಯೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿವೆ. ಆಂಗ್ಲಭಾಷೆಯ ಮೇಲಿನ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಇಂದಿನ ದಿನಮಾನದಲ್ಲಿ ರಾಯಸಮುದ್ರ ಗ್ರಾಮಸ್ಥರೆಲ್ಲರೂ ಗ್ರಾಮದ ಸರ್ಕಾರಿ ಶಾಲೆಯ ಬಲವರ್ಧನೆಗೆ ಮುಂದಾಗಿ ನರ್ಸರಿ, ಆಂಗ್ಲಮಾಧ್ಯಮ ತರಗತಿ ಒಳಗೊಂಡಿರುವ ಮಕ್ಕಳ ಮನೆ ಶಾಲೆ ತೆರೆಯುತ್ತಿರುವುದು ಸ್ವಾಗತಾರ್ಹ ಕ್ರಮ. ಜೊತೆಗೆ ವರ್ಷದೊಳಗಾಗಿ ಅತ್ಯಾಧುನಿಕ ಶಾಲಾ ಕಟ್ಟಡ ನಿರ್ಮಿಸಿ ಗ್ರಾಮೀಣಬಡ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಬಾಗಿಲು ಮುಚ್ಚದಂತೆ ತಡೆಯಬೇಕು ಎಂದು ನಿಂತಿರುವ ಗ್ರಾಮದ ಎಲ್ಲಾ ವಿದ್ಯಾವಂತ ಯುವಜನರಿಗೆ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಧನ್ಯವಾದವನ್ನು ಸಮರ್ಪಿಸಿದ ಶಾಸಕರು ದಾನಿಗಳ ನೆರನಿಂದ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಶಾಲೆಯ ಕಟ್ಟಡಕ್ಕೆ ತಾವೂ ತಮ್ಮ ಕೈಲಾದ ಸಹಾಯವನ್ನು ದೊರಕಿಸಿಕೊಡುವ ಜೊತೆಗೆ ಸರ್ಕಾರದ ಅನುದಾನವನ್ನು ಕೊಡಿಸಿಕೊಡುವುದಾಗಿ ತಿಳಿಸಿ,
ಪಿಎಸ್‌ಐ ಮಂಜೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳು ಬಲವರ್ಧನೆಗೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರು 1.50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲೇ ಮಾದರಿ ಶಾಲಾಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಮಕ್ಕಳ ಶಿಕ್ಷಣದ ಅಭಿವೃದ್ಧಿ ವಿಷಯದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಈ ರೀತಿಯ ಬೆಳವಣಿಗೆಗಳನ್ನು ಶಾಲೆಗಳಲ್ಲಿ ಅಳವಡಿಸಿಕೊಂಡಾಗ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನೇ ಬುಡ ಸಮೇತ ಕಿತ್ತುಹಾಕಿ ಮಕ್ಕಳಿಗೆ ಉಚಿತವಾಗಿಯೇ ಗುಣಮಟ್ಟದ ಶಿಕ್ಷಣ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು, ತಹಶೀಲ್ದಾರ್ ಶಿವಮೂರ್ತಿ, ಬಿಇಒ ರೇವಣ್ಣ, ಪ್ರಾಂಶುಪಾಲ ಪದ್ಮನಾಭ, ಶಾಲೆಯ ಮುಖ್ಯಶಿಕ್ಷಕ ಕೃಷ್ಣಯ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.