ಕಲಬುರಗಿ: ಸಿದ್ದಗಂಗಾ ಮಠದ ಹೆಸರಿನಲ್ಲಿ ಕೆಲ ಕಿಡಿಗೆಡಿಗಳು ದೇಣಿಗೆ ವಸೂಲಿ ಮಾಡುವ ಮೂಲಕ ಮಠದ ಗೌರವ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಹಾಗೂ ಕಾರ್ಯದರ್ಶಿ ದೇವೆಂದ್ರಪ್ಪ ಆವಂಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಿಧ ದಾಸೋಹದ ಮೂಲಕ ತುಮಕೂರಿನ ಸಿದ್ದಗಂಗಾ ಮಠ ಜಗತ್ತಿಗೆ ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅಂತಹ ಪವಿತ್ರ ಮಠದ ಹೆಸರನ್ನು ಕೆಲ ಕಿಡಿಗೆಡಿಗಳು ಕೆಟ್ಟ ಹೆಸರು ತರುವ ಹುನ್ನಾರ ನಡೆಸಿದ್ದಾರೆ. ಇದು ಮಠದ ವಿದ್ಯಾರ್ಥಿಗಳಿಗೆ ಬೇಸರ ಉಂಟು ಮಾಡಿದೆ ಎಂದು ಹೇಳಿದ ಅವರು, ಮಠದ ಹೆಸರಿನಲ್ಲಿ ಯಾರಾದರೂ ದೇಣಿಗೆ ಕೇಳಿದರೆ ಯಾವುದೇ ಕಾರಣಕ್ಕೂ ಭಕ್ತರು ನೀಡಬಾರದು, ಅಷ್ಟಕೂ ಮಠಕ್ಕೆ ಸೇವೆ ಸಲ್ಲಿಸುವ ಸದುದ್ದೇಶ ಹೊಂದಿದ್ದರೆ ನೇರವಾಗಿ ಮಠಕ್ಕೆ ಸಂಪರ್ಕಿಸಿ, ಬ್ಯಾಂಕ್ ಖಾತೆಗೆ ದೇಣಿಗೆ ನೀಡಬಹುದು ಎಂದು ತಿಳಿಸಿದರು.
ಶ್ರೀ ಮಠದಿಂದ ಬಂಜೆತನಕ್ಕೆ ಔಷಧಿಗಾಗಿ ದೇಣಿಗೆ ಸಂಗ್ರಹಕ್ಕಾಗಿ ನಮ್ಮನ್ನು ನೇಮಿಸಿದ್ದಾರೆಂದು ಹೇಳಿಕೊಂಡು ವಸೂಲಿ ನಡೆಸಿದ್ದಾರೆ. ಶ್ರೀ ಮಠ ಎಂದೂ ದೇಣಿಗೆ ನೀಡಿ ಎಂದು ಹೋಗುವುದಿಲ್ಲ. ಮತ್ತು ಯಾರನ್ನೂ ನೇಮಿಸಿಲ್ಲ ಎಂದು ಅರುಣಕುಮಾರ ಪಾಟೀಲ ಸ್ಪಷ್ಟಪಡಿಸಿದರು.
ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಶಿವಕುಮಾರ ಸ್ವಾಮಿಗಳ ಮೂರ್ತಿ ಧ್ವಂಸ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಿದ್ದಗಂಗಾ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಮುಖಂಡರಾದ ಕಲ್ಯಾಣರಾವ್ ಪಾಟೀಲ್, ಚನ್ನಬಸಯ್ಯ ಗುರುವಿನ, ಶ್ರೀಶೈಲ್ ಘೂಳಿ ಅಶೋಕ ರಟಕಲ್ ರುದ್ರಮುನಿ ಪುರಾಣಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು.