Advertisement

Belagavi: ತೀವ್ರಗೊಂಡ ಮೀಸಲಾತಿ ಹೋರಾಟ; ಸುವರ್ಣಸೌಧ ಮುತ್ತಿಗೆಗೆ ಹೊರಟ ಪಂಚಮಸಾಲಿಗಳು

02:50 PM Dec 10, 2024 | Team Udayavani |

ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪಗುಡ್ಡದಲ್ಲಿ ಬಳಿ ಪಂಚಮಸಾಲಿ ಸಂಘರ್ಷ ಸಮಾವೇಶದಲ್ಲಿ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಕ್ಕೆ‌ ಪ್ರತಿಭಟನಾನಿರತರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

Advertisement

ಕೊಂಡಸಕೊಪ್ಪ‌ ಗ್ರಾಮದ ಪ್ರತಿಭಟನಾ ಸ್ಥಳದಿಂದ ಪಂಚಮಸಾಲಿ ಸಮುದಾಯದ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸುವರ್ಣಸೌಧದ ಬಳಿ‌ ಹೊರಟಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪೊಲೀಸರ ಭದ್ರತೆಯನ್ನು ಮೀರಿ ಪ್ರತಿಭಟನಾಕಾರರು ಸೌಧದ ಕಡೆಗೆ ರ್ಯಾಲಿ ನಡೆಸುತ್ತಿದ್ದಾರೆ.

ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮುತ್ತಿಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯ ಪಂಚಮಸಾಲಿಗಳು ವಕೀಲರ ಮುಂದಾಳತ್ವದಲ್ಲಿ ಮುಂದೆ ಸಾಗುತ್ತಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ.

ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಪ್ರತಿಭಟನಾ ವೇದಿಕೆಗೆ ಆಗಮಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ.ವಿಜಯೇಂದ್ರ ಕೂಡ ಆಗಮಿಸಿ ಪಂಚಮಸಾಲಿ ಸಮಾವೇಶಕ್ಕೆ ಬೆಂಬಲ ಸೂಚಿಸಿದರು. ಮಾಜಿ ಸಚಿವ‌ ಸಿ.ಸಿ.ಪಾಟೀಲ, ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ಸಿದ್ದು ಸವದಿ ಸೇರಿ ಮತ್ತಿತರರು ಈ ವೇಳೆ ಇದ್ದರು.

Advertisement

ಬಳಿಕ ವಿಜಯೇಂದ್ರ ಅಲ್ಲಿಂದ ಸುವರ್ಣ ವಿಧಾನಸೌಧಕ್ಕೆ ತೆರಳಿದರು. ಇದಕ್ಕೂ ಮೊದಲು ವಿಜಯೇಂದ್ರ ವಿರುದ್ಧ ಯತ್ನಾಳ ಬೆಂಬಲಿಗರು ಧಿಕ್ಕಾರದ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಸಿದ್ದು ಸವದಿ ಧಿಕ್ಕಾರ ಕೂಗಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಮಾವೇಶದ ಆರಂಭಕ್ಕೂ ಮೊದಲು ಅಗಲಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಾವೇಶದ ನಂತರ ಮುಂದೆ ಯಾವ ರೀತಿಯ ಹೋರಾಟಕ್ಕೆ ಪಂಚಮಸಾಲಿ ಸಮುದಾಯ ಮುಂದಾಗುತ್ತದೆ ಎಂದು ಕಾದು ನೋಡಬೇಕಿದೆ.

ಹಿರೇಬಾಗೇವಾಡಿಯಲ್ಲಿ ಮುಖಂಡರು ವಶಕ್ಕೆ: ನಿಷೇಧದ ನಡುವೆಯೂ ಟ್ರ್ಯಾಕ್ಟರ್ ಮೂಲಕ ಸಮಾವೇಶಕ್ಕೆ ಬರುತ್ತಿದ್ದ 50ಕ್ಕೂ ಅಧಿಕ ಪಂಚಮಸಾಲಿ ಮುಖಂಡರನ್ನು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ರ್ಯಾಕ್ಟರ್ ರ್ಯಾಲಿಗೆ ಅನುಮತಿ‌ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಹೋರಾಟಗಾರರನ್ನು ತಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next