ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟ ಸಂವಿಧಾನ ವಿರೋಧಿ ಎಂದು ಹೇಳುವ ಮೂಲಕ ಇಡೀ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.
ಅಧಿವೇಶನದಲ್ಲಿ ಮಾತನಾಡುವಾಗ ಮುಖ್ಯಮಂತ್ರಿಗಳು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವದು ಅಸಂವಿಧಾನಿಕ. ಅವರ ಹೋರಾಟ ಸಂವಿಧಾನ ವಿರೋಧಿ ಎಂದು ಹೇಳಿ ಅವಮಾನ ಮಾಡಿದ್ದಾರೆ. ನಮ್ಮ ಹೋರಾಟ ಅಸಂವಿಧಾನಿಕವಾಗಿದ್ದರೆ ನಿಮ್ಮ ಸರ್ಕಾರದ ಮಂತ್ರಿಗಳು ಹಾಗೂ ಶಾಸಕರು ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದರು. ನಿಮಗೆ ಧೈರ್ಯವಿದ್ದರೆ ಈ ಸಚಿವರು ಮತ್ತು ಶಾಸಕರನ್ನು ವಜಾ ಮಾಡಿ ಎಂದು ಶ್ರೀಗಳು ಸವಾಲು ಹಾಕಿದರು.
ನಮ್ಮ ಹೋರಾಟ ಸಂವಿಧಾನ ವಿರೋಧಿಯಾಗಿದ್ದರೆ ನಮ್ಮನ್ನು ಮಾತುಕತೆಗೆ ಕರೆದಿದ್ದು ಯಾಕೆ? ನಮ್ಮ ಜೊತೆಗೆ ಸಭೆ ಮಾಡಿರುವದು ಯಾಕೆ ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿಗಳಿಗೆ ನಮ್ಮ ಸಮಾಜದ ಬಗ್ಗೆ ಕಳಕಳಿಯಿಲ್ಲ. ಬದಲಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ನಮ್ಮನ್ನು ಹೊಡೆದರು. ನಮಗೆ ಅವಮಾನ ಮಾಡಿದರು. ಆದರೆ ಇದರಿಂದ ನಾವು ಬೆದರುವದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಶಾಂತಿಯುತ ಹೋರಾಟ ಮಾಡಿಕೊಂಡು ಬಂದಿದ್ದೆವು. ಈಗ ಚನ್ನಮ್ಮನ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ನಮ್ಮ ಹೋರಾಟ ಕ್ರಾಂತಿಯುತವಾಗಿ ಆರಂಭವಾಗಲಿದೆ ಎಂದರು.
ಲಿಂಗಾಯತ ಪಂಚಮಸಾಲಿ ಮೀಸಲಾತಿ ಕ್ರಾಂತಿ ಹೋರಾಟವಾಗಿ ಬದಲಾವಣೆಯಾಗಿದೆ. ನಮ್ಮನ್ನು ಕ್ರಾಂತಿ ಮಾಡಲು ಸರಕಾರವೇ ಬಡಿದೆಬ್ಬಿಸಿದೆ. ನಮ್ಮ ಸಮಾಜವನ್ನು ಅವಮಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು ಕ್ಷಮೆಯಾಚಿಸಬೇಕು ಎಂದು ಕೂಡಲಸಂಗಮ ಗುರು ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.