ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದ ಸುಮಾರು 2 ಕೋಟಿ ರೂ. ಗಳಿಗೆ ಸಂಬಂಧಿಸಿದಂತೆ ಬಿಜೆಪಿ ಕರ್ನಾಟಕ ಹಾಗೂ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯನಿರ್ವಹಕ ಎಂಜಿನಿಯರ್‌ನಿಂದ ಹಣ ಸಿಕ್ಕಿರುವುದಕ್ಕಾಗಿ ನೇರವಾಗಿ ಕಮಿಷನ್ ಸರ್ಕಾರ ಎಂದು ಆರೋಪಿಸಿ, “ಕಲೆಕ್ಷನ್‌ಫಾರ್‌ಎಲೆಕ್ಷನ್’ ಎಂದು ಟ್ಯಾಗ್‌ಲೈನ್ ಮೂಲಕ ಬಿಜೆಪಿಗರು ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯ ಕಾಲೆಳೆದಿದ್ದಾರೆ.
ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ, “ರಾಹುಲ್ ಗಾಂಧಿ ಹೆಮ್ಮೆಯ ವ್ಯಕ್ತಿಯಾಗಿರಬೇಕು. ಕಳೆದ ಸರ್ಕಾರ ಶೇ.10ರಷ್ಟು ಕಮಿಷನ್ ಸರ್ಕಾರ ಆಗಿತ್ತು. ಹೊಸ ಮುಖ್ಯಮಂತ್ರಿ ಅದನ್ನು ಶೇ.20ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಕಾಂಗ್ರೆಸ್‌ಗೆ ಕ್ಲರ್ಕ್ ಆಗಿ ಸೇವೆ ಸಲ್ಲಿಸುವೆ ಎಂದು ಮುಖ್ಯಮಂತ್ರಿ ಹೇಳಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಕ್ಲರ್ಕ್ ಇದನ್ನು ವ್ಯಾಪಕವಾಗಿ ಮಾಡುತ್ತಾರೆ’ ಎಂದು ಟೀಕಿಸಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, “ರಾಹುಲ್ ಗಾಂಧಿ ಮತ್ತು ಕುಮಾರಸ್ವಾಮಿ ಸಾಮ್ರಾಜ್ಯದ ನವೀನ ವಿಧಾನದ ಕಾರ್ಯಚರಣೆ- ಗುತ್ತಿಗೆದಾರರಿಗೆ ಟೆಂಡರ್ ಹಂಚಿಕೆ ಮಾಡುವುದು, ನಂತರ ಅವರಿಂದ ಕಮಿಷನ್ ಸಂಗ್ರಹಿಸುವುದು. ನರೇಂದ್ರ ಮೋದಿಯವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಮತ್ತು ಇವರ ತಪ್ಪುಗಳಿಗೆ ನರೇಂದ್ರ ಮೋದಿಯವರನ್ನು ದೂರುವುದು, ಚುನಾವಣೆ ಸಂದರ್ಭದಲ್ಲಿ ಜನರನ್ನು ಮೂರ್ಖರನ್ನಾಗಿಸಲು ಮೊಸಳೆ ಕಣ್ಣೀರಿಡುವುದು’ ಎಂದು ಟ್ವೀಟ್ ಮಾಡಿದ್ದಾರೆ.
“ರಾಜ್ಯ ಸರ್ಕಾರವು ಕಲೆಕ್ಷನ್‌ಫಾರ್‌ಎಲೆಕ್ಷನ್ ಎಂದಾದರೆ ರಾಜ್ಯ ಅಭಿವೃದ್ಧಿ ಹೊಂದುವುದು ಹೇಗೆ ಮತ್ತು ಯೋಜನೆಗಳ ಅನುಷ್ಠಾನ ಹೇಗಾಗುತ್ತೆ?’ ಎಂದು ಶಾಸಕ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ. ಮಾಳವಿಕ ಅವಿನಾಶ್ ಟ್ವೀಟ್ ಮಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರ ಶೇ.10ರಲ್ಲೇ ಖುಷಿಯಾಗಿತ್ತು.
ಜೆಡಿಎಸ್ ಈಗ ಅದಕ್ಕೆ ಶೇ.20ರಷ್ಟು ಸೇರಿಸಿದೆ. ಯೋಚಿಸಿ… ಮುಂದೆ ಇದು ಮಹಾ ಘಟಬಂಧನ್ ಆದರೆ?’ ಎಂದಿದ್ದಾರೆ. ಹಾಗೇ ಬಿಜೆಪಿಯ ಬಹುತೇಕ ಕೇಂದ್ರ ಹಾಗೂ ರಾಜ್ಯದ ನಾಯಕರು ಬಿಜೆಪಿ ಕರ್ನಾಟಕದ ಟ್ವೀಟ್‌ಗೆ ರೀಟ್ವೀಟ್ ಮಾಡಿದ್ದಾರೆ.