Advertisement

ಭರದಿಂದ ಸಾಗಿದೆ ರೈತರಿಂದ ಮಾಹಿತಿ ಸಂಗ್ರಹಿಸುವ ಕಾರ್ಯ

01:08 PM Jul 23, 2019 | Team Udayavani |

ಸುರಪುರ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಪ್ರತಿಶತ ಗುರಿ ತಲುಪಲು ಜಿಲ್ಲಾಡಳಿತ ಸಭೆ ನಡೆಸಿ ಖಡಕ್‌ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ಅನುಷ್ಠಾನ ಅಧಿಕಾರಿಗಳು ಹಗಲಿರಳು ಶ್ರಮಿಸಿ ಶೇ. 94 ಗುರಿ ಸಾಧಿಸಿದ್ದಾರೆ.

Advertisement

ತಾಲೂಕಿನಲ್ಲಿ 88, 817 ಹಾಗೂ ಹುಣಸಗಿ ತಾಲೂಕಿನ 65,579 ಸೇರಿ ಒಟ್ಟು 1,54,396 ರೈತ ಕುಟುಂಬಗಳನ್ನು ಯೋಜನೆಗೆ ಗುರಿತಿಸಲಾಗಿತ್ತು. ಈ ಪೈಕಿ ಸುರಪುರ 56,468 ಹಾಗೂ ಹುಣಸಗಿಯಲ್ಲಿ 40,262 ಎನ್‌ಎ, ಗೈರಾಣ, ವೈದ್ಯರು, ವಕೀಲರು, ಪಿಂಚಣಿದಾರರು ಸೇರಿದಂತೆ ಒಟ್ಟು 96,730 ಯೋಜನೆಗೆ ಒಳಪಡದ ಅನರ್ಹ ಕುಟುಂಬಗಳೆಂದು ಗುರುತಿಸಲಾಗಿದೆ.

ಕಳೆದ ಒಂದು ತಿಂಗಳಿಂದ ನಡೆದಿದ್ದ ಅಭಿಯಾನದಲ್ಲಿ ಎರಡು ತಾಲೂಕಿನ ರೈತರನ್ನು ಯೋಜನೆಗೆ ಒಳಪಡಿಸಲು ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲಾಡಳಿತ ನೀಡಿದ್ದ ಜು. 10ರ ಗಡುವಿನವರೆಗೆ ತಾಲೂಕಾಡಳಿತ ಹೇಳಿಕೊಳ್ಳುವ ಮಟ್ಟಿಗೆ ಪ್ರಗತಿ ಸಾಧಿಸಿರಲಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮೇಲಿಂದ ಮೇಲೆ ಸಭೆ ನಡೆಸಿ ತಾಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಿತ್ತು. ಗುರಿ ತಲುಪದವರ ತಲೆ ದಂಡ ಕುರಿತು ಎಚ್ಚರಿಕೆ ನೀಡಿ ಪ್ರತಿಶತ ತಲುಪಲು ವಾರದ ಗಡುವು ನೀಡಿ ಖಡಕ್ಕಾಗಿ ತಾಕೀತು ಮಾಡಿತ್ತು. ಜಿಲ್ಲಾಧಿಕಾರಿಗಳ ಕಟ್ಟಪ್ಪಣೆಯಿಂದ ಎಚ್ಚೆತ್ತುಕೊಂಡ ತಾಲೂಕಾಡಳಿತ ಶತಾಯಗತಾಯ ಪ್ರಯತ್ನ ಪಟ್ಟು ಶೇ. 94 ರಷ್ಟು ಸಾಧನೆ ಮಾಡಿದೆ.

ಮಾಹಿತಿ ಸಂಗ್ರಹ: ಯೋಜನೆಗೆ ಒಳಪಡಿಸಲು ತಾಲೂಕಿನಲ್ಲಿ 32,346 ( ಶೇ. 86) ಹಾಗೂ ಹುಣಸಗಿ ತಾಲೂಕಿನಿಂದ 25,317( ಶೇ. 93) ರೈತರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಪ್ರತಿಶತ ಗುರಿ ತಲುಪಲು ರೈತರ ಮಾಹಿತಿ ಸಂಗ್ರಹ ಕಾರ್ಯ ಭರದಿಂದ ಸಾಗಿದೆ.

ಬಹಿರಂಗ ಕಾರ್ಯಕ್ರಮ: ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ಯಾವೊಬ್ಬ ರೈತ ವಂಚನೆಯಾಗರಬಾರದೆಂದು ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ತಾಲೂಕಾಡಳಿತ ಡಂಗುರ ಸಾರವುದು, ಬೆಳೆಗ್ಗೆ 8:00 ಗಂಟೆಯೊಳಗೆ ಮನೆ ಮನೆ ಭೇಟಿ, ಬಸ್‌ ನಿಲ್ದಾಣ, ದೇವಸ್ಥಾನ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಕುಳಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.

Advertisement

ಉತ್ತಮ ಪ್ರತಿಕ್ರಿಯೆ: ರೈತರಿಂದ ಕಿಸಾನ್‌ ಸಮ್ಮಾನ್‌ ಯೋಜನೆಗೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರೈತರು ಅಧಿಕಾರಿಗಳಿಗೆ ಆಧಾರ್‌, ಬ್ಯಾಂಕ್‌ ಪಾಸ್‌ಬುಕ್‌, ಪಹಣಿ ಹಿಡಿದು ಸರದಿ ಸಾಲಿನಲ್ಲಿ ನಿಂತು ದಾಖಲಾತಿಗಳನ್ನು ನೀಡಿ ಘೋಷವಾರು ಪ್ರಮಾಣ ನೀಡುತ್ತಿರುವುದು ಕಂಡು ಬರುತ್ತಿದೆ.

ದಾಖಲೆ ಸಲ್ಲಿಸುವಿಕೆ: ಈ ಯೋಜನೆಯ ಲಾಭ ಕುಟುಂಬದ ಒಬ್ಬರು ಮಾತ್ರ ಅರ್ಹರಾಗುತ್ತಾರೆ. ಜಂಟಿ ಖಾತೆ ಹೊಂದಿದ್ದ ಪಕ್ಷದಲ್ಲಿ ಎಲ್ಲರೂ ಯೋಜನೆಗೆ ಅರ್ಹರು. ಹೀಗಾಗಿ ಯೋಜನೆ ಲಾಭ ಪಡೆದುಕೊಳ್ಳಲು ಸರಕಾರ ಕೇಳಿರುವ ದಾಖಲಾತಿಗಳನ್ನು ಗ್ರಾಮವಾರು ರೈತರು ಗ್ರಾಪಂ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಕಾರ್ಯದರ್ಶಿ, ಗ್ರಾಮ ಲೆಕ್ಕಿಗ, ಕೃಷಿ ಇಲಾಖೆ ಅಧಿಕಾರಿಗಳಿಗೆ ನೀಡುವುದು ಕಡ್ಡಾಯವಾಗಿದೆ.

ಜಿಲ್ಲಾಡಳಿತದ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ಹಗಲಿರಳು ಕೆಲಸ ಮಾಡಿ ಪ್ರತಿಶತ ಗುರಿ ತಲುಪಲು ಪ್ರಯತ್ನ ಮಾಡಿದ್ದೇವೆ. ಶೇ. 94 ಗುರಿ ತಲುಪಿದ್ದು, ಸಂತಸ ತಂದಿದೆ. ಇನ್ನುಳಿದಿದ್ದ ರೈತರ ಮಾಹಿತಿಯನ್ನು ಶೀಘ್ರವೇ ಸಂಗ್ರಹಿಸಿ ಪ್ರತಿಶತ ಗುರಿ ತಲುಪುತ್ತೇವೆ. •ಸುರೇಶ ಅಂಕಲಗಿ, ತಹಶೀಲ್ದಾರ್‌ ಸುರಪುರ

ತಾಲೂಕಿನ ಅರ್ಹ ರೈತರನ್ನು ಕಿಸಾನ್‌ ಸಮ್ಮಾನ್‌ ಯೋಜನೆಗೆ ಒಳಪಡಿಸಲು ಅಧಿಕಾರಿ ವರ್ಗ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಇನ್ನು ಮಾಹಿತಿ ನೀಡದ ರೈತರು ತ್ವರಿತವಾಗಿ ಮಾಹಿತಿ ನೀಡಿ ಯೋಜನೆಯ ಲಾಭ ಪಡೆದುಕೊಳ್ಳಬೇಕು. •ದಾನಪ್ಪ ಕತ್ನಳ್ಳಿ, ಸಹಾಯಕ ಕೃಷಿ ನಿರ್ದೇಶಕರು, ಸುರಪುರ
ಯೋಜನೆಗೆ ರೈತರು ಉತ್ತಮವಾಗಿ ಸಹಕರಿಸಿದ್ದಾರೆ. ರೈತರ ಕುಟುಂಬಗಳ ಸಂಖ್ಯೆ ಗುರುತಿಸುವಲ್ಲಿ ಲೋಪದೋಷ ಉಂಟಾಗಿತ್ತು. ಜಿಲ್ಲಾಧಿಕಾರಿ ನಿರ್ದೇಶನದಂತೆ ಅನರ್ಹ ಕುಟುಂಬಗಳನ್ನು ತೆಗೆದು ಹಾಕಿರುವುದರಿಂದ ಯೋಜನೆ ಗುರಿ ತಲುಪಲು ಸಾಧ್ಯವಾಗಿದೆ. •ಜಗದೇವಪ್ಪ, ತಾಪಂ ಇಒ
•ಸಿದ್ದಯ್ಯ ಪಾಟೀಲ
Advertisement

Udayavani is now on Telegram. Click here to join our channel and stay updated with the latest news.

Next